ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಗ್ರಾಮಾಡಳಿತಾಧಿಕಾರಿಗಳ ಸಂಘವು ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿತ್ತು.
ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಗ್ರಾಮಾಡಳಿತಾಧಿಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಸಂತೋಷ ಕುಂಟೋಜಿ ಇತರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲರು ಗ್ರಾಮಾಡಳಿತಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ನಮ್ಮ ಶಾಸಕರ ಅನುದಾನದಲ್ಲಿ ಕಟ್ಟಡ ನಿರ್ಮಿಸಿಕೊಡಲಾಗುವದು. ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರರಿಗೆ ಈ ಕುರಿತು ನಮಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ ಅವರು, ಗ್ರಾಮಾಡಳಿತಾಧಿಕಾರಿಗಳ ಇತರೇ ಬೇಡಿಕೆಗಳ ಕುರಿತು ಕಂದಾಯ ಸಚಿವರ ಗಮನಕ್ಕೆ ತಂದು ಪ್ರಾಮಾಣಿಕವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಗ್ರಾಮಾಡಳಿತಾಧಿಕಾರಿ ಸಂಘದ ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಸಿದ್ದು ಶಿರಶ್ಯಾಡ, ಕೊಲ್ಹಾರ ತಾಲೂಕಾಧ್ಯಕ್ಷ ಭೀಮಪ್ಪ ಜಿದ್ದಿಮನಿ, ನಿಡಗುಂದಿ ತಾಲೂಕಾಧ್ಯಕ್ಷ ನಾನಾಗೌಡ ಪಾಟೀಲ, ಬಸವಂತ ಕಮತ, ವಿನೋದ ಕುಮಟಗಿ, ಸಂಜು ಜಾಧವ, ರಮಾನಂದ ಚಕ್ಕಡಿ, ಕಾಂಚನಾ ಸಂದಿಮನಿ, ವಿದ್ಯಾ ಅವಟಿ, ಅಂಜಮ್ ಅವಟಿ, ಎಸ್.ಎಂ.ಇಬ್ರಾಹಿಂಪುರ, ಚಪ್ಪರಬಂದ, ಅಮೃತಾ ಗೊಲ್ಲಪ್ಪನವರ, ಸುನೀತಾ,ಮಹಾಂತೇಶ ತಳೇವಾಡ, ಸಚೀನ ಮುರನಾಳ, ನವೀನಕುಮಾರ, ಸಂತೋಷ ಸಂಗೋಗಿ, ಶಿವಾನಂದ ಹಳ್ಳೂರ, ನ್ಯಾಯವಾದಿ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಪುರಸಭೆ ಸದಸ್ಯ ಪ್ರವೀಣ ಪೂಜಾರಿ ಇತರರು ಇದ್ದರು.
ಇದಕ್ಕೂ ಮುನ್ನ ರೈತ ಸಂಘವು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಕೆಲ ಹೊತ್ತು ಮುಷ್ಕರದಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.

