ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಬಿಜೆಪಿ ಶಾಸಕರು | 6 ತಿಂಗಳು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ
ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಮುಂದಿನ 6 ತಿಂಗಳವರೆಗೂ ಕಲಾಪದಿಂದ ಅಮಾನತು ಮಾಡಿದ್ದಾರೆ.
ಬಿಜೆಪಿ ಶಾಸಕರಾದ ಭೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರತ್ನ, ಬಿಪಿ ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಡಾ. ಅಶ್ವತ್ಥ್ ನಾರಾಯಣ, ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗರ, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್ಆರ್ ವಿಶ್ವನಾಥ್ ಅವರನ್ನು ಮಾರ್ಷಲ್ ಗಳು ಕಲಾಪದಿಂದ ಹೊರಗೆ ತಂದು ಬಿಟ್ಟಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಹೈಡ್ರಾಮಾಕ್ಕೆ ಕಾರಣವಾಯಿತು. ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು. ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, ‘ಹನಿಟ್ರ್ಯಾಪ್ ಸರ್ಕಾರ’ ಎಂದು ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಸ್ಪೀಕರ್ ಸಹ ಶಾಸಕರು ತಾಳ್ಮೆ ವಹಿಸುವಂತೆ, ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದರು. ಶಾಸಕರು ಪ್ರತಿಭಟನೆಯನ್ನು ಮುಂದುವರೆಸಿದ್ದವು.

ಪೇಪರ್ ಹರಿದು ಸ್ಪೀಕರ್ ಪೀಠದತ್ತ ಎಸೆದ ಸದಸ್ಯರು
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಬಿಜೆಪಿ ಸದಸ್ಯರು ಶುಕ್ರವಾರ ವಿಧಾನಸಭೆಯ ಬಾವಿಗಿಳಿದು, ಬಜೆಟ್ ಹಾಗೂ ಮಸೂದೆಗಳ ಪ್ರತಿಗಳನ್ನು ಹರಿದು ಪ್ರತಿಭಟನೆ ನಡೆಸಿದರು, ಇದರ ಮದ್ಯೆಯೇ ರಾಜ್ಯ ಬಜೆಟ್ ಮತ್ತು ಶಾಸಕರ ವೇತನ ಹೆಚ್ಚಳ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಉತ್ತರ ನೀಡಲು ಮುಂದಾದರು. ಈ ವೇಳೆ ಬಿಜೆಪಿ-ಜೆಡಿಎಸ್ ಶಾಸಕರು, ನಿನ್ನೆ ವಿಧಾನಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ ಹನಿಟ್ರ್ಯಾಪ್ ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಬಯಸಿದರು.
ಪ್ರತಿಭಟನೆಯ ನಡುವೆಯೇ, ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳ ವೇತನ, ಪಿಂಚಣಿ ಮತ್ತು ಭತ್ಯೆಯನ್ನು ಹೆಚ್ಚಿಸುವ ಬಜೆಟ್ ಮತ್ತು ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿತು.
ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ಬಿಜೆಪಿ ಶಾಸಕರು ಸ್ಪೀಕರ್ ಕುರ್ಚಿ ಇರುವ ವೇದಿಕೆಯ ಮೇಲೆ ಹತ್ತಿ ಸ್ಪೀಕರ್ ಯು ಟಿ ಖಾದರ್ ಅವರ ಮೇಲೆ ಕಾಗದಪತ್ರಗಳನ್ನು ಎಸೆದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಬಲವಂತವಾಗಿ ಹೊರಹಾಕಬೇಕಾಯಿತು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಬಿಜೆಪಿ, ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿ ನೀಡುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು.
ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದ ಬಿಜೆಪಿ ಸದಸ್ಯರ ವಿರುದ್ಧ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಸಚಿವರು, ಮಾರ್ಷಲ್‌ಗಳಿಗೆ ಬಿಜೆಪಿ ಸದಸ್ಯರನ್ನು ಅಲ್ಲಿಂದ ಹೊರ ಹಾಕುವಂತೆ ಸೂಚಿಸಿದರು.