ಲೇಖನ
– ಡಾ. ರಾಜಶೇಖರ ನಾಗೂರ
(’ಕಥಾ ಅರಮನೆ’ ಬರಹಗಾರರು)
ಸ್ತ್ರೀ ಎಂದರೆ ಅಷ್ಟೇ ಸಾಕೇ..?
ಉದಯರಶ್ಮಿ ದಿನಪತ್ರಿಕೆ
ಈ ಬದುಕೇ ವಿಸ್ಮಯ. ಇಲ್ಲಿ ಪ್ರಾರಂಭವು ಯಾವುದನ್ನೂ ನಿರ್ಧರಿಸುವುದಿಲ್ಲ. ನೆಲಕ್ಕೆ ಬೀಳುವ ಬೀಜ ಹೆಮ್ಮರವಾಗುತ್ತೋ, ಮಣ್ಣಿನಲ್ಲಿ ಮಣ್ಣಾಗುತ್ತೋ ಎನ್ನುವುದು ಯಾವ ನೆಲದಲ್ಲಿ ಅದು ಬೀಳುತ್ತೆ ಎನ್ನುವ ಅಂಶದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ಭೂಮಿಯ ಮೇಲೆ ನಾವುಗಳು ಎಲ್ಲಿ ಹುಟ್ಟುತ್ತೇವೆ ಗೊತ್ತಿರುವುದಿಲ್ಲ ಆದರೆ ಎಲ್ಲಿ ಬೆಳೆಯುತ್ತೇವೆ, ಹೇಗೆ ಬೆಳೆದು ನಿಲ್ಲುತ್ತೇವೆ ಎಂಬುದು ನಮ್ಮ ಯೋಚನಾ ಕ್ರಮವನ್ನು ಅವಲಂಬಿಸಿದೆ.
ಅದು 1979, ಆಗಸ್ಟ್ 13. ಯಾರೋ ಪುಣ್ಯಾತ್ಮರು ಪುಣೆಯ ಶ್ರೀವಾಸ್ತವ ಅನಾಥಶ್ರಮದ ಹತ್ತಿರ ಒಂದು ಕಸದ ತೊಟ್ಟಿಯೊಳಗೆ ಆಗ ತಾನೇ ಹುಟ್ಟಿರಬಹುದಾದ ಒಂದು ಹೆಣ್ಣು ಮಗುವನ್ನು ಎಸೆದು ಹೋಗಿರುತ್ತಾರೆ. ಇರುವೆಗಳು, ಹುಳಗಳು, ನೊಣ ಸೊಳ್ಳೆಗಳು ಮಗುವನ್ನು ಕಚ್ಚುತ್ತಾ ಇರುವಾಗ ಜೋರಾಗಿ ಮಗು ಅಳಲು ಪ್ರಾರಂಭಿಸುತ್ತದೆ. ಆ ಅನಾಥಾಶ್ರಮದ ಮ್ಯಾನೇಜರ್ ಆ ಮಗುವಿನ ಆಕ್ರಂದನ ಕೇಳಿ ಮಗುವನ್ನು ಎತ್ತಿಕೊಂಡು ಆಶ್ರಮಕ್ಕೆ ಬರುತ್ತಾನೆ. ಆ ಮಗುವಿನ ಕಣ್ಣುಗಳು ಹೊಳಪಿನಿಂದ ಕೂಡಿರುವುದನ್ನು ಗಮನಿಸಿ ಆ ಮಗುವಿಗೆ ‘ಲೈಲಾ’ ಎಂದು ಹೆಸರಿಡುತ್ತಾನೆ. ಆ ಮಗುವಿಗೆ ಮೂರು ತಿಂಗಳಾಗುವಾಗ, ಹೆರೆನ್ ಮತ್ತು ಸೂಯಿ ಎಂಬ ಅಮೇರಿಕೆಯ ದಂಪತಿಗಳು ಗಂಡು ಮಗುವನ್ನು ದತ್ತು ಪಡೆಯಲು ಆ ಅನಾಥಾಲಯಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿ ಪಳ ಪಳ ಎಂದು ಕಣ್ಣು ಬಿಟ್ಟು ನಗುವ ಆ ಹೆಣ್ಣು ಮಗುವನ್ನು ಸೂಯಿ ನೋಡಿದಾಗ ತಮಗೆ ಗಂಡು ಮಗು ಬೇಡಾ ಹೆಣ್ಣು ಮಗುವೇ ಇರಲಿ ಎಂದು ಆ ‘ಲೈಲಾ’ಳನ್ನು ದತ್ತು ಪಡೆದು, ಎಲ್ಲಾ ನ್ಯಾಯಬದ್ಧ ವಿಧಿವಿಧಾನಗಳನ್ನು ಮುಗಿಸಿಕೊಂಡು ನೇರವಾಗಿ ಅಮೇರಿಕಾಕ್ಕೆ ಬರುತ್ತಾರೆ. ಆಗ ಲೈಲಾ ‘ಲಿಜ್’ ಆಗಿ ನಾಮಕರಣ ಹೊಂದುತ್ತಾಳೆ. ಇದಾದ ಕೆಲವೇ ವರ್ಷಗಳಲ್ಲಿ ಆ ದಂಪತಿಗಳು ಅಮೇರಿಕಾದಿಂದ ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿಬಿಡುತ್ತಾರೆ.
ರಸ್ತೆಯ ಬೀದಿಗಳಲ್ಲಿ ಗಂಡು ಮಕ್ಕಳ ಜೊತೆ ಕ್ರಿಕೆಟ್ ಆಡುವುದೆಂದರೆ ಅವಳಿಗೆ ಪ್ರಾಣ. ಬ್ಯಾಟ್ ಮತ್ತು ಬಾಲ್ ಅವಳ ಇಷ್ಟದ ಆಟಿಗೆಗಳಾದರೂ ಅವಳು ತನ್ನ ಓದುಬರಹದಲ್ಲಿ ಎಲ್ಲಿಯೂ ಹಿಂದೆ ಉಳಿಯುವುದಿಲ್ಲ. ಅವಳ ಆಸಕ್ತಿ, ಅಭಿರುಚಿ ಮತ್ತು ಕರ್ತವ್ಯ ಪ್ರಜ್ಞೆ (ಓದು) ಅವಳ ಜವಾಬ್ದಾರಿ ವಹಿಸಿಕೊಳ್ಳುವ ಗುಣವನ್ನು ಎತ್ತಿ ತೋರಿಸುತ್ತದೆ. ಹೀಗಿರುವಾಗ ಅವಳ ಸಾಕು ತಂದೆ ಅವಳಲ್ಲಿರುವ ಕ್ರಿಕೆಟ್ ಆಟದ ಅಭಿರುಚಿಯನ್ನು ಗಮನಿಸಿ ಪ್ರೋತ್ಸಾಹಿಸುತ್ತಾನೆ. ಯಾವುದೇ ಹೆಣ್ಣಿಗೆ ಒಂದು ಗಂಡು ಬೆಂಬಲಕ್ಕೆ ನಿಂತರೆ ಆ ಹೆಣ್ಣು ಜಗತ್ತನ್ನೇ ಗೆಲ್ಲಬಲ್ಲಳು. ಹೌದಲ್ವಾ..!

ಈ ಪ್ರೋತ್ಸಾಹ ಬೆಂಬಲದಿಂದ ಅವಳ ಕ್ರಿಕೆಟ್ ಪಯಣ 1997 ರಿಂದ ಪ್ರಾರಂಭವಾಗಿ, 2001ರಲ್ಲಿ ಅವಳು ಮೊದಲ ಒಂದು ದಿನದ ಕ್ರಿಕೆಟ್ ಮ್ಯಾಚ್ ಆಸ್ಟ್ರೇಲಿಯಾ ಪರವಾಗಿ ಆಡುತ್ತಾಳೆ. 2003 ರ ಒಳಗೆ ತನ್ನ ಸ್ಥಾನವನ್ನು ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ ಭದ್ರಪಡಿಸಿಕೊಳ್ಳುತ್ತಾಳೆ. 2005 ರ ಸಮಯಕ್ಕೆ T20 ಯಲ್ಲಿಯೂ ತನ್ನ ಅಲೆಯನ್ನು ಮೂಡಿಸುತ್ತಾಳೆ.
ಅವಳ ಕ್ರಿಕೆಟ್ ಸಾಧನೆಯ ಅಂಕಿಅಂಶಗಳನ್ನು ತೆಗೆದುಕೊಂಡರೆ
👉8 ಟೆಸ್ಟ್ ಮ್ಯಾಚ್ ಗಳಲ್ಲಿ 416 ರನ್ನಗಳು, 23 ವಿಕೆಟ್ಗಳು.
👉125 ODI ಗಳಲ್ಲಿ 2728 ರನ್ಸ್, 146 ವಿಕೆಟ್ಸ್,
👉54 T20 ಮ್ಯಾಚ್ ಗಳಲ್ಲಿ 769 ರನ್ಸ್, 60 ವಿಕೆಟ್ಸ್.
👉ಮೊದಲ 1000 ರನ್ಸ್ ಗಳಿಸಿದ ಮತ್ತು 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಹೀಗಾಗಿ ಇವಳು ಅದ್ಭುತವಾದ ಆಲ್ ರೌಂಡರ್ ಎನಿಸಿಕೊಳ್ಳುತ್ತಾಳೆ.
👉 ಅಷ್ಟೇ ಅಲ್ಲ ICC ಮೊದಲ ಬಾರಿಗೆ, ಆಟಗಾರರಿಗೆ ರಾಂಕಿಂಗ್ ಪದ್ದತಿಯನ್ನು ಪರಿಚಯಿಸಿದಾಗ ಇವಳು ಪ್ರಪಂಚದ ನಂಬರ್ -1 ಆಲ್ ರೌಂಡರ್ ಪಟ್ಟವನ್ನು ಪಡೆದುಕೊಳ್ಳುತ್ತಾಳೆ.
👉2013 ರ Women’s cricket world cup ನ್ನು ಆಸ್ಟ್ರೇಲಿಯ ತಂಡ ಜಯಿಸಿ ಬಾಚಿಕೊಳ್ಳಲು ಇವಳ ನಾಯಕತ್ವ ಮುಖ್ಯವಾಯ್ತು.
👉ಅವಳು ಕ್ರಿಕೆಟ್ ಗೆ ಕೊಟ್ಟ ಕೊಡುಗೆಯನ್ನು ಗುರುತಿಸಿ ಅವಳನ್ನು ICC Hall of fame ನಲ್ಲಿ ಸೇರಿಸಲಾಯಿತು. ಕೆಲವೇ ಕೆಲವರು ಈ ಹೆಮ್ಮೆಗೆ ಭಾಜನರಾಗುತ್ತಾರೆ.
ಮುಂಬರುವ ತಲೆಮಾರುಗಳನ್ನು ಕ್ರಿಕೆಟ್ ಇರುವವರೆಗೆ ಪ್ರಭಾವಿತಗೊಳಿಸುವ ವ್ಯಕ್ತಿಯಾಗಿ ಉಳಿದು ಬಿಡುವ ಈ ಹೆಣ್ಣೇ ಭಾರತದಲ್ಲಿ ಜನಿಸಿ ಆಸ್ಟ್ರೇಲಿಯಾದ ಹೆಮ್ಮೆಯಾದ ‘ಲಿಸಾ ಸ್ಥಾಲೇಕರ್’.
ಯಾರೋ ಕಸದ ತೊಟ್ಟಿಯಲ್ಲಿ ಎಸೆದ (ಅತೀ ಕೆಳಮಟ್ಟದ ಸ್ಥಿತಿ) ಹೆಣವಾಗ ಬೇಕಿದ್ದ ಅನಾಥ ಹೆಣ್ಣು ಮಗು, ಇಡೀ ಜಗತ್ತೇ ಗುರುತಿಸುವ ಎತ್ತರದ ಹಂತಕ್ಕೆ ಬೆಳೆದಿರುವ ಇವಳ ಪರಿಯನ್ನು ನೋಡಿದಾಗ, ಇಂತಹ ಸಾಧಕ ಹೆಣ್ಣು ಮಕ್ಕಳನ್ನು ಕಂಡಾಗ ರಾಷ್ಟ್ರಕವಿ ಶಿವರುದ್ರಪ್ಪ ನವರು ಹೇಳುವಂತೆ ‘ಸ್ತ್ರೀ ಎಂದರೆ ಅಷ್ಟೇ ಸಾಕೇ..!’ ಎನ್ನುವ ಪ್ರಶ್ನೆ ಮೂಡದೇ ಇರುತ್ತದೆಯೇ.
ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಪ್ರಾರಂಭ ಅದೆಷ್ಟೇ ಹೀನಾಯವಾಗಿದ್ದರೂ, ತಾವು ಬೆಳೆದು ನಿಲ್ಲುವ ಕ್ರಮವನ್ನು ನೋಡಿದರೆ ಅಥವಾ ಇನ್ನೊಬ್ಬರನ್ನು ಬೆಳೆಸಿ ನಿಲ್ಲಿಸುವ ರೀತಿಯನ್ನು ನೋಡಿದರೆ ಸ್ತ್ರೀ ಎಂದರೆ ಸಾಕು ಎನಿಸುವುದಿಲ್ಲ. ಸ್ತ್ರೀ ರೂಪದ ದೇವತೆಗಳು ಎಂದರೆ ಕಡಿಮೆ ಎನಿಸುವುದು.
ಎಲ್ಲಾ ಸ್ತ್ರೀಯರು ದೇವತೆಗೆ ಉಪಮೇಯವಾಗಲಾರರು. ತಾವು ಹೆತ್ತ ಮಗುವನ್ನೇ ತೊಟ್ಟಿಗೆ ಎಸೆಯುವ, ತಮ್ಮ ಮಕ್ಕಳನ್ನೇ ಕೊಲ್ಲುವ, ತಮ್ಮ ಗಂಡನನ್ನೇ ಸಾಯಿಸುವ, ಬೇರೆಯವರನ್ನು ಮೋಸಗೊಳಿಸುವ, ಹೆಣ್ಣುರೂಪದ ಮಹಿಳೆಯರು ಕೇವಲ ಹೆಣ್ಣಷ್ಟೇ. ದೇವತೆಗಳಲ್ಲ. ಹೆಣ್ಣು ಒಂದಾಗಿಸುವವಳೇ ಹೊರತು ಒಡೆಯುವವಳಲ್ಲ.
ದೇಶಕ್ಕಾಗಿ, ಸಮಾಜಕ್ಕಾಗಿ, ಕುಟುಂಬಕ್ಕಾಗಿ ತಮ್ಮನ್ನು ತಾವು ಸವೆಸುವ ಪ್ರತಿ ಮನೆಯ ಸ್ತ್ರೀಯರೆಲ್ಲ ಶ್ರೇಷ್ಠರು. ಇಂತವರಿಗೆ ಕೇವಲ ಸ್ತ್ರೀ ಎಂದರೆ ಖಂಡಿತ ಸಾಕಾಗದು. ಇಂತಹ ಸ್ತ್ರೀಯರನ್ನು ಪೂಜಿಸುವ ಬದಲು ಗೌರವಿಸಿದರೆ, ಪ್ರೋತ್ಸಾಹಿಸಿದರೆ, ಸಂತೋಷವಾಗಿರುವಂತೆ ನೋಡಿಕೊಂಡರೆ ಸಾಕು ದೇವತೆಗಳು ಆ ನೆಲದಲ್ಲಿ ಓಡಾಡಲು ಪ್ರಾರಂಭಿಸುತ್ತಾರೆ. ಸಮೃದ್ಧಿ ತಾನಾಗಿಯೇ ತುಂಬಿ ಬರುತ್ತೆ.
ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯಗಳು..
