ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆನೆಕಾಲು ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ಅನಿಕೇತನ ವಲ್ಲಭ ಹೇಳಿದ್ದಾರೆ.
ಮಂಗಳವಾರ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ವಿಭಾಗದ ವತಿಯಿಂದ, ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್.ಎಸ್.ಎಸ್ ಸಹಯೋಗದೊಂದಿಗೆ ದುಗ್ಧರಸ ಆನೆಕಾಲು ರೋಗ (ಫೈಲೇರಿಯಾಸಿಸ್) ಕುರಿತು ಆಯೋಜಿಸಲಾಗಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆನೆಕಾಲು ರೋಗವು ವುಚೆರೇರಿಯಾ ಬ್ಯಾಂಕ್ರಾಫ್ಟಿ ಎಂಬ ಪರಾವಲಂಬಿ ಜೀವಿಯಿಂದ, ಕ್ಯೂಲೆಕ್ಸ ಎಂಬ ಸೊಳ್ಳೆ ಕಡಿತದಿಂದ, ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವ ಕಾಯಿಲೆಯಾಗಿದೆ. ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಧ್ಯೇಯದೊಂದಿಗೆ, ಪರಿಸರದ ಸ್ವಚ್ಛತೆಯನ್ನು ಕಾಪಾಡಿದರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಈ ರೋಗವು ಶರೀರವನ್ನು ವಿಕಾರಗೊಳಿಸಿ, ದೈನಂದಿನ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಹೇಳಿದ ಅವರು, ಈ ರೋಗಕ್ಕೆ ಲಭ್ಯವಿರುವ ನಾನಾ ರೀತಿಯ ಶಸ್ತ್ರ ಚಿಕಿತ್ಸೆ ಪದ್ಧತಿಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಶಸ್ತ್ರ ಚಿಕಿತ್ಸೆ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಡಾ. ಹೇಮಂತ, ಆನೆಕಾಲು ರೋಗವು ಹರಡುವ ವಿಧಾನ, ಪರಾವಲಂಬಿ ಜೀವಿಯ ಜೀವನಚಕ್ರ, ರೋಗದ ವಿವಿಧ ಗುಣಲಕ್ಷಣಗಳು, ಅದನ್ನು ಕಂಡುಹಿಡಿಯುವ ಬಗೆ, ರೋಗವನ್ನು ನಿಯಂತ್ರಿಸುವ ವಿಧಾನಗಳು ಹಾಗೂ ಡಿ.ಇ.ಸಿ ಜೊತೆಗೆ ಅದರ ಇತರ ಔಫಧಿ ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಸಿ. ಬಿ. ನಾಟೀಕಾರ ಮಾತನಾಡಿ, ಬಿ.ಎಲ್.ಡಿ.ಇ. ಆಸ್ಪತ್ರೆಯ ಜನಾನುರಾಗಿ ಕಾರ್ಯಗಳು ಮತ್ತು ನಿರಂತರ ಆರೋಗ್ಯ ಅರಿವು ಕಾರ್ಯಕ್ರಮಗಳ ಆಯೋಜನೆಯನ್ನು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಲೀಡರ್ ಛಾಯಾಧೇವಿ ವಿದ್ಯಾಪುರ ಮಾತನಾಡಿ, ಈ ರೋಗ ನಿಯಂತ್ರಣ ಮತ್ತು ಜಾಗೃತಿ ಕೈಗೊಳ್ಳಲು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮತ್ತು ಪ್ರಾಧ್ಯಾಪಕಿಯಾದ ಡಾ. ವಿಜಯಾ ಪಾಟೀಲ ಅವರ ಮಾರ್ಗದರ್ಶನವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್. ಎಸ್. ದೀಕ್ಷಿತ, ಎ. ಜಿ. ಸಕ್ರಿ ಮತ್ತು ಬಿ.ಎಲ್.ಡಿ.ಇ. ಆಸ್ಪತ್ರೆಯ ಕಿರಿಯ ವೈದ್ಯರು, ಸಂವಾದ ನಡೆಸಿದರು. ಈ ವೇಳೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಸಂಚಾಲಕರಾದ ಡಾ. ಮಹಾದೇವಿ ಸುಂಗಾರೆ ವಂದಿಸಿದರು.

