ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜೀವನದ ಪ್ರತಿಕ್ಷಣಗಳನ್ನು ಆನಂದದಿಂದ ಕಳೆಯಲು ಆಧ್ಯಾತ್ಮಿಕ ವಿಚಾರಧಾರೆಗಳ ಅಗತ್ಯತೆಯಿದೆ ಎಂದು ಆಲಮೇಲ ವಿರಕ್ತಮಠದ ಜಯದೇವ ಮಲ್ಲಿಬೊಮ್ಮಶ್ರೀಗಳು ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರಮಠದ ಆವರಣದಲ್ಲಿ ಗುರುವಾರ ಮಹಾಶಿವರಾತ್ರಿ ಅಂಗವಾಗಿ ಆರಂಭಗೊಂಡ ಅಮೃತಾನಂದಶ್ರೀಗಳ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜೀವನ ಶಾಶ್ವತವಲ್ಲ. ಆದರೆ ಜೀವನ ಪುಸ್ತಕದ ಪ್ರತಿಪುಟ ನೆನೆಪಿನಲ್ಲಿ ಉಳಿಯುವಂತೆ ಬಾಳಬೇಕು. ನಮ್ಮ ದೇಶ ಪುರಾತನ ಪರಂಪರೆಯ ಪುಣ್ಯಭೂಮಿ. ಇಲ್ಲಿ ಸತ್ಸಂಗ, ಪುರಾಣ, ಪೂಜೆ ಪುನಸ್ಕಾರಗಳು ಪ್ರತಿ ಮನೆ, ಮಂದಿರಗಳಲ್ಲಿ ತುಂಬಿ ತುಳುಕುತ್ತೀವೆ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ನಾವು ಜೀವನದಲ್ಲಿ ಮೂರು ಜ್ಞಾನಗಳನ್ನು ಕಾಣುತ್ತೇವೆ. ಅಜ್ಞಾನ, ವಿಜ್ಞಾನ, ಸುಜ್ಞಾನ. ಈಗ ನಾವು ಅಜ್ಞಾನದ ಜಗತ್ತಿನಿಂದ ಸುಜ್ಞಾನದ ಜಗದೆಡೆಗೆ ಸಾಗಬೇಕಾಗಿದೆ. ಜೀವನದಲ್ಲಿ ಆಸೆಗಳಿರಬೇಕು ವಿನಹಃ ಎಂದಿಗೂ ದುರಾಸೆಗಳಿರಬಾರದು ಎಂದರು.
ಬೋರೆಗಾಂವ ಅಮೋಘಸಿದ್ಧಮಠದ ಬಸವರಾಜಶ್ರೀಗಳು ಮಾತನಾಡಿ, ಸಂತರು, ಶರಣರು, ಮಹಾತ್ಮರು ನುಡಿದ ಮಾತುಗಳನ್ನು ಮೆಲುಕು ಹಾಕುವುದೇ ಸತ್ಸಂಗ, ಪ್ರವಚನಗಳಾಗಿವೆ. ಶರಣ ಮಹಾತ್ಮರ ನುಡಿಗಳು ನಮಗೆ ಗುರಿ ತಲುಪಲು ಸಹಕಾರಿಯಾಗಿವೆ. ನಮ್ಮ ನಡೆ, ನುಡಿಯಲ್ಲಿ ಸತ್ಯ, ಸತ್ವವಿರಬೇಕು. ಆಗ ಮಾತ್ರ ನಾವು ಶುದ್ಧರಾಗಲು ಸಾಧ್ಯ ಎಂದರು.
ನಿವಾಳಖೇಡ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದಶ್ರೀಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮುಳಸಾವಳಗಿಯ ನಿಂಗರಾಯರು ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಮುಳಸಾವಳಗಿ ಶರಣಗೌಡ ಮಾಲಿಪಾಟೀಲ ಹಾಗೂ ಅಡಿವೆಪ್ಪ ಕೊಂಡಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಚನದ ನಂತರ ಮಹಾಪ್ರಸಾದ ಜರುಗಿತು.
ಅಂತರರಾಷ್ಟ್ರೀಯ ಯೋಗಪಟು ಹಾಗೂ ಪ್ರವಚನಕಾರ ಅಮೃತಾನಂದಶ್ರೀಗಳು, ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ಸೋಮನಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಸೂಳಿಭಾವಿ, ಸಾಹೇಬಗೌಡ ರೆಡ್ಡಿ, ನಿಂಗರಾಯ ಸಂಗೋಗಿ, ಪಿಡ್ಡಪ್ಪ ಗಣಜಲಿ, ವಿಧ್ಯಾಧರ ಸಂಗೋಗಿ, ಚಂದ್ರಶೇಖರ ಗಣಜಲಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೋಳ್ಳಿ, ಪ್ರಭಾಕರ ಸೂಳಿಭಾವಿ, ಸುಭಾಸ ಕಬಾಡಗಿ, ಹಣಮಂತ ಸಂಗೋಗಿ, ಬಾಲಚಂದ್ರ ಗುಡ್ಡಳ್ಳಿ, ಜಿ.ಪಿ.ಬಿರಾದಾರ ಸೇರಿದಂತೆ ಚಿಕ್ಕರೂಗಿ, ಮುಳಸಾವಳಗಿ ಗ್ರಾಮಸ್ಥರು ಇದ್ದರು.

