ಹಿಂದು-ಮುಸ್ಲಿಂ ಸಮಾಜದ ಧರ್ಮಗುರುಗಳ ಸಮ್ಮುಖದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದ ಕುಟುಂಬಗಳಿಗೆ ದಿನಸಿ ಮತ್ತು ನಗದು ಸಹಾಯ
ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ೩೦ ಫೂಟಿನ ರಸ್ತೆ. ಅಲ್ಲಿ ಚಿಕ್ಕದೊಂದು ಪೆಂಡಾಲ್. ಎದುರಿಗೆ ವೇದಿಕೆ. ವೇದಿಕೆಯ ಸಾನಿಧ್ಯ ವಹಿಸಿಕೊಂಡವರು ಹಿಂದು-ಮುಸ್ಲಿಂ ಸಮಾಜದ ಸ್ವಾಮೀಜಿಗಳು. ಅತಿಥಿಗಳಾಗಿದ್ದವರಲ್ಲೊಬ್ಬರು ವಕೀಲರು ಮತ್ತು ಇನ್ನೀತರರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯ ವ್ಯಕ್ತಿಗಳು. ಮುಂಭಾಗದಲ್ಲಿ ಅಂದಾಜು ೬೦೦ ಕ್ಕೂ ಹೆಚ್ಚು ಜನ ಬಡ ಮುಸ್ಲಿಂ ಸಮಾಜದ ಮಹಿಳೆಯರು. ಅಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು ಪವಿತ್ರ ರಂಜಾನ ಹಬ್ಬ.
ಇಂಥದ್ದೊಂದು ಸೌಹಾರ್ಧಯುತ, ಬಡ ಜನರ ಸೇವೆಯ ಕಾರ್ಯಕ್ರಮ ನಡೆದಿದ್ದು ಇಲ್ಲಿನ ಹುಡಕೋ ಬಡಾವಣೆಯಲ್ಲಿ. ಈ ಕಾರ್ಯಕ್ರಮದ ರುವಾರಿ ಸಮಾಜ ಸೇವಕ ಅಯೂಬ ಮನಿಯಾರ. ರಂಜಾನ ಹಬ್ಬವನ್ನು ನಾನೊಬ್ಬನೇ ಆಚರಿಸಿದರೆ ಸಾಲದು ನನ್ನ ಜೊತೆಗೆ ಎಲ್ಲ ಬಡವರೂ ಹಬ್ಬವನ್ನು ಖುಷಿಯಾಗಿ ಆಚರಿಸಬೇಕು ಎಂದು ಅಂದಕೊಂಡ ಇವರು ಕಳೆದ ೨೮ ವರ್ಷಗಳಂತೆ ಈ ವರ್ಷವೂ ಕೂಡ ಹಬ್ಬದ ಅಂಗವಾಗಿ ಬಡ ಮುಸ್ಲಿಂ ಮಹಿಳೆಯರಿಗೆ ದಿನಸಿ ಕಿಟ್ ಮತ್ತು ಹಾಲು ಖರೀದಿಗೆ ಎಂದು ತಲಾ ನೂರು ರೂ ನೀಡುತ್ತ ಬಂದು ಬಡವರ ಬಂಧು ಎನಿಸಿಕೊಂಡಿದ್ದಾರೆ.
ತಮ್ಮ ತಂದೆ ತಾಯಿಗಳ ಸ್ಮರಣಾರ್ಥ ಈ ಸೇವಾ ಕಾರ್ಯವನ್ನು ಮಾಡುವ ಮನಿಯಾರ್ ಅವರು ಮುದ್ದೇಬಿಹಾಳ ಮಾತ್ರವಲ್ಲದೇ ತಾಳಿಕೋಟೆ, ನಾಲತವಾಡದಲ್ಲೂ ಕಿಟ್ ವಿತರಿಸಿ ಮಾನವೀಯತೆಗೆ ಪಾತ್ರರಾಗಿದ್ದಾರೆ. ಮನಿಯಾರ ಅವರ ಸೇವಾ ಕಾರ್ಯ ಇದಷ್ಟೇ ಅಲ್ಲ. ದೃಷ್ಟಿ ಕಳೆದುಕೊಂಡ ಸಾಕಷ್ಟು ಬಡ ಜೀವಿಗಳಿಗೆ ಹಿಂದು ಮುಸ್ಲಿಂ ಎನ್ನದೇ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಬಡವರ ಆಶೀರ್ವಾದಕ್ಕೆ ಕೂಡ ಪಾತ್ರರಾಗಿದ್ದಾರೆ.
ಜಾತಿ, ಮತ, ಪಂಥ, ಪಂಗಡ ಎಂದು ಬಡಿದಾಡಿಕೊಳ್ಳುತ್ತಿರುವ ಸಧ್ಯದ ಕಾಲಘಟ್ಟದಲ್ಲಿ ಬಡವರೂ ನಮ್ಮ ಜೊತೆ ಹಬ್ಬವನ್ನು ಆಚರಿಸಲಿ, ದೃಷ್ಟಿ ಕಳೆದುಕೊಂಡು ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ಜೀವಿಗಳು ನನ್ನವರು ಎಂದು ಆಸರೆಯಾಗುವ ಮನಿಯಾರ ಅವರ ಸೇವೆ ನಿಜ್ಕಕೂ ಶ್ಲಾಘನೀಯ ಅಂತಾರೆ ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಮೌಲಾನಾ ಅಫ್ತಾಬ ಸಾಬ್, ಮೌಲಾನಾ ಅಲ್ಲಾಭಕ್ಷ ಖಾಜಿ, ವಾಗ್ಮಿ ಲಾಲ ಹುಸೇನ ಕಂದಗಲ್ಲ, ನ್ಯಾಯವಾದಿ ವಿ.ಎಸ್.ಸಾಲಿಮಠ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸದಸ್ಯೆ ಸಂಗಮ್ಮ ದೇವರಳ್ಳಿ, ಶಿಕ್ಷಕಿ ಆರ್.ಎಸ್.ಹಿರೇಮಠ, ವಿಜಯಪುರದ ಗಣ್ಯ ಉದ್ಯಮಿ ರೂಪಸಿಂಗ್ ಲುನಾರಿ, ಪ್ರಮುಖರಾದ ಸಂಗೀತಾ ನಾಡಗೌಡ, ಲಾಡ್ಲೇಮಶಾಕ ನಾಯ್ಕೋಡಿ, ದಾದಾ ಎತ್ತಿನಮನಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮತ್ತೀತರರು ಇದ್ದರು.
ಬರುವ ದಿನಗಳಲ್ಲಿ ನೇತ್ರ ಚಿಕಿತ್ಸೆ ಶಿಬಿರ :ಮನಿಯಾರ
ಪ್ರತೀ ವರ್ಷ ರಂಜಾನ ಹಬ್ಬದ ಅಂಗವಾಗಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಬಡ ಜೀವಿಗಳಿಗೆ ಉಚಿತ ನೇತೃ ಶಸ್ತ್ರ ಚಿಕಿತ್ಸಾ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದೆ. ಈ ಬಾರಿ ವೈದ್ಯರ ಆಜ್ಞೆಯಂತೆ ಕೆಲ ದಿನಗಳ ಕಾಲ ಮುಂದೂಡಲಾಗಿದೆ ಹೊರತು ಚಿಕಿತ್ಸೆ ಕಾರ್ಯ ನಿಲ್ಲುವದಿಲ್ಲ ಎಂದು ಅಯೂಬ ಮನಿಯಾರ ಸ್ಪಷ್ಟಪಡಿಸಿದ್ದಾರೆ.

“ಮನಿಯಾರ ಅವರು ದಕ್ಷ ಮತ್ತು ಪ್ರಾಮಾಣಿಕರು. ಅವರ ಸಮಾಜ ಸೇವೆ ಮೆಚ್ಚುವಂಥದ್ದು. ಎಷ್ಟೋ ಮಠಗಳಿಗೂ ಕೂಡ ಇವರು ಸೇವೆ ನೀಡಿದ್ದಾರೆ. ಕೇವಲ ಹಬ್ಬದ ದಿನಗಳಲ್ಲಿ ಮಾತ್ರವಲ್ಲದೇ ವರ್ಷವಿಡೀ ಜಾತಿ ಧರ್ಮ ಎನ್ನದೇ ಸೇವೆಯಲ್ಲಿರುತ್ತಾರೆ.”
– ಡಾ.ಚನ್ನವೀರ ಶಿವಾಚಾರ್ಯರು
ಭಾವೈಕ್ಯತಾ ಮಠ ಕುಂಟೋಜಿ
“ನಾವೆಲ್ಲ ಮನುಷ್ಯರು. ಆರ್ಥಿಕವಾಗಿ ಯಾರು ಕೆಳಗಿದ್ದಾರೆ ಅವರನ್ನೆಲ್ಲ ಮೇಲಕ್ಕೆತ್ತುವದು ಈ ಸಮಾಜದ ಶ್ರೀಮಂತ ವರ್ಗದ ಜವಾಬ್ದಾರಿ. ಆ ಜವಾಬ್ದಾರಿಯನ್ನು ಕಳೆದ ೨೮ ವರ್ಷಗಳಿಂದ ನಿರಂತರ ಬಡವರ ಸೇವೆ ಸಲ್ಲಿಸುವ ಮೂಲಕ ಪಾಲಿಸುತ್ತಿರುವ ಮನಿಯಾರ ಅವರ ಕಾರ್ಯ ಪರಮಾತ್ಮ ಮೆಚ್ಚುವಂಥದ್ದು.”
– ಲಾಲ್‌ಹುಸೇನ ಕಂದಗಲ್ಲ
ವಾಗ್ಮಿ
“ಈ ಸೇವೆಯ ಹಿಂದೆ ಯಾವುದೇ ಸ್ವಾರ್ಥವಿಲ್ಲ. ನಾನು ಸೇವೆ ಮಾಡುತ್ತಿರೋದು ನನ್ನ ತಾಯಿ ಮತ್ತು ಅಕ್ಕ-ತಂಗಿಯರಿಗೆ. ದಾನ ಮಾಡಲು ಸಾಕಷ್ಟು ಜನ ಮುದೆ ಬಂದರೂ ದಾನ ಪಡೆಯಲು ಹಿಂದೆ ಮುಂದೆ ಯೋಚಿಸುವ ಕಾಲದಲ್ಲಿ, ನಾನೇನೂ ಹೇಳದೇ ಪ್ರತೀ ವರ್ಷ ಮಾ೨೮ ರಂದು ನನ್ನ ಮನೆ ಮುಂದೆ ಸೇರುವ ತಾಯಂದಿರಿಗೆ ಕೃತಜ್ಞತೆ ಸಲ್ಲಿಸುವೆ.”
– ಅಯೂಬ ಮನಿಯಾರ
ಸಮಾಜ ಸೇವಕರು