ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಇದರಿಂದ ವಿದ್ಯಾರ್ಥಿಗಳು ಬಹುಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯದ ಕ್ರೀಡಾ ವಿಭಾಗದಿಂದ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ಕ್ರಿಕೆಟ್ ಚಾಂಪಿಯನ್ ಸೀಜನ್-೧ ರ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮಹಾವಿದ್ಯಾಲಯವು ಉತ್ತಮ ಆಟದ ಮೈದಾನ ಹೊಂದಿದೆ. ಈ ಮೈದಾನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಕ್ರೀಡಾ ಪ್ರತಿಭೆಯನ್ನು ಬೆಳೆಸಿಕೊಂಡು ರಾಜ್ಯ,ರಾಷ್ಟ್ರಮಟ್ಟದವರೆಗೂ ಹೋಗುವಂತಾಗಬೇಕೆಂದರು.
ಬಿಎಲ್‌ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಎ.ಪವಾರ ಮಾತನಾಡಿದರು. ವೇದಿಕೆಯಲ್ಲಿ ದೈಹಿಕ ನಿರ್ದೇಶಕ ವ್ಹಿ.ಎನ್.ರಜಪೂತ, ಎಸ್.ಜೆ.ಸೂರ್ಯವಂಶಿ, ಎಂ.ಆರ್.ಮಮದಾಪುರ, ಲಕ್ಷ್ಮಣ ಬ್ಯಾಡಗಿ, ಸಂಗಮೇಶ ತೆಲಗಿ ಇದ್ದರು.
ಪ್ರೊ.ಎಂ.ಎ.ಯಾಧವ ಸ್ವಾಗತಿಸಿ,ನಿರೂಪಿಸಿದರು. ಸೀಜನ್-೧ರ ಚಾಂಪಿಯನ್ ಟ್ರೋಪಿಯನ್ನು ಬಿಎಲ್‌ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ತಂಡವು ಪಡೆದುಕೊಂಡಿತ್ತು.

