ಲೇಖನ
ಮೀನಾ ಸದಾನಂದ್.
(’ಕಥಾ ಅರಮನೆ’ ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ಪೌರ್ಣಮಿ ಬಹು ರಾಷ್ಟ್ರೀಯ ಕಂಪನಿಯಲ್ಲಿ ಮ್ಯಾನೇಜರ್. ಡಬ್ಬಲ್ ಡಿಗ್ರಿ ಮಾಡಿದ್ದಾಳೆ. ಅವಳು ಕಟ್ಟಾ ಕನ್ನಡಾಭಿಮಾನಿ. ಕನ್ನಡ ಮಾಧ್ಯಮದಲ್ಲೇ ಎಸ್.ಎಸ್.ಎಲ್.ಸಿ ವರೆಗೂ ಓದಿದ್ದಾಳೆ. ನಂತರ ಮುಂದೆ ಡಿಗ್ರಿಗೋಸ್ಕರ ಕಾಲೇಜಿನಲ್ಲಿ ಓದಿದ್ದಾಳೆ. ಈಗ ಇಪ್ಪತ್ತೈದು ವರ್ಷಗಳು ತುಂಬಿದೆ. ಇವಳೊಬ್ಬಳೇ ಮಗಳು. ತಂದೆ ಇಲ್ಲ. ತಾಯಿಗೆ ಈಗ ಮಗಳ ಮದುವೆ ಮಾಡಬೇಕೆಂಬ ಜವಾಬ್ದಾರಿ. ಆದರೆ ಪೌರ್ಣಮಿ, ನನ್ನ ನ್ನ ಮದುವೆಯಾಗುವವನು ನನ್ನಂತೆಯೇ ಕನ್ನಡಾಭಿಮಾನಿಯಾಗಿರ ಬೇಕು ಮತ್ತು ನನ್ನ ತಾಯಿಯನ್ನು ನಾನು ಚೆನ್ನಾಗಿ ನೋಡಿಕೊಳ್ಳಲು ಬಿಡಬೇಕು ಹಾಗಿದ್ದರೆ ಮಾತ್ರ ಆ ಮದುವೆಯಾಗಲು ತಯಾರು ಎಂದು ಅಮ್ಮನಿಗೆ ತಿಳಿಸಿದ್ದಾಳೆ. . ಮನೆಯ ಸಂಪೂರ್ಣ ಜವಾಬ್ದಾರಿ ಇವಳದೇ. ತಂದೆ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಯ ಆದಾಯ ಪೌರ್ಣಮಿಯ ಓದು, ತಮ್ಮ ಬದುಕು, ಮನೆ ಬಾಡಿಗೆ ಇದಕ್ಕೇ ಸರಿಹೋಗುತ್ತಿತ್ತು. ಈಗ ತಂದೆಯೂ ಇಲ್ಲಾ, ಅಂಗಡಿಯೂ ಇಲ್ಲಾ. ಇವಳ ಒಳ್ಳೆಯ ಸಂಬಳದಿಂದ ಬದುಕು ಚೆನ್ನಾಗೇ ಸಾಗುತ್ತಿತ್ತು.
ಇವಳಿಗೆ ಕನ್ನಡ ಎಂದರೆ ಮೈ ನವಿರೇಳುತ್ತಿತ್ತು.
ಕನ್ನಡದಲ್ಲಿ ಕವಿತೆಗಳು, ಲೇಖನಗಳು ಕಥೆಗಳು ಬರೆಯುತ್ತಿದ್ದಳು.
ಇವಳ ಆಫೀಸಿನಲ್ಲಿ ಕನ್ನಡದವರು ತುಂಬಾ ಇದ್ದರು. ಹಿಂದಿ ಮಾತನಾಡುವವರಂತೂ ಲೆಕ್ಕವೇ ಇಲ್ಲ. ಇವರ ಮಾತುಗಳೆಲ್ಲಾ ಹಿಂದಿಯಲ್ಲೇ ಇರುತ್ತಿತ್ತು. ನಮ್ಮ ಕನ್ನಡದವರೂ ಅವರುಗಳ ಜೊತೆ ಹಿಂದಿ ಸರಿಯಾಗಿ ಮಾತನಾಡಲು ಬರದವರೂ ಹರಕು ಮುರಕು ಹಿಂದಿಯಲ್ಲೇ ಭಯ್ಯಾ ಭಯ್ಯಾ ಅಂತ ಮಾತನಾಡಲು ಪ್ರಯತ್ನಿಸುತ್ತಿದ್ದರು. ಇದೆಲ್ಲಾ ಕೇಳಿ ಕೇಳಿ ಪೌರ್ಣಮಿಗೆ
ಮೈಯೆಲ್ಲಾ ಪರಚಿಕೊಳ್ಳುವಂತಾಗುತ್ತಿತ್ತು
ಇವಳ ಜೊತೆಯಾಗಲೀ, ಇತರರಾಗಲಿ ಯಾರೂ ಕನ್ನಡ ಮಾತನಾಡುತ್ತಿರಲಿಲ್ಲ. ಬರೀ ಹಿಂದಿಯಲ್ಲಿ ಮಾತುಗಳು, ಆಂಗ್ಲದಲ್ಲಿ ಕೆಲಸ. ಇರಲಿ. ಕಂಪನಿಗಳು ಅಂತರ್ರಾಷ್ಟ್ರೀಯ ಕಂಪನಿಗಳಾದ್ದರಿಂದ ಆಂಗ್ಲದಲ್ಲೇ ಕೆಲಸ ಮಾಡಬೇಕು. ನಿಜ. ಆದರೆ ಒಬ್ಬರಿಗೊಬ್ಬರು ಮಾತನಾಡುವಾಗ ಹಿಂದಿಯಲ್ಲೇ ಮಾತನಾಡಬೇಕೇ.. ಇದು ಪೌರ್ಣಮಿಯ ಪ್ರಶ್ನೆ.
ಈಗಿನ ಮಕ್ಕಳಂತೂ ಪ್ರೈವೇಟ್ ಸ್ಕೂಲುಗಳಲ್ಲಿ ಓದುತ್ತಾರೆ. ಅಲ್ಲಿ ಕನ್ನಡ ಒಂದು ಸಬ್ಜೆಕ್ಟ್ ಇದ್ದರೂ ಅವರು ಅದು ಕಲಿಯಲು ತುಂಬಾ ಕಷ್ಟ ಪಡುತ್ತಾರೆ. ಇನ್ನು ಮಾತನಾಡುವುದಂತೂ ಇಲ್ಲವೇ ಇಲ್ಲ ಎನ್ನಬಹುದು. ಕೆಲವು ದಿನಗಳ ಹಿಂದೆ ಒಬ್ಬ ಕನ್ನಡದವನೇ ತನ್ನ ಮಗನನ್ನು ಆಫೀಸಿಗೆ ಕರೆದುಕೊಂಡು ಹೋಗಿದ್ದ. ಆಗ ಪೌರ್ಣಮಿ ಅವನನ್ನು ಏನು ಓದುತ್ತಿರುವಿ ಪುಟ್ಟಾ ಎಂದಳು. ಆಗ ಆ ಹುಡುಗ ಮೇಡಂ ಪ್ಲೀಝ್ ಆಸ್ಕ್ ಮಿ ದಿಸ್ ಕ್ವಶ್ಚನ್ ಇನ್ ಇಂಗ್ಲಿಷ್ ಎಂದ. ಇದು ಅವನ ತಪ್ಪಲ್ಲ. ಮನೆಯಲ್ಲಿ ಕನ್ನಡ ಮಾತನಾಡಿಸದಿದ್ದ ಅವನ ಅಪ್ಪ ಅಮ್ಮನ ತಪ್ಪು. ಎಂದು ಪೌರ್ಣಮಿಗೆ ಅನಿಸಿತ್ತು.
ಅದಕ್ಕೆ ಒಂದು ದಿನ ತನ್ನ ಕೈ ಕೆಳಗೆ ಕೆಲಸ
ಮಾಡುವವರೆಲ್ಲರನ್ನೂ ಮೀಟಿಂಗ್ ಗಾಗಿ ಕರೆದು, ಆಫೀಸ್ ಕೆಲಸದ ಕುರಿತು ಆಂಗ್ಲದಲ್ಲಿ ಮಾತನಾಡಿ, ನಂತರ ಎಲ್ಲರನ್ನೂ ಉದ್ದೇಶಿಸಿ ಆಂಗ್ಲದಲ್ಲೇ ( ಕನ್ನಡದವರನ್ನು ಬಿಟ್ಟು ಇನ್ನಾರಿಗೂ ಕನ್ನಡ ಬರುವುದಿಲ್ಲವಲ್ಲ ) ಒಂದು ಸಣ್ಣ ಭಾಷಣ ಮಾಡಿದಳು. ಅದೇನೆಂದರೆ ನೋಡಿ ಇದು ಕರ್ನಾಟಕ.. ನಮ್ಮ ಮಾತೃ ಭಾಷೆ ಕನ್ನಡ ನೀವು ತಿನ್ನುವುದು ಕನ್ನಡದ ಮಣ್ಣಿನಿಂದ ಬೆಳೆದ ಅಕ್ಕಿಯ ಅನ್ನ, ಕನ್ನಡದ ಮಣ್ಣಲ್ಲಿ ಬೆಳೆದ ಆಹಾರ ಪದಾರ್ಥಗಳು, ತರಕಾರಿ, ನೀವು ಬಾಳುತ್ತಿರುವುದು ಕನ್ನಡದ ನೆಲ, ಹೀಗೆಲ್ಲಾ ಇದ್ದಾಗ ಕನ್ನಡ ಭಾಷೆ ಮಾತ್ರ ಏಕೆ ಕಲಿಯುವುದಿಲ್ಲ, ನಿಮ್ಮ ರಾಜ್ಯಗಳಿಗೆ ಹೋದಾಗ ನೀವು ನಿಮ್ಮ ಭಾಷೆಯಲ್ಲೇ ಮಾತನಾಡಿ, ಆದರೆ ನಮ್ಮ ಕನ್ನಡ ರಾಜ್ಯದಲ್ಲಿ ಏಕೆ ಕನ್ನಡ ಮಾತನಾಡುವುದಿಲ್ಲ? ಕನ್ನಡ ಕಲಿಯಿರಿ. ಬೇಕಿದ್ದರೆ ಕನ್ನಡ ಕಲಿಸುವ ಟೀಚರ್ ಗಳನ್ನು ಅಪಾಯಿಂಟ್ ಮಾಡುತ್ತೇನೆ. ನನ್ನ ಖರ್ಚಿನಲ್ಲಿ. ನೀವು ಯಾವ ಸಮಯ ಹೇಳುವಿರೋ ಆ ಸಮಯಕ್ಕೇ ಕನ್ನಡ ಪಾಠಕ್ಕೆ ಏರ್ಪಾಡು ಮಾಡುತ್ತೇನೆ.
ಎನ್ನುತ್ತಿದ್ದ ಹಾಗೇ ಹಿಂದಿಯವರೆಲ್ಲಾ ನಗುತ್ತಿದ್ದರು. ಒಬ್ಬನಂತೂ ಗಹಗಹಿಸಿನಗುತ್ತಿದ್ದ. ಅವನನ್ನು ಉದ್ದೇಶಿಸಿ, ಎಷ್ಟು ವರ್ಷದಿಂದ ಕರ್ನಾಟಕದಲ್ಲಿ ಇರುವೆ? ಕನ್ನಡ ಕಲಿತಿರುವೆಯಾ ಎದ್ದು ನಿಂತು ಹೇಳು.. ಯಾಕೆ ಹೀಗೆ ನಗುತ್ತಿರುವಿ ಎಂದಳು. ಆಗ ಅವನು ಹೇಳಿದ ಮಾತು ಕೇಳಿ ಇವಳಿಗೆ ಭೂಮಿಯೇ ಕುಸಿದಂತಾಯಿತು.
ಅವನು ಹೇಳಿದ್ದೇನು? ಮೇಡಂ ನಾನು ಹತ್ತು ವರ್ಷಗಳಿಂದ ಕರ್ನಾಟಕದಲ್ಲಿದ್ದೇನೆ. ನಾನು ಇಲ್ಲಿಗೆ ಬಂದಾಗ ಕನ್ನಡ ಕಲಿಯ ಬೇಕೆಂದೇ ನಿರ್ಧಾರ ಮಾಡಿದ್ದೆ. ಆದರೆ ನನಗೆ ಕನ್ನಡ ಕಲಿಯುವ ಅವಕಾಶವೇ ಬರಲಿಲ್ಲ. ಕಾರಣ ಇಷ್ಟೇ.. ನಿಮ್ಮ ಕನ್ನಡದವರೇ ಹಿಂದಿ ಬರದಿದ್ದರೂ ಭಯ್ಯಾ, ಭಯ್ಯಾ ಅಂತ ಹಿಂದಿಯಲ್ಲೇ ಮಾತನಾಡಿಸುವಾಗ ನಾವೇಕೆ ಕಷ್ಟ ಪಟ್ಟು ಕಲಿಯಬೇಕು ಮೇಡಂ ಮೊನ್ನೆ ಪಾನೀ ಪೂರಿ ತಿನ್ನಲು ಹೋದೆ. ಪಾನೀ ಪೂರಿ ಹಾಕುವವನು ಹಿಂದಿಯವನು. ಅವನ ಅಂಗಡಿಯಲ್ಲಿ ಪಾನೀ ಪೂರಿ ತಿನ್ನಲು ಬಂದಿದ್ದ ನಿಮ್ಮ ಕನ್ನಡದ ಜನರೇ ಆ ಅಂಗಡಿಯವನ ಜೊತೆ ಭಯ್ಯಾ ಭಯ್ಯಾ ಅಂತ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಅವನಿಗೆ ಕನ್ನಡ ಬಂದರೂ..
ನೆನ್ನೆ ಸ್ಟೇಷನರಿ ಅಂಗಡಿಗೆ ಹೋಗಿದ್ದೆ. ಅದು ಸೇಠೂ ಅಂಗಡಿ. ಅವನು ಹುಟ್ಟಿದಾರಭ್ಯ ಕರ್ನಾಟಕದವನು. ಒಬ್ಬ ಹತ್ತು ವರ್ಷದ ಹುಡುಗಿ ಬಂದು ಭಯ್ಯಾ ಎಹ್ ಟೈಪ್ ಟೇಪ್ ಹೈ ಕ್ಯಾ ಅಂದಳು. ಆಗ ಅಂಗಡಿಯವನು ಕನ್ನಡದಲ್ಲೇ ಕೇಳಮ್ಮಾ ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದವನು ಅಂದ.
ಹೀಗಿರುವಾಗ ನಾವೇಕೆ ಕಷ್ಟ ಪಟ್ಟು ಕನ್ನಡ ಕಲಿಯಬೇಕು ಮೇಡಂ ಎಂದ.
ಆಗ ಅನಿಸಿದ್ದು ಕನ್ನಡ ಕಲಿಯದಿರುವುದು ಬೇರೆ ರಾಜ್ಯದಿಂದ ಬಂದವರ ತಪ್ಪಲ್ಲಾ, ನಮ್ಮ ಕನ್ನಡದವರದೇ ತಪ್ಪು ಮೊದಲು ಕನ್ನಡದವರನ್ನು ಸರಿ ಮಾಡಬೇಕು, ಇದು ಸಾಧ್ಯವೇ… ಎಂದು ತಲೆ ಮೇಲೆ ಕೈ ಹೊತ್ತು ಕುಳಿತಳು.
