ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ಬರದಂತೆ ಪರೀಕ್ಷಾ ಕರ್ತವ್ಯ ನಿಯೋಜಿತ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭಾಭವನದಲ್ಲಿ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳು ವೆಬ್‌ಕಾಸ್ಟಿಂಗ್ ಮೂಲಕ ನಡೆಯುತ್ತಿದ್ದು ಕ್ಯಾಮರಾಗಳು ಬಂದ್ ಆಗದಂತೆ ನಿಗಾ ವಹಿಸಬೇಕು. ಎಲ್ಲಿಯಾದರೂ ಕ್ಯಾಮರಾ ಬಂದ್ ಆಗಿ ಸಮಸ್ಯೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಲಾಗುವದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಯಾವುದೇ ಆಸೆ ಆಮೀಶಗಳಿಗೆ ಬಲಿಯಾಗಬಾರದು. ಯಾವುದೇ ಕಾರಣಕ್ಕೂ ನಕಲಿಗೆ ಅವಕಾಶ ಕೊಡಬಾರದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ, ಎಎಸ್‌ಐ ಕೆ.ಎಸ್.ಅಸ್ಕಿ ಮಾತನಾಡಿದರು. ತಾಲೂಕು ಪಂಚಾಯತನ ಖೂಬಾಸಿಂಗ್ ಜಾಧವ, ಶಾಲಾ ಆರೋಗ್ಯ ತಪಾಸಣಾ ವೈದ್ಯಾಧಿಕಾರಿ ಡಾ.ಭಾಗ್ಯಶ್ರೀ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸೇರಿದಂತೆ ಪರೀಕ್ಷಾ ಕರ್ತವ್ಯ ನಿಯೋಜಿತ ಸಿಬ್ಬಂದಿ ಇದ್ದರು.
ತಮ್ಮ ಅಧಿಕಾರದಲ್ಲಿ ಬೇಜವಾಬ್ದಾರಿತನ ತೋರಿದರಾ ಬಿಇಓ?
ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಆಸನ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಲಭ್ಯತೆ ಬಗ್ಗೆ ಪರಿಶೀಲಿಸುವದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ. ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂಬ ಉದಯರಶ್ಮಿ ಪ್ರಶ್ನೆಗೆ ಬಿಇಓ ಬಸವರಾಜ ಸಾವಳಗಿ ಅವರು ಪರಿಶೀಲನೆ ನಡೆಸಿಲ್ಲ. ಪರಿಶೀಲನೆ ನಡೆಸಲು ಸಮಯ ಇರಲಿಲ್ಲ ಎಂದು ಉತ್ತರಿಸಿದರು. ಅಲ್ಲದೇ ಕೊಠಡಿಯ ಮೇಲ್ವಿಚಾರಕರ ನೇಮಕದಲ್ಲಿ ಅಕ್ರಮಗಳಾದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆ ಪರಿಶೀಲಿಸಲು ಮೇಲ್ವಿಚಾರಕರ ನೇಮಕದ ಪಟ್ಟಿ ಕೇಳಿದರೆ ಸ್ಪಷ್ಟವಾಗಿ ನೀಡುವದಿಲ್ಲ ಎಂದು ಉತ್ತರಿಸಿದರು.
ಮತ್ತು ನಾಳೆ ಪರೀಕ್ಷೆಗಳು ಇರುವಾಗ ಇಂದು ಪೂರ್ವಭಾವಿ ಸಭೆ ನಡೆಸುವದು ಎಷ್ಟು ಸೂಕ್ತ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ತಮ್ಮ ಅಧಿಕಾರವನ್ನು ಸರಿಯಾಗಿ ನಿಭಾಯಿಸದೇ ಬೇಜವಾಬ್ದಾರಿತನ ತೋರಿದ್ದು ಕಂಡು ಬಂದಿತು.
ಗಾಳಿಗೆ ತೂರಿದ ನಿಯಮಗಳು
ಕೊಠಡಿಯ ಮೇಲ್ವಿಚಾರಕರನ್ನು ಆಯ್ಕೆ ಮಾಡುವಾಗ ಒಬ್ಬ ಶಿಕ್ಷಕರನ್ನು ಎರಡು ಮೂರು ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಅಲ್ಲದೇ ಕೆಲವೆಡೆ ಅದೇ ಶಾಲೆಯ ಶಿಕ್ಷಕರನ್ನು ಮುಖ್ಯ ಅಧೀಕ್ಷರ ಜವಾಬ್ದಾರಿ ನೀಡಿದ್ದಾರೆ. ಪರೀಕ್ಷಾ ಪಾವಿತ್ರ್ಯವನ್ನು ಕಾಪಾಡಲು ಹಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿತು.