ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಬ್ಬಿನ ರಾವುದಿ ತುಂಬಿಕೊಂಡು ತೆರಳುತ್ತಿದ್ದ ಬೋಲೆರೋ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.
ತಾಲೂಕಿನ ಗಣಿಹಾರ ಗ್ರಾಮದಿಂದ ಸಿಂದಗಿಯೆಡೆಗೆ ಕಬ್ಬಿನ ರಾವುದಿಯನ್ನು ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿ ಬೆಂಕಿ ಹೊತ್ತುಕೊಂಡಿದೆ. ಕಬ್ಬಿನ ರಾವುದಿಗೆ ಹೊತ್ತಿಕೊಂಡ ಬೆಂಕಿ ತ್ವರಿತವಾಗಿ ವಾಹನಕ್ಕೆ ಆವರಿಸಿಕೊಂಡಾಗ ಸ್ಥಳದ ಸಮೀಪವಿದ್ದ ನಿವಾಸಿಗಳು ಪಂಪ್‌ಸೆಟ್ ನೀರನ್ನು ಬಳಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಕಬ್ಬಿನ ರಾವುದಿ ಹಾಗೂ ಲಕ್ಷಾಂತರ ಮೌಲ್ಯದ ವಾಹನ ಹಾನಿಗೊಂಡಿದೆ. ಕಾರ್ಯಾಚರಣೆಯಲ್ಲಿ ಎಫ್‌ಎಸ್‌ಟಿಒ ಎಂ.ಬಿ,ಪೂಜಾರಿ, ಸಿಬ್ಬಂದಿಗಳಾದ ಮಚೇಂದ್ರ ಶಿಂಧೆ. ಹಣಮಂತ ವಾಯ್, ಅಜರುದ್ದಿನ ಚಿಟಗುಪ್ಪಿ, ಹಣಮಂತ ಕುಂಬಾರ, ಶಾಂತಪ್ಪ ಬಿರಾದಾರ, ಕೃಷ್ಣಪ್ಪ ಪೂಜಾರಿ ಸೇರಿದಂತೆ ಅನೇಕರಿದ್ದರು. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

