ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತ ತಡೆಯುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಜಾಗೃತಿ ಮೂಡಿಸಬೇಕು. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ರಸ್ತೆ ನಿಯಮಗಳ ಪಾಲನೆ ಮಾಡುವಂತೆ ವಾಹನ ಸವಾರರು-ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸುವಂತೆ ಅವರು ಸೂಚನೆ ನೀಡಿದರು.
ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಕೈಕೊಳ್ಳಬೇಕಾದ ರಸ್ತೆ ಸುಧಾರಣೆ ಕ್ರಮಗಳ ಕುರಿತು ತಿಳಿಸಿದ ಅವರು, ಸೋಲಾಪೂರ ಬೈಪಾಸ್ ಸರ್ಕಲ್‌ನಲ್ಲಿ ಅಂಗಡಿಕಾರರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಲ್ಲದೇ, ರಸ್ತೆಯ ಮುಂಭಾಗ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಒತ್ತುವರಿಯಾದ ರಸ್ತೆಯನ್ನು ತೆರವುಗೊಳಿಸಲು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು, ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ವಹಿಸಬೇಕು. ಸೋಲಾಪೂರ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಒನ್‌ವೇ ಇದ್ದು, ಅರಕೇರಿ, ಉಮದಿ ರಸ್ತೆ ಕಡೆಯಿಂದ ಒನ್‌ವೇ ಉಲ್ಲಂಘಿಸಿ ಎದುರಿಗೆ ವಾಹನಗಳ ಸಂಚಾರದಿಂದ ಅಪಘಾತಗಳಾಗುವ ಸಂಭವದ ಹಿನ್ನಲೆಯಲ್ಲಿ ಈ ರಸ್ತೆಯ ಸಂಚಾರ ನಿರ್ಬಂಧ ಅವಶ್ಯವಾಗಿರುತ್ತದೆ. ಸೋಲಾಪೂರ ಕಡೆಗೆ ಹೋಗುವ ಪ್ರಯಾಣಿಕರ ಸಲುವಾಗಿ ರಸ್ತೆಯ ಎಡಬದಿಗೆ ಲಘು ಬಸ್‌ನಿಲ್ದಾಣ ನಿರ್ಮಾಣ ಮಾಡುವ ಅವಶ್ಯಕತೆ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಲ್‌ದ ನಾಲ್ಕು ಕಡೆಗಳಲ್ಲಿ ಸಿಸಿಟಿವ್ಹಿ ಅಳವಡಿಸುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಡರ್‌ಪಾಸ್ ಕೆಳಗಡೆ ಬೃಹತ್ ವಾಹನಗಳನ್ನು ಕಾರ್, ಬೈಕ್‌ಗಳನ್ನು ನಿಲ್ಲಿಸುತ್ತಿದ್ದು, ಈ ಬಗ್ಗೆ ಅಂಡರ್‌ಪಾಸ್ ಕೆಳಗೆ ಇರುವ ಖಾಲಿ ಜಾಗೆಯನ್ನು ಇಳಿಜಾರು ಜಾಗೆಯನ್ನಾಗಿ ಮಾಡಿ ಖಾಲಿ ಇರುವ ಸ್ಥಳದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ವಿವಿಧೆಡೆ ಇರುವ ವೃತ್ತಗಳಲ್ಲಿ ಸೂಚನಾ ಫಲಕ ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಸೋಲಾಪೂರ – ವಿಜಯಪುರ ರಾಷ್ಟ್ರೀಯ ಹೆದ್ದಾರಿ ರಸ್ತೆ ರೂಪಾದೇವಿ ಸ್ಕೂಲ್ ಹತ್ತಿರದಲ್ಲಿ ಹಂಚಿನಾಳ ಗ್ರಾಮದಿಂದ ಪ್ರಮುಖ ರಸ್ತೆಗೆ ಸಂಪರ್ಕಿಸುತ್ತಿದ್ದು, ಏಕಮುಖ ರಸ್ತೆಗೆ ವಿರುದ್ದ ದಿಕ್ಕಿನಲ್ಲಿ ಸಂಚಾರ ಮಾಡುತ್ತಿದ್ದು, ಇದು ಅಪಘಾತ ಸಂಭವಿಸುವ ಸ್ಥಳವಾಗಿರುತ್ತದೆ. ಈ ಸ್ಥಳದಲ್ಲಿ ರೋಡ ಡಿವೈಡರ್ ಹೆಚ್ಚಿಗಿದ್ದು, ವಾಹನ ಸವಾರರು ತಮ್ಮ ವೇಗವನ್ನು ನಿಯಂತ್ರಿಸದೇ ಇರುವುದರಿಂದ ಅಪಘಾತಗಳಾಗುವುದರಿಂದ ಈ ರಸ್ತೆಯಲ್ಲಿ ಡಿವೈಡ್‌ರದ ಅಂತರವನ್ನು ಕಡಿಮೆ ಮಾಡುವಂತೆ ಅವರು ಸೂಚನೆ ನೀಡಿದರು.
ಇಂಡಿ ಅಂಡರ್ ಬೈಪಾಸ್ ಸ್ಥಳದಲ್ಲಿ ಇಂಡಿ ಕಡೆಯಿಂದ ಏಖಮುಖ ರಸ್ತೆಗೆ ವಿರುದ್ದವಾಗಿ ವಾಹನಗಳು ಬಂದು ಪ್ರಮುಖ ರಸ್ತೆಗೆ ಹಾಗೂ ಸೋಲಾಪೂರ ಕಡೆಯಿಂದ ಇಂಡಿ ಕಡೆಗೆ ಹೋಗುವ ವಾಹನಗಳು ಸರ್ವೀಸ್ ರೋಡ ಕೂಡುವ ಸ್ಥಳದಲ್ಲಿ ಡಿವೈಡರ್ ಅಂತರ ಕಡಿಮೆ ಮಾಡಬೇಕು. ಇಂಡಿ ಅಂಡರ್‌ಪಾಸ್‌ದಲ್ಲಿ ಅಂಗಡಿಕಾರರು ರಸ್ತೆಯನ್ನು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ವಿಜಯಪುರ – ಸೋಲಾಪೂರ ರಸ್ತೆ ಐಓಸಿ ಹತ್ತಿರ ಸೋಲಾಪೂರ ಕಡೆಯಿಂದ ಆಗಮಿಸುವ ವಾಹನಗಳು ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಹೋಗುವ ಸಂದರ್ಭದಲ್ಲಿ ಸರ್ವೀಸ್ ರಸ್ತೆ ಕೂಡಿ ಹೋಗಬೇಕಾಗಿದ್ದು, ಆ ಸಂದರ್ಭದಲ್ಲಿ ಎದುರಿಗೆ ಏಕಮುಖವಾಗಿ ವಾಹನಗಳು ಬರುತ್ತಿದ್ದು, ಇದು ಜನ ದಟ್ಟಣೆ ಹಾಗೂ ಅಪಘಾತಕ್ಕೆ ಕಾರಣವಾಗುವ ಸಂಭವವಿರುವುದರಿಂದ ಸೂಕ್ತ ಸುಗಮ ವಾಹನ ಸಂಚಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಕೋಲ್ಹಾರ ಸೇತುವೆ ಮೇಲೆ ಬೀದಿ ದೀಪಗಳನ್ನು ಹಾಗೂ ಸುಮಾರು ಹತ್ತು ಸಿಸಿಟಿವಿ ಅಳವಡಿಸಬೇಕು. ನಗರದಲ್ಲಿ ವಾಹನ ದಟ್ಟಣೆ ತಡೆ, ಅವಶ್ಯಕತೆ ಇರುವಲ್ಲಿ ಸೂಚನಾ ಫಲಕ ಹಾಗೂ ಮಾಹಿತಿ ಫಲಕ ಅಳವಡಿಸುವುದು. ಸಿಂದಗಿ ಅಂಡರ್‌ಪಾಸ್‌ದ ಸರ್ಕಲ್‌ದಲ್ಲಿ ಸಿಂದಗಿ ಕಡೆಯಿಂದ ಎನ್‌ಎಚ್ ರಸ್ತೆ ಕೂಡವ ಈಡಿee ಐeಜಿಣ ಕಡೆ ಹೋಗುವ ಸ್ಥಳದಲ್ಲಿ ಟೈರ್ ಅಂಗಡಿಯವರು ರಸ್ತೆಯನ್ನು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸುವ ಅವಶ್ಯಕತೆ ಇರುತ್ತದೆ. ನಗರದ ಕೆಲವು ರಸ್ತೆಯ ಸುಧಾರಣೆ ಮಾಡುವುದರ ಜೊತೆಗೆ ರಸ್ತೆಯ ತಳಮಟ್ಟವನ್ನು ಹೆಚ್ಚಿಸಿ ಸುಧಾರಣೆ ಕೈಕೊಳ್ಳುವದು ಅವಶ್ಯವಾಗಿರುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಶಸ್ತçಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಪೀಟರ್ ಅಲೆಕ್ಸಾಂಡರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

“ವಾಹನಗಳ ಸುಗಮ ಸಂಚಾರಕ್ಕಾಗಿ ಅನಗತ್ಯವಾದ ರೋಡ್ ಬ್ರೆಕ್‌ಗಳನ್ನು ತೆರವುಗೊಳಿಸಬೇಕು. ರಸ್ತೆ ತಿರುವುಗಳಲ್ಲಿ ಅಗತ್ಯ ಮಾಹಿತಿ ಹಾಗೂ ಸೂಚನಾ ಫಲಕ ಅಳವಡಿಸಬೇಕು. ಪದೇ-ಪದೇ ಅಪಘಾತಗಳು ಸಂಭವಿಸುವ ಪ್ರದೇಶ-ಸ್ಥಳಗಳಲ್ಲಿ ಎಚ್ಚರಿಕೆ ಮಾಹಿತಿ ವಿವರದ ಫಲಕ ಹಾಕಬೇಕು. ಮತ್ತು ಅಲ್ಲಿ ಅಪಘಾತಗಳು ಸಂಭವಿಸದಂತೆ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು. ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸ್ಥಳ ತನಿಖೆ ಕೈಗೊಂಡು ಪ್ರಸ್ತಾವನೆ ಸಹಿತ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕು. “
– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ

