ಉದಯರಶ್ಮಿ ದಿನಪತ್ರಿಕೆ
ಇಂಡಿ: ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಸಮಸ್ಯೆಯನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಿನಿ ವಿಧಾನಸೌಧ ಎದುರು ನಡೆಸುತ್ತಿರುವ ಅನಿಷ್ಠಾವಧಿ ಮುಷ್ಕರ ಗುರುವಾರ ನಾಲ್ಕನೆಯ ದಿನ ಮುಂದುವರೆದಿದೆ.
ಗ್ರಾಮ ಆಡಳಿತ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಕಂದಾಯ ಇಲಾಖೆಯ ಕೆಲಸ ಕಾರ್ಯ ಗಳನ್ನು ಸ್ಥಗಿತಗೊಳಿಸಿದ್ದರಿಂದ ಇಂಡಿ ತಾಲೂಕಿನಲ್ಲಿ ಗ್ರಾಮ ಆಡಳಿತ ವ್ಯವಸ್ಥೆ ಸ್ತಬ್ಧಗೊಂಡಿದ್ದು ಸಾರ್ವಜನಿಕರು ಸರಕಾರಿ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.
ಮೊಬೈಲ ತಂತ್ರಾಂಶಗಳಾದ ಸಂಯೋಜನೆ, ಇ ಆಫೀಸ್ ಆಧಾರ ಸೀಡ್, ಲ್ಯಾಂಡ ಬೀಟ್, ಬಗರ ಹುಕುಂ, ಹಕ್ಕು ಪತ್ರ ಸೇರಿ೨೧ ಮೊಬೈಲ ಅಪ್ಲಿಕೇಷನ್ ಅನ್ ಇನ್ ಸ್ಟಾಲ ಮಾಡಿ ಮುಷ್ಕರ ಆರಂಭಿಸಿದ್ದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಯಲಗೊಂಡ ಪೂಜಾರಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವದು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಮಾಡುವದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವದು,ಅಂತರ ಜಿಲ್ಲಾ ವರ್ಗಾವಣೆ ಮರು ಸ್ಥಾಪಿಸುವದು, ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡುವ ಬಗ್ಗೆ,ಆಯುತ್ಕಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸುವ ಬಗ್ಗೆ ಸೇರಿದಂತೆ ಹಲವಾರು ಬೇಡಿಕೆ ಈಡೇರುವ ವರೆಗೆ ಮುಷ್ಕರ ನಡೆಸುವದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರರವರು ಸಂಘದ ಬೆಂಬಲ ವ್ಯಕ್ತ ಪಡಿಸಿ , ಗಣಪತಿ ಬಾಣಿಕೋಲ, ಸುಧಾಕರಗೌಡ ಬಿರಾದಾರ ಮಾಡನಾಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಎಚ್.ಲಾಳಸಂಗಿ, ಕೆ.ಎಸ್.ಚೌಧರಿ,ಎಂ.ಎಸ್.ಹೊಸುರ, ವಿ.ಎಂ.ಕೋಳಿ, ಜಿ.ಎಂ. ಬಿರಾದಾರ, ಎಸ್.ಎಸ್.ಮೋದಿ, ಎಂ.ಆರ್.ರಾಠೋಡ, ಎಸ್.ಬಿ.ಹಿರೇಬೇವನೂರ ಮತ್ತಿತರರಿದ್ದರು.

