ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಮಿನಿವಿಧಾನಸೌಧದ ಮುಂಭಾಗದ ಆವರಣಗೋಡೆಗೆ ಹೊಂದಿಕೊಂಡಂತೆ ಗ್ರಾಮಾಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತ್ತು.
ಮುಷ್ಕರಕ್ಕೆ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಗ್ರಾಮಾಡಳಿತಾಧಿಕಾರಿಗಳು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿದ್ದಾರೆ. ಇವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರ ಪ್ರಮುಖ ಬೇಡಿಕೆಗಳಾದ ಸುಸಜ್ಜಿತವಾದ ಕಟ್ಟಡ, ಉಪಯುಕ್ತವಾದ ಉಪಕರಣಗಳು ಸೇರಿದಂತೆ ಇತರೇ ಮೂಲಸೌಲಭ್ಯಗಳನ್ನು ಸರ್ಕಾರ ಕೂಡಲೇ ಒದಗಿಸಬೇಕೆಂದು ಆಗ್ರಹಿಸಿದ ಅವರು, ಗ್ರಾಮಾಡಳಿತಾಧಿಕಾರಿಗಳು ತಮ್ಮ ಕರ್ತವ್ಯದಿಂದ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ಎಲ್ಲ ಪ್ರಮಾಣ ಪತ್ರಗಳ ವಿತರಣೆ ಸ್ಥಗಿತಗೊಂಡಿವೆ. ಕೂಡಲೇ ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದರು.
ಇವರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ ಬರೆದ ಪ್ರತ್ಯೇಕ ಮನವಿ ಪತ್ರಗಳನ್ನು ರವಾನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ, ಮುಖಂಡರಾದ ಶಶಿಧರ ಯರನಾಳ, ಮನ್ನಾನ ಶಾಬಾದಿ, ನಿಂಗಪ್ಪ ಅವಟಿ, ಅಣ್ಣುಗೌಡ ಗುಜಗೊಂಡ, ಮಲ್ಲಿಕಾರ್ಜುನ ಅವಟಿ ಇತರರು ಇದ್ದರು.
ಇಂದಿನ ಮುಷ್ಕರದಲ್ಲಿ ಗ್ರಾಮಾಡಳಿತಾಧಿಕಾರಿಗಳ ರಾಜ್ಯ ಘಟಕದ ಉಪಾಧ್ಯಕ್ಷ ಸಂತೋಷ ಕುಂಟೋಜಿ, ತಾಲೂಕು ಸಂಘದ ಗೌರವಾಧ್ಯಕ್ಷ ಸಂತೋಷ ಸಂಗೋಗಿ, ನಾನಾಗೌಡ ಪಾಟೀಲ, ಭೀಮಪ್ಪ ಜಿದ್ದಿಮನಿ, ವಿನೋದ ಕುಮಟಗಿ, ಬಸವಂತ ಕಮತ, ಅಮೃತ ಗೊಲ್ಲಪ್ಪನವರ, ವಿದ್ಯಾ ಅವಟಿ, ಅಂಜಮ್ ಅವಟಿ ಇತರರು ಭಾಗವಹಿಸಿದ್ದರು.

