ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
‘ಕಾಳಿಂಗ’ ಎಂಬ ಹೆಸರೇ ಒಂದು ರೀತಿ ಮನುಷ್ಯನಲ್ಲಿ ಭಯವನ್ನು ಮೂಡಿಸುತ್ತದೆ. ಏಕೆಂದರೆ ಕಾಳಿಂಗ ಎನ್ನುವುದನ್ನು ಬಹುವಾಗಿ ಬಳಸುವುದು ಕಾಳಿಂಗಸರ್ಪವನ್ನು ಉಲ್ಲೇಖಿಸಲು. ಅತ್ಯಂತ ವಿಷಕಾರಿಯಾದ ಈ ಹಾವು ಅಳಿವಿನ ಅಂಚಿನಲ್ಲಿದೆ. ಕಾಳಿಂಗ ಸರ್ಪದ ಜೀವ ಸಂಕುಲದ ಹೆಸರು ‘ಒಫಿಯೊಫಗಸ್ ಹನ್ನಾ’, ಇದರ ಅರ್ಥ ‘ಹಾವು ಭಕ್ಷಕ’ ಎಂದು. ಯಾವುದೇ ರೀತಿಯ ಹಾವನ್ನು ಅಥವಾ ತನ್ನದೇ ಗುಂಪಿನ ಸಣ್ಣ ಹಾವುಗಳು, ನಾಗರಹಾವುಗಳನ್ನು ತಿಂದು ಜೀವಿಸುವ ಈ ಸಂಕುಲದ ಕಾಳಿಂಗ ಸರ್ಪವು ವಿಶ್ವದ ಅತ್ಯಂತ ಉದ್ದದ ಹಾಗೂ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಒಂದು. ಸುಂದರ ಮೈಕಟ್ಟನ್ನು ಹೊಂದಿರುವ ಈ ಹಾವು ಕಪ್ಪು ಬಣ್ಣವಿದ್ದು, ನೋಡಲು ಅತ್ಯಂತ ಆಕರ್ಷಕವಾಗಿ ಇರುತ್ತದೆ.
ಸುಮಾರು ೫.೫ಮೀ ಯಾ ೧೮ ಅಡಿ ಉದ್ದ ಬೆಳೆಯುವ ಈ ಹಾವು ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ದಟ್ಟ ಅರಣ್ಯ ಪ್ರದೇಶಗಳೇ ಇವುಗಳ ಆವಾಸಸ್ಥಾನವಾಗಿದ್ದು, ಕರ್ನಾಟಕದ ಆಗುಂಬೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ತನ್ನ ಒಟ್ಟು ದೇಹದ ಮೂರನೇ ಒಂದು ಭಾಗವನ್ನು ಗಾಳಿಯಲ್ಲಿ ಎತ್ತಿಕೊಂಡು ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿರುವ ಕಾಳಿಂಗಸರ್ಪವನ್ನು ಇಂಗ್ಲಿಷ್‌ನಲ್ಲಿ ‘ಕಿಂಗ್‌ಕೋಬ್ರಾ’ ಮತ್ತು ಕೇರಳದಲ್ಲಿ ‘ರಾಜವೆಂಬಾಲ’ ಎಂದು ಕರೆಯುತ್ತಾರೆ.
ಇದರ ಕಡಿತಕ್ಕೆ ಒಳಗಾದರೆ ಸಾವು ನಿಶ್ಚಿತವೇ, ಇದರ ಕಡಿತದಿಂದ ಬದುಕುವವರ ಪ್ರಮಾಣ ೫% ಮಾತ್ರ. ಈ ಹಾವಿನ ಕಡಿತಕ್ಕೆ ಒಳಗಾದರೆ ಕೇವಲ ೧೫ ನಿಮಿಷಗಳಲ್ಲಿ ಒಬ್ಬ ಮನುಷ್ಯನ ಸಾವು ಸಂಭವಿಸುತ್ತದೆ. ಇದರ ವಿಷವು ದೇಹಕ್ಕೆ ಸೇರ್ಪಡೆಯಾದರೆ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ, ನಂತರ ಉಸಿರುಗಟ್ಟಿ ಮನುಷ್ಯ ಮರಣ ಹೊಂದುತ್ತಾನೆ. ಇವುಗಳ ವಿಷಕ್ಕೆ ಆನೆಯನ್ನೂ ಕೊಲ್ಲುವ ಸಾಮರ್ಥ್ಯವಿದೆ. ಇತರೆ ಹಾವುಗಳಂತೆ ಈ ಹಾವುಗಳೂ ಕಣ್ಣಿನ ಹಿಂಭಾಗದಲ್ಲಿ ವಿಷವನ್ನು ಶೇಖರಿಸಿಡುತ್ತದೆ. ಇದರ ಕಡಿತದಿಂದ ೧.೨೫ ಸೆಂ.ಮೀ ಗಾತ್ರದ ತನ್ನ ಹಲ್ಲುಗಳಿಂದ ಗಾಯದೊಳಗೆ ವಿಷಗಳನ್ನು ಸಿಂಪಡಿಸುತ್ತದೆ. ಕಾಳಿಂಗ ಸರ್ಪವು ಒಂದು ಬಾರಿಗೆ ೩೫೦ ರಿಂದ ೪೦೦ ಮಿ.ಗ್ರಾಂನಷ್ಟು ವಿಷಗಳನ್ನು ಶೇಖರಿಸುತ್ತದೆ. ಈ ಪ್ರಮಾಣದ ವಿಷವು ಸುಮಾರು ೨೦ ರಿಂದ ೪೦ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ.

ಕಾಳಿಂಗವು ತನ್ನ ದೇಹದಲ್ಲಿರುವ ಸೂಕ್ಷ್ಮ ಸಂವೇದನಾ ಗ್ರಂಥಿಯ ಮೂಲಕ ೧೦೦-೩೦೦ ಅಡಿ ದೂರದಿಂದಲೇ ತನ್ನ ಬೇಟೆಯನ್ನು ಗ್ರಹಿಸುವ ಶಕ್ತಿ ಇದಕ್ಕಿದೆ. ಈ ಹಾವು ತನ್ನ ಹಲ್ಲುಗಳಿಂದ ಬೇಟೆಯನ್ನು ಕಚ್ಚಿ ಸಾಯಿಸಿದ ನಂತರ ನಿಧಾನವಾಗಿ ನುಂಗುತ್ತದೆ. ಇದರ ಹೊಟ್ಟೆಯಲ್ಲಿರುವ ಟಾಕ್ಸಿನ್ ಎಂಬ ವಿಷಕಾರಿ ಅಂಶವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಕಾಳಿಂಗ ಸರ್ಪಗಳಿಗೆ ದವಡೆಗಳಿಲ್ಲವಾಗಿದ್ದು, ಇವು ತಮ್ಮ ಬಾಯಿಯನ್ನು ಅಗಲವಾಗಿ ತೆರೆಯುವುದಲ್ಲದೇ ತನ್ನ ತಲೆಗಿಂತ ದೊಡ್ಡ ಗಾತ್ರದ ಬೇಟೆಗಳನ್ನೂ ನುಂಗುವ ಸಾಮರ್ಥ್ಯವನ್ನು ಹೊಂದಿವೆ. ಕಾಳಿಂಗ ಸರ್ಪದ ಕಡಿತದ ಸಾವಿನಿಂದ ಪಾರಾಗಲು ಈವರೆಗೆ ಎರಡು ಸ್ಥಳಗಳಲ್ಲಿ ಮಾತ್ರ ಔಷಧಿಗಳನ್ನು ತಯಾರಿಸಲಾಗಿದ್ದು, ಒಂದು ಥೈಲ್ಯಾಂಡ್ ರೆಡ್‌ಕ್ರಾಸ್ ಸಂಸ್ಥೆಯು ಸಿದ್ದಪಡಿಸಿದರೆ, ಇನ್ನೊಂದನ್ನು ಭಾರತದ ಸೆಂಟ್ರಲ್ ರಿಸರ್ಚ್ ಇನ್ಸಿಟ್ಯೂಟ್ ತಯಾರಿಸಿದೆ.
ಹೆಣ್ಣು ಹಾವುಗಳು ಒಮ್ಮೆಗೇ ೨೦ ರಿಂದ ೪೦ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಸುಮಾರು ೨೫ಡಿಗ್ರಿ ಸೆಲ್ಸಿಯಸ್ ಉಷ್ನತೆಯಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳು ಹೊರ ಬಂದಾಗ ಅವು ಆಹಾರ ಹುಡುಕಿಕೊಂಡು ಹೋಗುತ್ತದೆ. ಇಲ್ಲವಾದರೆ ತಾಯಿಯೇ ತನ್ನ ಮಕ್ಕಳನ್ನು ಕೊಂದು ತಿನ್ನುವುದು ಇವುಗಳ ವೈಶಿಷ್ಟ್ಯತೆ. ಮರಿ ಹಾವುಗಳು ೫೫ ಸೆಂ.ಮೀನಷ್ಟು ಉದ್ದವಾಗಿದ್ದು, ವಯಸ್ಕ ಹಾವಿನಷ್ಟೇ ಪ್ರಮಾಣದ ವಿಷವನ್ನು ಹೊಂದಿರುತ್ತವೆ.
ಕಾಳಿಂಗ ಸರ್ಪವು ಜಗತ್ತಿನ ಅತಿ ಉದ್ದವಾದ ವಿಷಕಾರಿ ಹಾವಾಗಿದ್ದು, ಇದು ಸುಮಾರು ೧೮.೫ ರಿಂದ ೧೮.೮ ಅಡಿ ಉದ್ದವಿದ್ದು, ಸುಮಾರು ೬ ಕಿಲೋ ತೂಕವಿರುತ್ತದೆ. ಭಾರತದಲ್ಲಿ ಇವು ಹೆಚ್ಚಾಗಿದ್ದು, ಇವು ಇತರ ಹಾವುಗಳನ್ನು ತಿಂದು ಬದುಕುತ್ತವೆ. ಈ ಸರ್ಪದ ವಿಷವು ಮೂಲತಃ ‘ನಿರೊಕಾಕ್ಸಿಕ್’ ಆಗಿದ್ದು, ನೇರವಾಗಿ ಮಾನವನ ನರಮಂಡಲಕ್ಕೆ ವಿಷವನ್ನು ಸುರಿಸುತ್ತವೆ.
ಕಾಳಿಂಗ ಸರ್ಪದ ಬಾಹ್ಯ ಜೀವನ
ಕಾಳಿಂಗ ಸರ್ಪವು ತನ್ನ ಕುತ್ತಿಗೆಯ ಗಾತ್ರ ಮತ್ತು ಪ್ರಕಾರದಲ್ಲಿನ ವೈವಿಧ್ಯಗಳಿಂದಾಗಿ ನಾಗರಹಾವುಗಳಿಗಿಂತ ಭಿನ್ನವಾಗಿವೆ. ಕಾಳಿಂಗ ಸರ್ಪಗಳು ಇತರ ನಾಗರಹಾವುಗಳಿಗಿಂತ ದೊಡ್ಡದಾಗಿದ್ದು, ಇವುಗಳ ಕುತ್ತಿಗೆಯಲ್ಲಿ ಗಿ ಸಂಕೇತದಂತಹ ಪಟ್ಟೆಯಿರುವುದು. ಆದರೆ ನಾಗರಹಾವುಗಳಲ್ಲಿ ಎರಡು ಅಥವಾ ಒಂದು ಕಣ್ಣಿನಾಕಾರದ ಪಟ್ಟೆಯಿರುತ್ತದೆ. ಕಾಳಿಂಗ ಸರ್ಪಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ, ವೇಗವಾಗಿ ಚಲಿವುದರೊಂದಿಗೆ ಹೆಚ್ಚು ಚುರುಕಾಗಿರುತ್ತವೆ. ಇವು ಕಡುಹಸಿರು, ಕಂದು ಅಥವಾ ಕಪ್ಪು ಬಣ್ಣದ ಚರ್ಮ ಹೊಂದಿದ್ದು, ದೇಹದ ಕೆಳಭಾಗದಲ್ಲಿ ಮಸುಕಾದ ಹಳದಿ ಬಣ್ಣ ಹೊಂದಿರುತ್ತವೆ. ಹಾವಿನ ಹೊಟ್ಟೆಯ ಭಾಗವು ಕೆನೆಹಾಲಿನ ಬಣ್ಣ ಅಥವಾ ಮಸುಕಾದ ತಿಳಿ ಹಳದಿ ಬಣ್ಣ ಹೊಂದಿರುತ್ತದೆ. ಇದು ‘ಪ್ರೋಟೆರೊಗ್ಲಿಫ್’ (ಒಂದೇ ಸಮರೂಪದ) ದಂತರಚನೆಯನ್ನು ಹೊಂದಿದೆ. ಇವುಗಳ ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ ವಿಷದ ಹಲ್ಲುಗಳಿರುತ್ತವೆ. ಇದು ಚರ್ಮದ ಅಡಿಯಲ್ಲಿದ್ದು ಪಿಚಕಾರಿಯಂತೆ ಬೇಟೆಯ ಶರೀರದೊಳಗೆ ವಿಷವು ಪ್ರವಹಿಸುವಂತೆ ಮಾಡುತ್ತದೆ. ಹೆಣ್ಣು ಹಾವಿಗಿಂತ ಗಂಡು ಹಾವು ಗಾತ್ರದಲ್ಲಿ ದೊಡ್ಡ ಮತ್ತು ದಪ್ಪನಾಗಿದ್ದು, ವಿಷದ ಹಲ್ಲುಗಳೂ ದೊಡ್ಡದಾಗಿರುತ್ತವೆ. ಕಾಳಿಂಗ ಸರ್ಪದ ಸರಾಸರಿ ಜೀವಿತಾವಧಿ ಸುಮಾರು ೨೦ ವರ್ಷಗಳು. ಕಾಳಿಂಗ ಸರ್ಪ ಭಯಾನಕ ಮತ್ತು ಅಪಾಯಕಾರಿಯಾಗಿ ಕಚ್ಚಿ ಕೊಲ್ಲುವ ಹಾವಾಗಿದ್ದರೂ, ಇದು ನಾಚಿಕೆ ಸ್ವಭಾವ ಮತ್ತು ಏಕಾಂಗಿತನ ಬಯಸುವ ಪ್ರಾಣಿಯಾಗಿದೆ.
ಕಾಳಿಂಗ ಸರ್ಪಗಳ ವಾಸಸ್ಥಾನ
ಕಾಳಿಂಗ ಸರ್ಪವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತಿದ್ದು, ಎತ್ತರದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಸರೋವರ ಮತ್ತು ಹಳ್ಳಗಳು ಆಸುಪಾಸಿನ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಅರಣ್ಯ ನಾಶದಿಂದ ಕಾಳಿಂಗ ಸರ್ಪದ ಸಂಖ್ಯೆಯು ಕ್ಷೀಣಿಸುತ್ತಿದ್ದು, ಇದು ಅಳಿವಿನಂಚಿನಲ್ಲಿರುವ ಹಾವುಗಳಂತೆ IUಅಓನ ಪಟ್ಟಿಯಲ್ಲಿ ದಾಖಲಾಗದೇ ಇರುವುದು ವಿಪರ್ಯಾಸ. ಕರ್ನಾಟಕದ ಆಗುಂಬೆಯ ಸೋಮೇಶ್ವರ ಕಾಡು ಅತಿ ಹೆಚ್ಚು ಕಾಳಿಂಗ ಸರ್ಪಗಳನ್ನು ಹೊಂದಿದೆ.
ಕಾಳಿಂಗ ಸರ್ಪಗಳ ಬೇಟೆ
ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಸೀಳು ನಾಲಿಗೆಗಳ ಮೂಲಕ ರಸಾಯನಿಕ ಸಂಕೇತ (ವಾಸನೆ) ಪಡೆಯುವವು. ಶರೀರದ ಸೂಕ್ಷ್ಮ ಭಾಗದಿಂದ ವಾಸನೆ ಗ್ರಹಿಸಿ, ತಮ್ಮ ಬಾಯಿಯ ಮೇಲ್ಗಡೆಯಿರುವ ವಿಶೇಷ ಸಂವೇದನ ಗ್ರಹಣ ಶಕ್ತಿಗೆ ಜಕೋಬ್ಸನ್ರ ಎಂಬ ಅಂಗದ ಮೂಲಕ ಬೇಟೆಯ ಇರುವಿಕೆಯ ಮಾಹಿತಿಯನ್ನು ಪಡೆಯುತ್ತವೆ. ಆಹಾರದ ವಾಸನೆ ಪತ್ತೆಯಾದಾಗ, ಬೇಟೆಯ ದಿಕ್ಕು ತಿಳಿಯಲು ಹಾವು ತನ್ನ ನಾಲಿಗೆಯನ್ನು (ಸೀಳು ನಾಲಿಗೆಯು ಸ್ಟೀರಿಯೊದಂತೆ ಕಾರ್ಯನಿರ್ವಹಿಸುವುದು) ಹೊರ ಚಾಚುವುದು. ಕಾಳಿಂಗ ಸರ್ಪದ ತೀಕ್ಷ್ಣದೃಷ್ಟಿ, ಬುದ್ಧಿಶಕ್ತಿ ಮತ್ತು ಬೇಟೆ ಪತ್ತೆಗೆ ಭೂಮಿಯ ಕಂಪನದ ಸಂವೇದನತ್ವ ಗ್ರಹಿಸುವ ಶಕ್ತಿ ಹೊಂದಿವೆ. ಇತರ ಹಾವುಗಳಂತೆ ಕಾಳಿಂಗ ಸರ್ಪವು ತನ್ನ ಆಹಾರವನ್ನು ಜಗಿಯದೆ, ಸಂಪೂರ್ಣವಾಗಿ ನುಂಗುವುದು.
ಆಹಾರ ಕ್ರಮ
ಕಾಳಿಂಗ ಸರ್ಪದ ಆಹಾರ ಕ್ರಮವು ಪ್ರಮುಖವಾಗಿ ಇತರ ಹಾವುಗಳನ್ನು ಒಳಗೊಂಡಿದೆ ಹೆಬ್ಬಾವುಗಳಂತಹ ವಿಷಕಾರಿಯಲ್ಲದ ಹಾವು ಮತ್ತು ತೀಕ್ಷ್ಣ ವಿಷದ ಪಟ್ಟೆ ಹಾವುಗಳನ್ನು ಒಳಗೊಂಡಿರುವ ವಿಷಪೂರಿತ ಹಾವುಗಳು ಇದರ ಆಹಾರವಾಗಿದೆ. ಆಹಾರದ ಕೊರತೆಯಾದಾಗ, ಕಾಳಿಂಗ ಸರ್ಪವು ಹಲ್ಲಿಗಳು, ಪಕ್ಷಿಗಳು ಮತ್ತು ಇಲಿ, ಮೊಲದಂತಹ ಚಿಕ್ಕ ಕಶೇರುಕ ಪ್ರಾಣಿಗಳನ್ನು ಸಹ ತಿನ್ನುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸುಲಭವಾಗಿ ಬಾಗುವ ತನ್ನ ಸ್ನಾಯು ಬಲ ಬಳಸಿ, ಪಕ್ಷಿಗಳು ಮತ್ತು ದೊಡ್ಡ ಗಾತ್ರದ ಕಶೇರುಕಗಳಂತಹ ಪ್ರಾಣಿಗಳ ಗಾತ್ರವನ್ನು ಕುಗ್ಗಿಸಿ, ನುಂಗಬಲ್ಲವು. ಕಾಳಿಂಗ ಸರ್ಪದ ನಿಧಾನಗತಿಯ ಜೀರ್ಣಕ್ರಿಯೆಯ ಕಾರಣದಿಂದ ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಆಹಾರ ಸೇವಿಸಿದ ನಂತರ, ಹಲವು ತಿಂಗಳವರೆಗೆ ಇವುಗಳಿಗೆ ಆಹಾರದ ಅಗತ್ಯವಿರು ವುದಿಲ್ಲ. ಇಲಿಗಳು ಕಾಳಿಂಗ ಸರ್ಪದ ಸಾಮಾನ್ಯ ಆಹಾರವಾಗಿದ್ದು, ಕಾಳಿಂಗ ಸರ್ಪಗಳು ಇಲಿಗಳ ಆಕರ್ಷಣೆಯಿಂದ ಇಲಿಗಳನ್ನು ಹುಡುಕಿಕೊಂಡು ಮಾನವನ ಆವಾಸಸ್ಥಾನಗಳಿಗೆ ಬರುತ್ತವೆ.
ರಕ್ಷಣೆಯ ತಂತ್ರಗಳು
ಕಾಳಿಂಗ ಸರ್ಪವು ಭಯಕ್ಕೊಳಗಾದಾಗ ತನ್ನ ದೇಹದ ಮೂರನೇ ಒಂದು ಭಾಗವನ್ನು ಮತ್ತು ತಲೆಯನ್ನು ಮೇಲೆತ್ತಿ, ಕುತ್ತಿಗೆ ನೇರಗೊಳಿಸಿ, ವಿಷದ ಹಲ್ಲುಗಳನ್ನು ತೋರಿಸುವ ಮೂಲಕ ಜೋರಾಗಿ ಬುಸುಗುಟ್ಟುವ ಮೂಲಕ ಸ್ವಯಂ ರಕ್ಷಣೆಯ ತಂತ್ರವನ್ನು ಅನುಸರಿಸುತ್ತವೆ. ತನ್ನ ತೀರಾ ಹತ್ತಿರಕ್ಕೆ ಬರುವ ವಸ್ತು ಅಥವಾ ಜೀವಿಗಳ ಅನೀರಿಕ್ಷಿತ ಚಲನೆಯಿಂದಾಗಿ ಅವು ತಕ್ಷಣ ಕೆರಳುತ್ತವೆ. ಕಾಳಿಂಗ ಸರ್ಪಗಳು ಹಠಾತ್ ದಾಳಿ ನಡೆಸುವುದಲ್ಲದೇ ಸುಮಾರು ೭ಅಡಿ ದೂರದಿಂದಲೇ ಅಪ್ಪಳಿಸಿ ಬೇಟೆಯನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿವೆ. ನಿರೊಟಾಕ್ಸಿಕ್ಗಳಿಗೆ (ನರಗಳ ಮೇಲೆ ವಿಷದಿಂದಾಗುವ) ಪ್ರತಿರೋಧ ವ್ಯವಸ್ಥೆಯನ್ನು ಹೊಂದಿರುವ ಮುಂಗುಸಿಯಂತಹ ಸ್ವಾಭಾವಿಕ ಪರಭಕ್ಷಕ ಜೀವಿಗಳನ್ನೂ ಕಾಳಿಂಗ ಸರ್ಪವು ಹೋರಾಡಿ ಹಿಮ್ಮೆಟ್ಟಿಸುತ್ತದೆ. ಇದು ಚಿಕ್ಕ ಸಸ್ತನಿಗಳನ್ನು ಸುಲಭವಾಗಿ ಕೊಲ್ಲುವುದರಿಂದ ಮುಂಗುಸಿಗಳು ಇದರಿಂದ ದೂರವೆಂದೇ ಹೇಳಬಹುದು.
ಸಂತಾನೋತ್ಪತ್ತಿ
ಹೆಣ್ಣು ಕಾಳಿಂಗ ಸರ್ಪವು ತನ್ನ ದೇಹದಿಂದ ವಿಭಿನ್ನವಾದ ವಾಸನೆಯನ್ನು ಹೊರಸೂಸುವ ಮೂಲಕ ತಾನು ಲೈಗಿಕ ಕ್ರಿಯೆಗೆ ಸಿದ್ಧವಿರುವುದನ್ನು ಗಂಡಿಗೆ ಸೂಚಿಸುತ್ತದೆ. ಕೆಲವೊಮ್ಮೆ ಒಂದೇ ಹೆಣ್ಣು ಹಾವಿನೊಂದಿಗೆ ಸೇರಲು ಬರುವ ಎರಡು ಗಂಡು ಹಾವುಗಳ ನಡುವೆ ಘೋರ ಹೋರಾಟವು ನಡೆದು ಗೆದ್ದ ಹಾವು ಹೆಣ್ಣಿನೊಂದಿಗೆ ಸೇರುತ್ತದೆ. ಇವುಗಳ ಮಿಲನವು ಒಂದು ಗಂಟೆಯವೆಗೂ ನಡೆಯುತ್ತವೆ. ಕೆಲವೊಮ್ಮೆ ಲೈಗಿಕ ಕ್ರಿಯೆ ನಡೆದ ನಂತರ ಗಂಡು ಹಾವು ತನ್ನ ಸಂಗಾತಿಯನ್ನೇ ಕೊಂದು ತಿಂದದ್ದೂ ಇದೆ ಎಂದು ಸಂಶೋಧಕರು ಹೇಳುತ್ತಾರಾದರೂ ಇದಕ್ಕೆ ನಿಖರ ಕಾರಣ ಇದುವರೆಗೂ ತಿಳಿದಿಲ್ಲ. ಅದೇ ರೀತಿ ಗಂಡು ಕಾಳಿಂಗವು ಏಕ ಪತ್ನಿವ್ರತಸ್ಥ ಎನ್ನುವುದಕ್ಕೆ ಅಧ್ಯಯನಗಳು ಪುಷ್ಟಿ ನೀಡಿವೆ.
ಹೆಣ್ಣು ಕಾಳಿಂಗ ಸರ್ಪವು ಉತ್ತಮ ಪೋಷಕನಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಗಳನ್ನಿಡಲು ಸಿದ್ದವಾಗುವ ಮೊದಲು, ಹೆಣ್ಣು ಕಾಳಿಂಗವು ತನ್ನ ದೊಡ್ಡ ದೇಹದ ಸುರುಳಿಯನ್ನು ಬಳಸಿ, ದೊಡ್ಡದಾದ ಗೋಲಾಕಾರದ ಎಲೆಹಾಸನ್ನು ರಚಿಸುವುದು. ಹೆಣ್ಣು ಹಾವು ಆ ಹುಲ್ಲುಹಾಸಿನೊಳಗೆ ೨೦-೪೦ ಮೊಟ್ಟೆಗಳನ್ನು ಇಟ್ಟಾಗ ಆ ಹಾಸು ಕಾವುಗೂಡಿನಂತೆ ಕಾರ್ಯನಿರ್ವಹಿಸುವುದು. ದೊಡ್ಡ ಪ್ರಾಣಿಗಳ ದಾಳಿಯಿಂದ ಮತ್ತು ಪಶ್ಚಿಮ ಘಟ್ಟದ ಮಳೆಗಾಲದ ನೆರೆಯಿಂದ ಮೊಟ್ಟೆಗಳನ್ನು ರಕ್ಷಿಸಲು, ಹೆಣ್ಣು ಹಾವು ತನ್ನ ಮೊಟ್ಟೆಗಳೊಂದಿಗೇ ಇದ್ದು, ಹುಲ್ಲುಹಾಸನ್ನು ರಕ್ಷಿಸಿಕೊಳ್ಳುತ್ತದೆ. ಮೊಟ್ಟೆಗಳನ್ನು ಇರಿಸಲು ಹೆಣ್ಣು ಹಾವು ತಾನು ಮಾಡಿದ ಹುಲ್ಲುಹಾಸಿನೊಳಗೆ ಅದನ್ನು ಮರಿ ಮಾಡಲು ೨೫℃ರಷ್ಟು ಉಷ್ಣತೆಯನ್ನು ಕಾಯ್ದುಕೊಳ್ಳಬೇಕು. ಮೊಟ್ಟೆಗಳು ಒಡೆಯಲು ಪ್ರಾರಂಭವಾಗುತ್ತಿದ್ದಂತೆ ಹೆಣ್ಣು ಹಾವು ಗೂಡನ್ನು ಬಿಟ್ಟು, ಆಹಾರಕ್ಕಾಗಿ ಹೊರಹೋಗುತ್ತದೆ. ಇದರಿಂದ ಅದು ತನ್ನ ಮರಿಗಳನ್ನು ತಾನೇ ತಿನ್ನುವುದನ್ನು ತಪ್ಪಿಸಿಸುತ್ತದೆ. ಕಾಳಿಂಗ ಸರ್ಪಗಳ ಮರಿಯು ೫೫ಸೆಂ.ಮೀನಷ್ಟು ಉದ್ದವಿದ್ದು, ಅವುಗಳು ವಯಸ್ಕ ಹಾವಿನಷ್ಟೆ ಪ್ರಬಲ ಪ್ರಮಾಣದ ವಿಷ ಹೊಂದಿದ್ದು ಮಾರಣಾಂತಿಕವಾಗಿರುತ್ತದೆ.
ಆಗುಂಬೆ ಮಳೆ ಕಾಡು ಪ್ರದೇಶವು ಕಾಳಿಂಗ ಸರ್ಪಗಳ ಸ್ವರ್ಗವೆಂದೇ ಹೆಸರು ಪಡೆದಿದೆ. ಇಲ್ಲಿ ಇವುಗಳ ಲಿಂಗಾನುಪಾತವು ೮೫:೧೫ ಇದೆ. ಅಂದರೆ ಈ ಪ್ರದೇಶದಲ್ಲಿ ಒಟ್ಟು ೮೫ ಗಂಡು ಕಾಳಿಂಗ ಸರ್ಪಗಳಿಗೆ ಕೇವಲ ೧೫ ಹೆಣ್ಣು ಕಾಳಿಂಗ ಸರ್ಪಗಳಿವೆ. ನಾಡಿಗೆ ಆಹಾರ ಅರಸಿಕೊಂಡು ಬರುವ ಇವುಗಳನ್ನು ಕೊಲ್ಲುವ ಬದಲು ಅವುಗಳನ್ನು ಜತನದಿಂದ ತಜ್ಞರಿದ ಹಿಡಿಸಿ ಮರಳಿ ಅರಣ್ಯಕ್ಕೆ ಬಿಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಅವುಗಳ ಸಂತತಿಯ ಉಳಿವಿನ ಸಂಕಲ್ಪವನ್ನು ಮನುಕುಲ ಮಾಡಬೇಕಿದೆ.
