ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಬಿಸಿಲಿನ ತಾಪಕ್ಕೆ ಪಕ್ಷಿಗಳು ಬಾಯಾರಿ ನೀರು ಹುಡುಕಿಕೊಂಡು ಅಲೆದಾಡುವುದು ಸಹಜ. ಕಾರಣ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶಾಲಾ ಆವರಣದಲ್ಲಿ ‘ವಿಶ್ವ ಗುಬ್ಬಚ್ಚಿ ದಿನ’ದ ನಿಮಿತ್ತ ಗಿಡಮರಕ್ಕೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಕಟ್ಟಿ ನೀರು ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿವರ್ಷದ ರೂಢಿಯಂತೆ ಮಕ್ಕಳು ಸಾಮಾನ್ಯ ವಸ್ತುಗಳನ್ನೇ ಬಳಸಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳು, ಯುವಕರ ಪಾತ್ರ ಮಹತ್ವದ್ದಾಗಿದ್ದು, ಪೋಷಕರು ಕೂಡ ಪರಿಸರ ರಕ್ಷಣೆ ವಿಷಯದಲ್ಲಿ ಮಕ್ಕಳ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಮಂಜುನಾಥ ಗಂಗನಳ್ಳಿ ಮಾತನಾಡಿ, ತಮ್ಮ ಮಹಡಿ, ಮನೆ ಮೇಲ್ಭಾಗದಲ್ಲಿ ಪಾತ್ರೆಗಳಲ್ಲಿ ನೀರು ಹಾಕಿಟ್ಟರೆ ಪಕ್ಷಿಗಳಿಗೆ ಹನಿ ನೀರು ಒದಗಿಸಿದಂತಾಗುತ್ತದೆ. ಜನರು ತಮ್ಮ ಬಿಡುವಿನ ವೇಳೆಯಲ್ಲಿ ಪಾತ್ರೆಯಲ್ಲಿ ನೀರು ಹಾಕಿಡುವ ಹವ್ಯಾಸ ಬೆಳೆಸಿಕೊಂಡರೇ ಪಕ್ಷಿ ಸಂಕುಲಕ್ಕೆ ಜೀವಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಅನುಶ್ರೀ, ಶ್ರೀನಿಧಿ, ಸುಶಾಂತ, ಸನ್ನಿಧಿ, ಸಾಕ್ಷಿ, ದೀಪಾ, ಲಕ್ಷ್ಮೀ, ಸಮೃದ್ಧಿ, ಭಾಗ್ಯಶ್ರೀ, ಸುಕನ್ಯಾ, ಶ್ರಾವಣಿ, ಪಲ್ಲವಿ, ಸೌಂದರ್ಯ ಸೇರಿದಂತೆ ಅನೇಕ ಮಕ್ಕಳು ಪಕ್ಷಿಗಳಿಗೆ ನೀರಿಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.