ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಬೇಸಿಗೆಯಲ್ಲಿ ಜಾನುವಾರಗಳಿಗೆ ಮೇವು ಕೊರತೆಯನ್ನು ನಿಗಿಸುವ ನಿಟ್ಟಿನಲ್ಲಿ ರೈತ ಸಮುದಾಯ ಮುಂದಾಗಿದ್ದು ಒಣಮೇವು ಸಂಗ್ರಹಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಡುಬೇಸಿಗೆಯ ಎರಡು ತಿಂಗಳು ಜಾನುವಾರಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಅಗತ್ಯವಾದ ಒಣಮೇವನ್ನು ದೂರದ ಗ್ರಾಮಗಳಿಂದ ಖರೀದಿಸಿ ಟ್ರ್ಯಾಕ್ಟರ್ ಗಳ ಮೂಲಕ ತಂದು ಸಂಗ್ರಹಿಸುತ್ತಿದ್ದಾರೆ. ಆಕಳು, ಎತ್ತು, ಎಮ್ಮೆಗಳಿಗೆ ಅಗತ್ಯವಾದ ಒಣಮೇವು ಈಗ ವಿರಳವಾದ ಹಿನ್ನೆಲೆಯಲ್ಲಿ ಜೋಳ-ಮೆಕ್ಕೆಜೋಳದ ಒಣಮೇವನ್ನೇ ಒಂದು ಟ್ರ್ಯಾಲಿಗೆ ಹತ್ತು ಸಾವಿರದಂತೆ ೨೦ ಸಾವಿರ ಹಣ ನೀಡಿ ಎರಡೆರಡು ಟ್ರ್ಯಾಲಿ ಮೇವು ಕೊಳ್ಳುತ್ತಿದ್ದಾರೆ.
ಈ ಕುರಿತು ಚಾಂದಕವಟೆ ಗ್ರಾಮಕ್ಕೆ ಒಣಮೇವು ಸಾಗಿಸುತ್ತಿರುವ ರೈತರಾದ ಅಯ್ಯಣ್ಣ ಪೂಜಾರಿ, ಅಣವೀರಯ್ಯ ಹಿರೇಮಠ ಹಾಗೂ ನಾಗಪ್ಪ ಶಿವೂರ ಮಾತನಾಡಿ, ಎರಡು ಟ್ರ್ಯಾಲಿ ಒಣಮೇವು ೧೫ ದನಗಳಿಗೆ ಎರಡು ತಿಂಗಳು ಸಾಲಬಹುದು. ನೀರಿನ ಕೊರತೆಯಿಂದ ಹಸಿಮೇವು ಸಿಗುವುದು ದೂರದ ಮಾತು. ಮುಂದಿನ ಮಳೆಗಾಲದವರೆಗೆ ಅಗತ್ಯವಾದ ಮೇವನ್ನು ನಾವು ಮಾರ್ಸನಳ್ಳಿ ರೈತರಿಂದ ಖರೀದಿಸಿ ಸಂಗ್ರಹಿಸುತ್ತಿದ್ದೇವೆ. ಈ ಮೇವು ಮುಂದಿನ ಮಳೆಗಾಲದವರೆಗೆ ಸಾಲಬಹುದು ಎಂಬ ಭರವಸೆಯಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೋಳದ ಮೇವಿನ ಅಭಾವ ಎದ್ದು ಕಾಣುತ್ತಿದೆ. ಅದರಲ್ಲೂ ಈಗೀಗ ನಮ್ಮ ತಾಲ್ಲೂಕಿನಲ್ಲಿ ತೊಗರಿ, ಕಬ್ಬು ಬೆಳೆಯುವ ರೈತರು ಹೆಚ್ಚಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಸಿರು ಮೇವಿಗೆ ಕೊರತೆಯಿಲ್ಲ. ಆದರೆ ಬೇಸಿಗೆಯ ಮೂರು ತಿಂಗಳು ದನಕರುಗಳು ಮೇವಿಗಾಗಿ ಅಲೆಯುವಂತಾಗುತ್ತದೆ. ಆದ್ದರಿಂದ ಬಹುತೇಕ ರೈತರು ತಮ್ಮಲ್ಲಿಯ ದನಕರುಗಳನ್ನು ಮಾರಲು ಮುಂದಾಗುತ್ತಾರೆ. ಇನ್ನೂ ನಮ್ಮಂಥ ರೈತರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮೊದಲೇ ಮೇವು ಸಂಗ್ರಹಣೆಗೆ ಮುಂದಾಗುತ್ತೇವೆ. ಬೇಸಿಗೆ ಸಮಯದಲ್ಲಿ ಸರಕಾರ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿ ಮೇವು ನೀಡಿದರೇ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಮುಳಸಾವಳಗಿ ಗ್ರಾಮದ ರೈತರಾದ ಬಸವರಾಜ ಕಲ್ಲೂರ ಸಾಹೇಬಗೌಡ ಬಿರಾದಾರ, ಶಿವಶರಣ ಸಿನ್ನೂರ, ಮಲ್ಲು ಕುಕನೂರ, ಮುತ್ತು ನಾಯ್ಕೋಡಿ, ಚನ್ನಪ್ಪ ಕಾರಜೋಳ, ಮಹಾದೇವಪ್ಪ ಭಂಟನೂರ(ನಿವಾಳಖೇಡ), ಶ್ರೀಶೈಲ ಕಬಾಡಗಿ(ಕಡ್ಲೇವಾಡ ಪಿಸಿಎಚ್).