ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿರುವುದನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಭಾಜಪ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯಂದ್ರ ಹಾಗೂ ಬಿ ಎಸ್ ಯಡಿಯೂರಪ್ಪ ಅವರಿಗೆ ಧಿಕ್ಕಾರ ಯತ್ನಾಳರ ಉಚ್ಛಾಟನೆ ಆದೇಶವನ್ನು ಮರಳಿ ಪಡೆಯಬೇಕು ಎಂದು ಘೋಷಣೆ ಕೂಗಿದ ಮುಖಂಡರು ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರಗೆ ಬೆಂಕಿ ಹಚ್ಚಿಕೆಲ ಹೊತ್ತು ರಸ್ತೆ ಸಂಚಾರ ಬಂದ್ ಮಾಡಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ ಮಾತನಾಡಿ, ಬಿ. ಎಸ್ .ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರನ ಪಿತ್ತೂರಿಯಿಂದಾಗಿ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಗಂಭೀರ ಆರೋಪ ಮಾಡಿದರು. ತಮ್ಮ ಗಟ್ಟಿ ಧ್ವನಿಯ ಮೂಲಕ ರಾಜ್ಯ ಬಿಜೆಪಿಯಲ್ಲಿ ಯತ್ನಾಳ ಹಿಂದು ಫೈರ್ ಬ್ರ್ಯಾಂಡ್ ಆಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರನ್ನು ಬಿಜಿಪಿ ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಇಡೀ ಹಿಂದು ಸಮಾಜಕ್ಕೆ ಅವಮಾನಿಸಿದಂತಾಗಿದೆ. ಯತ್ನಾಳ ಅವರ ಹಿಂದೆ ಪಂಚಮಸಾಲಿ ಸಮಾಜ ಹಾಗೂ ಅವರ ಅಭಿಮಾನಿಗಳ ದೊಡ್ಡ ಬಳಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇದೆ. ಅದಕ್ಕೆ ಮುಂದಿನ ದಿನಮಾನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಿತ್ತೂರರಾಣಿ ಚನ್ನಮ್ಮ ಸಂಘಟನೆಯ ನಾಯಕಿ ಲಕ್ಷ್ಮಿಬಾಯಿ ಪಾಟೀಲ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳರು ಒಂದು ಸಮಾಜಕ್ಕೆ ಸೀಮಿತವಾಗದೆ ಇಡೀ ಹಿಂದು ಸಮಾಜಕ್ಕೆ ಅವರು ಒಂದು ಶಕ್ತಿ ಇದ್ದ ಹಾಗೆ. ಹಿಂದುತ್ವ ಹಾಗೂ ಅನ್ಯಾಯದ ವಿರುದ್ದ ಹೋರಾಟ ನಡೆಸಿದ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಧ್ವನಿ ಎತ್ತಿದಕ್ಕಾಗಿ ಬಿ. ಎಸ್. ಯಡಿಯೂರಪ್ಪನವರ ಕುತಂತ್ರ ರಾಜಕಾರಣದಿಂದ ಯತ್ನಾಳ ಅವರನ್ನು ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಗದೀಶ ಕೊಟ್ರಶೆಟ್ಟಿ, ಬಸಣ್ಣ ದೇಸಾಯಿ, ರವಿ ಪಟ್ಟಣಶೆಟ್ಟಿ, ಸಂಜು ಬಿರಾದಾರ, ಅಶೋಕ ಗುಳೇದ ಸಂಗಪ್ಪ ವಾಡೆದ, ಮಂಜುನಾಥ ಜಾಲಗೇರಿ, ಬಾಬು ನಿಡಗುಂದಿ, ಸಂಗಮೇಶ ಜಾಲಗೇರಿ, ಅಪ್ಪು ಗಬ್ಬೂರ, ಪರಶುರಾಮ ಗಬ್ಬೂರ, ಮಾಂತೇಶ ಹೆಬ್ಬಾಳ, ಮಹಾದೇವ ನಾಯ್ಕೋಡಿ, ಮುದುಕು ಪಡಶೆಟ್ಟಿ, ಸಂಗಪ್ಪ ಕ್ವಾಟಿ, ಅರುಣ ಗೊಳಸಂಗಿ, ಶ್ರೀಕಾಂತ ಕೊಟ್ರಶೆಟ್ಟಿ, ಸೇರಿದಂತೆ ಅನೇಕರು ಇದ್ದರು.