ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಆದರ್ಶ ರಾಷ್ಟ್ರ ನಿರ್ಮಾಣದಲ್ಲಿ ಅಕ್ಷರ ಕಲಿಸುವ ಶಿಕ್ಷಕರು, ಸಂಸ್ಕಾರ ಕಲಿಸುವ ತಾಯಿಯೆಂದಿರು ಪಾತ್ರ ಪ್ರಮುಖವಾದುದು ಈರ್ವರು ನಿತ್ಯ ಸ್ಮರಣೀಯರು ಎಂದು ಸಂಸ್ಥೆಯ ಕಾರ್ಯದರ್ಶಿ ವೈ ಟಿ ಪಾಟೀಲ್ ಹೇಳಿದರು.
ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾತೃಭೋಜನ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಮ್ಮನ ಕೈತುತ್ತಿನಲ್ಲಿ ಅದಮ್ಯ ಶಕ್ತಿ ಇದೆ, ಅಮ್ಮನ ಮಡಿಲು ಅಪ್ಪನ ಹೆಗಲು ಸ್ವರ್ಗಕ್ಕೆ ಮಿಗಿಲು ಎಂದವರು, ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳಕ್ಕೆ ಶಾಲೆಯ ಶಿಕ್ಷಕರು ಹೆಚ್ಚು ಶ್ರಮಿಸುತ್ತಿದ್ದಾರೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿ ಆಶೀರ್ವಚನ ನೀಡಿದರು.
ಉಪನ್ಯಾಸಕ ಡಾ ಯಂಕನಗೌಡ ಎಸ್ ಪಾಟೀಲ, ಸಿಆರ್ ಪಿ ಬಂದೇನವಾಜ್ ನಾಲತವಾಡ, ಸುಮಿತ್ರಪ್ಪ ಸಾಹುಕಾರ ಅಂಗಡಿ ಮಾತನಾಡಿದರು.
ಸಂಚಾಲಕ ಮೋಹನರಡ್ಢಿ ಡಿಗ್ಗಾವಿ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಹಿನ್ನೋಟ ಹಾಗೂ ಮುನ್ನೋಟದ ಮೇಲೆ ಬೆಳಕು ಚೆಲ್ಲಿದರು.
ಪ್ರಮುಖರಾದ ಸಂಸ್ಥೆಯ ನಿರ್ದೇಶಕರಾದ ಸಿದ್ದನಗೌಡ ಶಿವಪುರ, ಮಲ್ಲರಡ್ಡಿ ಹತ್ತಿಕುಣಿ, ಅಕ್ಷರ ದಾಸೋಹ ನಿವೃತ್ತ ಅಧಿಕಾರಿ ಜಿ ಎನ್ ರೂಡಲ್ ಬಂಡಿ, ಹಳ್ಳೇಪ್ಪಗೌಡ ಪೋಲೀಸ್ ಪಾಟೀಲ್ ಅವರ ಧರ್ಮಪತ್ನಿ ಉಮಾದೇವಿ ಪಾಟೀಲ, ಸೇರಿದಂತೆ ವಿದ್ಯಾರ್ಥಿಗಳು, ತಾಯಿಯೆಂದಿರು, ಪಾಲಕ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಮಕ್ಕಳ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮೂಲಕ ಮನಸೂರೆಗೊಂಡಿತು, ಶಿಕ್ಷಕಿ ಭಾರತಿ ನಿರೂಪಿಸಿದರು, ಶಿಕ್ಷಕ ವಾಸಿಂ ಪಾಟೇಲ್ ಸ್ವಾಗತಿಸಿದರು, ಶಿಕ್ಷಕ ಚಿರಂತಿಮಠ ವಂದಿಸಿದರು.

