ಲೇಖನ
– ಶ್ರೀಮತಿ ಇಂದಿರಾ ಮೋಟೆಬೆನ್ನೂರ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ನೀಲಿಯ ಬಾನಿನಲ್ಲಿ ತೇಲುವ ಆ ಬೆಳ್ಮುಗಿಲುಗಳು, ಬಾನು ಭುವಿಗೆ ಸೇತುವೆ ಕಟ್ಟಿದ ಆ ಕಾಮನಬಿಲ್ಲು, ಒಡಲಲ್ಲಿ ಜೀವಜಲವನ್ನು ಹೊತ್ತುಕೊಂಡು ಭಾರವಾಗಿ ದಿನತುಂಬಿದ ಬಸುರಿಯಂತೆ ಮೆಲ್ಲನೆ ಹೆಜ್ಜೆಯಿಡುತ ನಡೆದಿಹ ಕರಿಕಪ್ಪು ಮೋಡಗಳು, ಹಗಲು-ಇರುಳಿನ ಬೆಳಕಿನ ಸರದಾರರಾದ ರವಿ-ಶಶಿಯ ಆ ಆಟೋಟಗಳನ್ನು, ಅರುಣನ ಕೆಂಪು ಕಿರಣ ರಾಗಮಾಲಿಕೆ, ಬಾನಿಂದ ಧರೆಗುರುಳುವ ವರುಣನ ಆರ್ಭಟ, ಗಿಳಿವಿಂಡಿನಲ್ಲಿ ತನ್ನ ತಾರೆ ಗೆಳತಿಯರೊಡನೆ ಸಂಭಾಷಿಸುತ್ತಿರುವ ಆ ಚಂದಿರ, ಮಿನುಗು ತಾರೆಗಳ ಕಣ್ಣೋಟ..
ಹೀಗೆ ಹಗಲು-ರಾತ್ರಿ ಆ ವಿಶಾಲವಾದ ಬಾಂದಳದಲ್ಲಿ ನಡೆಯುವ, ಮನಸೂರೆಗೊಳ್ಳುವ ಈ ಎಲ್ಲ ಪ್ರಕೃತಿಯ ಪ್ರಕ್ರಿಯೆಗಳನ್ನು, ಲೀಲೆಗಳನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುವುದು, ಅನುಭವಿಸುವುದು ನನ್ನ ಪ್ರೀತಿಯ ಹವ್ಯಾಸಗಳಲ್ಲಿ ಒಂದಾಗಿದೆ.

ಎಂದಿನಂತೆ ಅಂದು ಕೂಡಾ ರಾತ್ರಿ ಆಕಾಶದೆಡೆ ಮುಖ ಮಾಡಿ ನಿಂತಾಗ ಚಂದಿರ ಮತ್ತು ಆತನ ಗೆಳತಿಯರು ಅಬ್ಬಾ ಎಷ್ಟೊಂದು ಜನ! ಒಂದು, ಎರಡು, ಮೂರು, ನಾಲ್ಕು ಎಣಿಸತೊಡಗಿದೆ. ನನ್ನ ಈ ಹುಚ್ಚಿಗೆ ನನಗೇ ನಗು ಬಂದಿತು. ಊಹುಂ. ಕೊನೆ ಮೊದಲಿಲ್ಲದ ಎಣಿಕೆ ಅದು. ತಕ್ಷಣ ನೆನಪಿಗೆ ಬಂತು ಒಗಟೊಂದು ‘ಅವ್ವನ ಸೀರೆ ಮಡಿಸಲಾಗದು, ಅಪ್ಪನ ದುಡ್ಡು ಎಣಿಸಲಾಗದು’.
ಅವ್ವ-ಅಪ್ಪ ಎಂದೊಡನೆ ಅವರು ತೋರಿದ ಅಪರಿಮಿತ ಪ್ರೀತಿ ವಾತ್ಸಲ್ಯ ಮಧುರ ಭಾವ ಮೈಮನಗಳನ್ನಾವರಿಸಿ ಕ್ಷಣಕಾಲ ಭಾವುಕಳಾದೆ. ಸಾಮಾನ್ಯವಾಗಿ ಎಲ್ಲರೂ ತಾಯಿಯ ಕುರಿತೇ ಹೆಚ್ಚು ಬರೆದಿರುತ್ತಾರೆ. ಆದರೆ ಎಲೆ ಮರೆಯ ಕಾಯಿಯ ಹಾಗೆ ಅವ್ವನ ಪ್ರತಿ ಉಸಿರಿನ ಹಿಂದೆ ಉಸಿರಾಗಿ ನಿಂತು ಬಾಳನ್ನು ಹಸಿರಾಗಿಸಿದ ಅಪ್ಪ ಯಾವಾಗಲೂ ಹೆಜ್ಜೆಯ ಜೊತೆ ಹೆಜ್ಜೆಯಾಗಿ ಸದ್ದಿರದೆ ನಡೆಯುತ್ತಾ ಮೌನವಾಗಿರುತ್ತಾನೆ ಅಲ್ಲವೇ! ಅಂತಹ ನನ್ನ ಪ್ರೀತಿಯ ಅಪ್ಪನ ಕುರಿತು ನನ್ನ ಹೃದಯಾಂತರಾಳದ ಮಧುರ ಭಾವಗಳನ್ನು ತಮ್ಮ ಮುಂದೆ ಈಗ ಅಕ್ಷರ ರೂಪದಲ್ಲಿ ಅನಾವರಣಗೊಳಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ.
‘ಕರುಳಬಳ್ಳಿಯ ಕುಡಿಯು ಹೊಸ ಬೆಳಕ ಕಾಣುತಿದೆ
ಹೃದಯ ಸುಮಗಳ ಸೊಂಪ ಸುರಿಸ ಬನ್ನಿ
ಜೊತೆ ಬಾಳ ಸಿಹಿ-ಕಹಿಯ ಸಮರಸವ ತಿಳಿಹೇಳಿ
ಹಸೆಮಣೆಯ ಹಸುಳರನು ಹರಸಬನ್ನಿ…..’
– ಅಪ್ಪಾಜಿ
ಎಂದು ಹರಸಿದ ಹೆಂಗರುಳಿನ ನನ್ನಪ್ಪ ನನ್ನ ಪ್ರೀತಿಯ ಅಪ್ಪಾಜಿ. ಅಪ್ಪನ ಕುರಿತು ಬರೆಯಬೇಕೆಂದರೆ ಎಲ್ಲಿಂದ ಶುರು ಮಾಡಲಿ, ಎಲ್ಲಿ ಮುಕ್ತಾಯ ಮಾಡಲಿ ಎಂಬುದೇ ಗೊತ್ತಾಗುವುದಿಲ್ಲ. ಕೊನೆ ಮೊದಲಿಲ್ಲದ ಅನಂತ ಆಕಾಶದಂತೆ ಅಪ್ಪನ ಪ್ರೀತಿ. ಒಡಲ ತುಂಬ ಕಡಲಿನಷ್ಟು ಪ್ರೀತಿ ತುಂಬಿಕೊಂಡು ಬಾಳಿ ಬದುಕಿದ ಜೀವ. ‘ಅಮ್ಮ ಜೀವ ಕೊಟ್ಟರೆ ಅಪ್ಪ ಬಾಳು ಕೊಡುತ್ತಾನೆ’ ಎಂಬ ಮಾತಿದೆ. ಅಪ್ಪನಿಗೆ ಅಪ್ಪನೇ ಸಾಟಿ ಬೇರಾರಿಲ್ಲ. ತನ್ನ ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವವನ್ನೇ ತೇಯುವವ ಅಪ್ಪ. ಅವರ ಏಳ್ಗೆಗಾಗಿ ತನ್ನ ಬಾಳನ್ನೇ ಮುಡಿಪಾಗಿಟ್ಟು ದುಡಿಯುವವನು. ತಾಯಿಯ ಕೈ ತುತ್ತಿನ ಸವಿ ನೆನಪಿನಂತೆಯೇ ಅಪ್ಪನ ಪ್ರೀತಿ, ವಾತ್ಸಲ್ಯ, ಭರವಸೆ ಎಲ್ಲವೂ ಎಡೆಬಿಡದೇ ನಮ್ಮನ್ನು ಕಾಡುತ್ತವೆ.
ಅಪ್ಪ ಅಂದರೆ ನನ್ನ ಹೀರೋ. ನಿಷ್ಕಲ್ಮಶ ಪ್ರೀತಿಯನ್ನು ನೀಡಿದ ವಿಶಾಲ ವಟವೃಕ್ಷದ ನೆರಳು. ‘ಅಪ್ಪಾಜಿ!’ ನಾನು ನನ್ನ ಅಪ್ಪನನ್ನು ಹೀಗೇ ಕರೆಯುತ್ತಿದ್ದೆ. ಹೆಣ್ಣು ಮಗಳೆಂದು ನನ್ನ ಮೇಲೆ ಅಪ್ಪನ ಪ್ರೀತಿ ಸ್ವಲ್ಪ ಜಾಸ್ತಿ. ‘ಅಪ್ಪನೆಂದರೆ ಬೆವರ ಬೆಟ್ಟ’ ಈ ಮಾತು ಅಕ್ಷರಶಃ ನಿಜ. ಅಪ್ಪ ಮೇಣದ ಬತ್ತಿಯಂತೆ ಉರಿದು ಎಲ್ಲರಿಗೂ ಬೆಳಕು ನೀಡಿ ತಾವು ಮಾತ್ರ ಕತ್ತಲಿನಲ್ಲಿ ಕರಗಿ ಹೋದರು. ಅಪ್ಪಾಜಿ ಗಳಿಸಿದ್ದು, ಉಳಿಸಿದ್ದು, ಬೆಳೆಸಿದ್ದು, ಬಳಸಿದ್ದು ಕೇವಲ ಪ್ರೀತಿಯೊಂದನ್ನೇ. ಪ್ರೀತಿಯೊಂದನ್ನು ಬಿಟ್ಟು ಅವರು ಬೇರೇನನ್ನೂ ಹಂಚಲೇ ಇಲ್ಲ.
ಬಂದ ಕಕ್ಷಿದಾರರಿಗೆಲ್ಲ ತಿಂಡಿ ತಿನ್ನಿಸಿ, ಚಹಾ ಕುಡಿಸಿ ಒಮ್ಮೊಮ್ಮೆ ಊಟ ಕೂಡಾ ಮಾಡಿಸಿ ತಮ್ಮ ಹತ್ತಿರವಿದ್ದ ಎರಡು ಕೋಟುಗಳಲ್ಲಿ ಅವರಿಗೆ ಒಂದು ಕೋಟ್, ಪಂಚೆ ಎಲ್ಲ ಬಟ್ಟೆ ಕೊಡುತ್ತಿದ್ದರು. ನಾವು ಚಿಕ್ಕವರಿದ್ದಾಗ ಸುಮ್ಮನೇ ಕುಳಿತು ನೋಡುತ್ತಿದ್ದೆವು. ಹಳ್ಳಿಯಿಂದ ಬಂದ ಬಡ ರೈತರು ಅಪ್ಪಾಜಿಯ ಚಪ್ಪಲಿಗಳನ್ನು ಸಹಿತ ಕೇಳಿ ತೆಗೆದುಕೊಂಡು ಹೋಗುತ್ತಿದ್ದರು. ಕೇಸಿಗಾಗಿ ಫೀಸ್ ಕೊಡಲು ಅವರ ಹತ್ತಿರ ಹಣವಿರುತ್ತಿರಲಿಲ್ಲ. ಊರಿಗೆ ಮರಳಿ ಹೋಗಲು “ಕಾಸಿಲ್ಲದ ಸರದಾರ” ನನ್ನಪ್ಪ, ನನ್ನ ಅಪ್ಪಾಜಿ ಅವ್ವನ ಹತ್ತಿರವಿರುವ ದುಡ್ಡನ್ನು ಅವರಿಗೆ ಕೊಟ್ಟು ಕಳಿಸುವುದಿತ್ತು. ಕೊಡುವುದಕ್ಕೆ ಸಿರಿವಂತಿಕೆ ಬೇಕಾಗಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದ ನನ್ನಪ್ಪ.
ನಾವೇನೂ ಕೋಟ್ಯಾಧೀಶ್ವರರಲ್ಲ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಂತೂ ಅಲ್ಲವೇ ಅಲ್ಲ. ಮಧ್ಯಮ ವರ್ಗದ ಕುಟುಂಬ. ಅಪ್ಪನ ಈ ದಾನಶೂರ ಕರ್ಣನ ಅವತಾರದಿಂದ ಅವ್ವನೂ ಒಮ್ಮೊಮ್ಮೆ ರೋಸಿಹೋಗುತ್ತಿದ್ದಳು. ಆದರೆ ಅಪ್ಪನ ಕೊಡುಗೈ ಯಾವಾಗಲೂ ಭೂಮಿಯನ್ನೇ ನೋಡುತ್ತಿತ್ತು.
ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಅಪ್ಪನಿಗೆ. ಅವರ ಶಿಕ್ಷಣಕ್ಕಾಗಿ ಕೈಲಾದ ಸಹಾಯ ಮಾಡುತ್ತಿದ್ದರು ಅಪ್ಪಾಜಿ. ತಮ್ಮೂರಿನ ಬಡ ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದಾಗ ತಾವಿರುವ ಬಾಡಿಗೆ ಮನೆಯಲ್ಲೇ ಅವರಿಗೇ ಆಶ್ರಯ ನೀಡಿ (ತುಂಬು ಕುಟುಂಬದಲ್ಲಿ) ಅವರಿಗೆ ಸಹಾಯ ಮಾಡುತ್ತಿದ್ದರು. ಒಂದು ರೀತಿ ನಮ್ಮ ಮನೆ ಓದುವವರಿಗಾಗಿ ಉಚಿತ ದಾಸೋಹ ವಸತಿ ನಿಲಯವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.
ಅಪ್ಪ ಯಾವಾಗಲೂ ನನ್ನ ಮಕ್ಕಳ ಶಿಕ್ಷಣಕ್ಕೆ, ಮದುವೆಗೆ ಬೇಕು ಎಂದು ಏನನ್ನೂ ಕೂಡಿಟ್ಟವನಲ್ಲ. ಇಟ್ಟಿಗೆ ಗಾರೆಯ ಒಂದು ಸ್ವಂತ ಸೂರು, ಮನೆಯನ್ನು ಕೂಡಾ ಅಪ್ಪ ತನಗಾಗಿ ಕಟ್ಟಿಕೊಳ್ಳಲಿಲ್ಲ. ಆದರೆ ಎಲ್ಲರ ಹೃದಯದಲ್ಲಿ ಮನೆ ಮಾಡಿಕೊಂಡು ಗಟ್ಟಿಯಾಗಿ ಇಂದಿಗೂ ಕುಳಿತು ಬಿಟ್ಟಿದ್ದಾರೆ ನನ್ನಪ್ಪ! ಅಪ್ಪನಿಂದ ಸಹಾಯ ಪಡೆದು, ಅವರನ್ನು ಏಣಿಯಂತೆ ಬಳಸಿ ಮೇಲೇರಿ ಆಮೇಲೆ ಆ ಏಣಿಯನ್ನೇ ಒದ್ದವರು ಬಹಳ ಜನರಾದರೂ ಕೆಲವರು ಮಾತ್ರ ಇಂದಿಗೂ ನನ್ನನ್ನು ಭೇಟಿಯಾದಾಗ ‘ನೀನು ವಕೀಲರ ಮಗಳಲ್ಲವಾ? ನಿಮ್ಮ ತಂದೆಯವರು ನಮಗೆ ಬಹಳ ಸಹಾಯ ಮಾಡಿದ್ದರು. ದೇವರಂಥ ಮನುಷ್ಯ’ ಎಂದು ಮನದುಂಬಿ ನೆನೆಯುವುದನ್ನು ಕಂಡಾಗ ನಾನು ಅಂಥ ನನ್ನ ಅಪ್ಪಾಜಿಯ ಮಗಳು ಎಂದು ನನಗೆ ಬಹಳ ಹೆಮ್ಮೆಯಾಗುತ್ತದೆ, ಹೃದಯದುಂಬಿ ಬರುತ್ತದೆ. ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟು ಓದಿ ಮೇಲೆ ಬಂದವರು ನನ್ನಪ್ಪಾಜಿ.
ಅವರ ಒಳ್ಳೆಯತನವೇ ಅವರಿಗೆ ಮುಳುವಾಯಿತೇನೋ. ದೌರ್ಬಲ್ಯವೊಂದರಿಂದ ಹೊರಬರಲಾರದ ಅವರು ಅದರಲ್ಲೇ ಮುಳುಗಿ ಅಂತ್ಯ ಕಂಡದ್ದು ದಾರುಣ ಸತ್ಯ. ಆದರೆ ಯಾರಿಗೂ ಎಂದಿಗೂ ಒಂದು ಇರುವೆಯನ್ನು ನೋಯಿಸದ ಜೀವ, ಕೇಡನ್ನು ಬಯಸದ ದೊಡ್ಡತನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡವರು. ತಾವು ನೊಂದು ಬೆಂದು ಕರಗಿದರೇ ಹೊರತು ಇನ್ನೊಬ್ಬರಿಗೆ ತೊಂದರೆ ಕೊಡದೇ ಮರೆಯಾದ ಮಾಣಿಕ್ಯ ನನ್ನ ಪ್ರೀತಿಯ ಅಪ್ಪಾಜಿ.
ನನ್ನ ಅಪ್ಪಾಜಿ ಎಂದರೆ ಬರೀ ಪ್ರೀತಿ, ಪ್ರೀತಿಯಲ್ಲದೇ ಮತ್ತೇನೂ ಅಲ್ಲ. ಬಿತ್ತಿದ್ದು, ಬೆಳೆದದ್ದು, ಸುತ್ತಲೂ ಹರಡಿದ್ದು, ಹಂಚಿದ್ದು ಪ್ರೀತಿಯ ಬೆಳಕನ್ನೊಂದೇ. ಅವರು ಹಚ್ಚಿದ ಆ ಪ್ರೀತಿಯ ಹಣತೆಯ ಬೆಳಕಿನಲ್ಲಿ ಇಂದು ಕೇವಲ ನಮ್ಮ ಮನೆತನದ ದೀಪಗಳು ಮಾತ್ರವಲ್ಲ, ಅಕ್ಕಪಕ್ಕದಲ್ಲಿ, ದೂರದೂರಿನಲ್ಲಿ ನೂರಾರು, ಸಾವಿರಾರು ದೀಪಗಳು ಬೆಳಗಿ ಬೆಳಕು ಚೆಲ್ಲುತಿವೆ.

ಹೊಲ ಮಾಡುವವನ ಮಕ್ಕಳನ್ನು ಕೂಡಾ ಕರೆದು ತಮ್ಮ ಮನೆಯಲ್ಲಿಟ್ಟುಕೊಂಡು ಶಿಕ್ಷಣ ಕೊಡಿಸಿದ ಅಪ್ಪ. ಇವತ್ತು ಅವರು ಕಾಲೇಜು ಪ್ರಾಂಶುಪಾಲರಾಗಿದ್ದಾರೆ. ಅಪ್ಪಾಜಿಯವರನ್ನು ನಿತ್ಯ ನೆನೆಸುತ್ತಾರೆ. ಶಿಕ್ಷಣ ಪ್ರೇಮಿ. ‘ಓದರೆವ್ವಾ, ಸಾಲೀ ಕಲೀಬೇಕು, ಡಿಗ್ರಿ ತಗೋಬೇಕು ನೋಡ್ರವ್ವಾ’ ಅಂತಾ ಯಾವಾಗಲೂ ಹೇಳುತ್ತಿದ್ದರು ಅಪ್ಪಾಜಿ.
‘ನಿನ್ನಂತೆ ನಾವಾಗಲಿಲ್ಲವೇಕೆ ಅಪ್ಪಾ?
ನಿನ್ನಂತೆ ನಾವೇಕೆ ಇಲ್ಲ ಅಪ್ಪಾಜಿ?’
ಸಣ್ಣ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತ ತಂದೆಗೆ ಆರು ಜನ ಅಣ್ಣತಮ್ಮಂದಿರು, ಇಬ್ಬರು ಸಹೋದರಿಯರು, ತಂದೆ ಶಿಕ್ಷಕ. ಧಾರವಾಡದ ಮುರುಘಾಮಠದಲ್ಲಿದ್ದುಕೊಂಡು ಅಪ್ಪ ತಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಿದರು.
ಹೆಂಗರುಳು, ಕವಿ ಹೃದಯಿ ಅಪ್ಪ ಚಂದ್ರಮತಿ ವಿಲಾಪ ಮತ್ತು ಹರಿಶ್ಚಂದ್ರ ಕಾವ್ಯ ಹಳೆಗನ್ನಡ ಓದುವ, ಬರೆಯುವ ಹವ್ಯಾಸ ಬೆಳೆಸಿದರು. ಅಪ್ಪನ ಹೆಗಲ ಮೇಲೆ ಹತ್ತಿ ಕುಣಿಯುತ್ತಿದ್ದ ಮಸುಕು ಮಸುಕು ನೆನಪು. ಅವರ ಕೈ ಹಿಡಿದು ಧಾರವಾಡದ ರಸ್ತೆಗುಂಟ ನಡೆದ ನೆನಪು ಇನ್ನೂ ಹಸಿರಾಗಿದೆ. ನಿನ್ನೆ ಮೊನ್ನೆಯೇನೋ ಎಂಬಂತೆ ಕಣ್ಮುಂದೆ ಇದೆ. ಅಪ್ಪನ ನೆನಪು ಹಾಲು-ತುಪ್ಪ. ಹಣ-ಆಸ್ತಿ, ಕಾಂಚಾಣಕ್ಕೆ ಆಸೆ ಪಟ್ಟವರಲ್ಲ. ಅಣ್ಣ-ತಮ್ಮಂದಿರು ಎಂದರೆ ಬಲು ಪ್ರೀತಿ. ಅವರೇ ಸರ್ವಸ್ವ ಅವರಿಗೆ.
‘ಸವಿ ಸವಿ ನೆನಪು, ಸಾವಿರ ನೆನಪು ಅಪ್ಪಾ’
ಅಪ್ಪನ ವ್ಯಕ್ತಿತ್ವ ಅಳತೆಗೆ ಸಿಗಲಾರದ್ದು. ಸರಳ ಜೀವಿ, ಸ್ವಚ್ಛ ಶುಭ್ರ ಬಿಳಿ ಬಣ್ಣದ ಖಾದಿ ಸಿಲ್ಕ್ ಜುಬ್ಬಾ, ಧೋತರ, ಗಾಂಧೀ ಟೊಪ್ಪಿಗೆ, ಕಾಲಿಗೆ ಖಾದಿ ಭಂಡಾರದ ಚಪ್ಪಲಿ, ಖಾದಿ ಸಫಾರೀ ಸೂಟ ಹಾಕುತ್ತಿದ್ದರು. ಧಾರವಾಡದ ಆಝಾದ ಪಾರ್ಕ ರೋಡನಲ್ಲಿರೋ ‘ರೂಪ ಲಾಂಡ್ರಿ’ ಯಲ್ಲಿ ಬಟ್ಟೆಗಳನ್ನು ಖಡಕ್ ಇಸ್ತ್ರಿ ಮಾಡಿಸುತ್ತಿದ್ದ ಅಪ್ಪಾಜಿ. ಹೃದಯವಂತ, ದೊಡ್ಡ ಸಾಹುಕಾರ ನನ್ನಪ್ಪ. ಆದರೆ ಅವರ ಕೈಯ್ಯಾಗ ರೊಕ್ಕ ನಿಲ್ಲುತ್ತಿರಲಿಲ್ಲ. ರೊಕ್ಕ ಇಲ್ಲದ ಬಹುದೊಡ್ಡ ಸಾಹುಕಾರ ನನ್ನಪ್ಪ. ಅವ್ವ ಮಾಡುತ್ತಿದ್ದ ಹೋಳಿಗೆ-ಶೀಕರಣಿ ಎಷ್ಟು ಪ್ರೀತಿಯಿಂದ ತಿನ್ನುತಿದ್ರೋ ಅಪ್ಪ ಅಷ್ಟೇ ಪ್ರೀತಿಯಿಂದ ಆಕಿ ಮಾಡಿಕೊಟ್ಟ ಜೋಳದ ನುಚ್ಚಿನ ಅಂಬಲೀನೂ ಕುಡಿತಿದ್ದರು.
ಕಪ್ಪು-ಬಿಳುಪಿನ ಕಾಲದಲ್ಲೇ ರಂಗುರಂಗಿನ ಮಳೆಬಿಲ್ಲನ್ನು ಧರಿಸಿ ಮೆರೆದ ಮುಗಿಲಿನಂತಿದ್ದ ನನ್ನಪ್ಪ. ಹುಬ್ಬಳ್ಳಿ ಕಾಮತ ಹೊಟೇಲಿನ ಪೇಪರ ದೋಸೆ, ಸ್ಪೆಶಲ್ ಐಸ್ಕ್ರಿಂ ನಮಗೆ ತಿನಿಸಿದ್ದು, ಪರಫ್ಯೂಂ, ಹಿಮಾಲಯ ಸ್ನೋ, ಮೈಸೂರು ಸ್ಯಾಂಡಲ್ ಸೋಪ್ ಎಲ್ಲಾ ಬ್ರ್ಯಾಂಡೆಡ್ ವಸ್ತುಗಳ ಉಪಯೋಗ ಮಾಡಿದ್ದು ಇನ್ನೂ ನೆನಪಿದೆ ನನಗೆ. ದೊಡ್ಡ ಕಲ್ಲಂಗಡಿ ಹಣ್ಣು ಹೆಗಲ ಮ್ಯಾಲ ಹೊತಕೊಂಡು ಬಂದ ಅಪ್ಪನ ಚಿತ್ರ ಕಣ್ಮುಂದ ಬರತದ. ಅದನ್ನ ಹೆಚ್ಚಿಸಿ ಆಜು-ಬಾಜು ಮನೆಗೆಲ್ಲ ಹಂಚಿ ತಿಂದರೆ ಸಮಾಧಾನ ಅಪ್ಪನಿಗೆ.
‘ಪಿತೃದೇವೋಭವ – ತೈತ್ತರೀಯೋಪನಿಷತ್ತು’
‘ಅಪ್ಪ ಅಂದರೆ ಆಕಾಶ’
ಅವ್ವ ಐತಾರಕ್ಕೊಮ್ಮೆ (ರವಿವಾರ) ಪಡ್ಡು, ದೋಸೆ ಮಾಡಿದ್ರ, ಹಬ್ಬಾ ಹುಣವಿಗೆ ಹೋಳಿಗೆ, ಹುಗ್ಗಿ, ವಡಿ, ಗಾರಿಗೆ ಹಿಂಗ ಏನಾದರೂ ವಿಶೇಷ ಅಡಿಗಿ ಮಾಡಿದಾಗ ಅಪ್ಪ ಅಣ್ಣ-ತಮ್ಮಂದಿರ ದಾರಿ ಕಾಯುತಿದ್ದ. ಅವರ ಮನಸ್ಸು ಅಷ್ಟು ಛೊಲೋ ಇತ್ತೇನೋ. ಅವರು ಕೂಡ ಇವರು ನೆನೆಸಿದ ಕೂಡ್ಲೇ ‘ನೆನೆದವರು ಮನದಾಗ’ ಅನ್ನೊ ಹಂಗ ಬಂದೇ ಬಿಡತಿದ್ರು. ಅವರ ಜೊತೀಗೇ ತಿಂದ್ರ ಅಪ್ಪಗ ಸಮಾಧಾನ. ಅಷ್ಟು ಪ್ರೀತಿ.
ಅದನ್ನೆಲ್ಲ ನೆನೆಸಿಕೊಂಡರೆ ಈಗಿನವರಿಗೆ ನಮಗೆ ಕಳ್ಳು-ಬಳ್ಳಿ, ಸಂಬಂಧ, ಪ್ರೀತಿ, ವಿಶ್ವಾಸ ಅನ್ನೂದಂದ್ರ ಏನಂತಾನ ಗೊತ್ತಿಲ್ಲೇನೋ ಅಂತ ಒಮ್ಮೊಮ್ಮೆ ಅನಿಸುತ್ತದೆ. ಸ್ಪರ್ಧಾತ್ಮಕ ಭಾವದ ಸ್ಪರ್ಧೆಯೇ ತುಂಬಿದ ಈ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲವೇನೋ ಎಂದು ಅನಿಸುತ್ತದೆ.
‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ’
– ಡಿ.ವ್ಹಿ.ಜಿ. ಕಗ್ಗ
ಅಪ್ಪಾಜಿಯ ಅತ್ಯಂತ ಪ್ರೀತಿಯ ಕಗ್ಗವಿದು. ದಿನನಿತ್ಯ ನಮಗೆ ಇದನ್ನು ಹೇಳುತ್ತಿದ್ದರು. ಅದರಂತೆ ಬಾಳಿದರು ಕೂಡಾ.
ದಿನಾಲೂ ಅವರು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ಪಕ್ಕದಲ್ಲೇ ನಾನು ಕುಳಿತು ವಚನಗಳನ್ನು ಹೇಳಬೇಕು. ‘ತಂದೆ ನೀನು, ತಾಯಿ ನೀನು’, ‘ತನು ಕರಗದವರಲ್ಲಿ’ ಅಕ್ಕನ, ಬಸವಣ್ಣನ ವಚನಗಳನ್ನು ನಾನು ಹಾಡಬೇಕು, ಅವರು ಕೇಳಬೇಕು. ‘ಜ್ಞಾನಪೂರ್ಣಂ ಜಗಂಜ್ಯೋತಿ’, ‘ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ’ ಮಂಗಳಾರತಿ ಹಾಡು ಹಾಡಬೇಕು. ಒಣದ್ರಾಕ್ಷಿ, ಗೋಡಂಬಿ, ಖರ್ಜೂರ (ಖಾರೀಕ) ತಿನ್ನಲು ಕೊಡುತ್ತಿದ್ದರು ಪ್ರಸಾದದ ರೂಪದಲ್ಲಿ. ಸದ್ಗುಣಗಳ ಗಣಿಯೇ ಆಗಿದ್ದರು ನನ್ನಪ್ಪ. ಕಪ್ಪು ಚುಕ್ಕೆಯೊಂದು ಎಲ್ಲವನ್ನೂ ನುಂಗಿ ಹಾಕಿತ್ತು ಎನ್ನುವ ಹಾಗೆ ಅವರ ಜೀವನ.
ನಾನು ನನ್ನಪ್ಪನ ‘ಪುಟ್ಟ ರಾಜಕುಮಾರಿ’. ಅವ್ವ ಹೊಲಿಸಿದ ರೇಷ್ಮೆ ಲಂಗ ಹಾಕಿಕೊಂಡು ಅಪ್ಪನ ಕೈ ಹಿಡಿದು ಪೇಟೆ ಸುತ್ತುತ್ತಿದ್ದೆ ನಾನು. ಒಂದೇಟನ್ನೂ ಹಾಕದ ಮಮತಾಮೂರ್ತಿ ಹೆಂಗರುಳು ನನ್ನಪ್ಪ. ಅಪ್ಪನೆಂದರೆ ಆಕಾಶ ಅಲ್ಲವೇ? ಆಕಾಶದ ಉದ್ದಗಲಗಳನ್ನು, ಆಳವನ್ನು ಯಾವ ರೀತಿ ಅಳೆಯಲು ಸಾಧ್ಯವಿಲ್ಲವೋ ಅದೇ ರೀತಿ ಅಪ್ಪನನ್ನ, ಅವನ ವ್ಯಕ್ತಿತ್ವವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ನಮ್ಮ ಚಾಚಿದ ಕೈಗಳ ಬೊಗಸೆಯಲ್ಲಿ ದಕ್ಕಿದಷ್ಟು ಮಾತ್ರ ನಮಗೆ ಲಭ್ಯ. ಅಪ್ಪ ಈಗ ನನ್ನ ಜೊತೆಗಿಲ್ಲ ನಿಜ.
‘ಈಗ ಬರುವೆನೆಂದು ಹೇಳಿ ಹೋದ ಜೀವವೇ
ನನ್ನ ನಿನ್ನ ನಡುವೆ ಈಗ ನೆನಪೊಂದೇ ಸೇತುವೆ’
ಎಂಬ ಕವಿನುಡಿಯನ್ನು ನೆನೆಯುತ್ತಾ ಈ ಪುಟ್ಟ ಲೇಖನ ನನ್ನ ಪ್ರೀತಿಯ ಅಪ್ಪಾಜಿಗೊಂದು ನುಡಿನಮನ. ಕೊನೆಯಲ್ಲಿ ಅಪ್ಪಾಜಿಯನ್ನು ನೆನೆದು ನೆನಪಿನಲ್ಲಿ ನಾನು ಗೀಚಿದ ನಾಲ್ಕು ಸಾಲುಗಳು ನಿಮ್ಮ ಮುಂದೆ.
ಗಜಲ್:
‘ಹೆಗಲ ಮೇಲೆ ಹೊತ್ತು ತಿರುಗಿ ಮುಗಿಲ ತೋರಿದ ಅಪ್ಪ
ಬಗಲ ಚೀಲದಿ ಮಮತೆ ತುಂಬಿಸಿ ಜಗವ ಮರೆಸಿದ ಅಪ್ಪ
ಮನದ ಮತ್ಸರಕೆ ಪ್ರೀತಿ ಮದ್ದು ಜೇನು ಸುರಿಸಿದ ಅಪ್ಪ
ಬೆರಳ ಹಿಡಿಯುತ ನಡೆಸಿ ದಾರಿಗೆ ಬೆಳಕ ಹರಿಸಿದ ಅಪ್ಪ
ಬಿಸಿಲ ಕಾವಿಗೆ ತಾನು ಕರಗುತ ಒಡಲ ಭರಿಸಿದ ಅಪ್ಪ
ಮುಸಲ ಧಾರೆಗೆ ಕಂಬನಿ ಕುಡಿಸಿ ಕರುಳ ಕರಗಿಸಿದ ಅಪ್ಪ
ಬವಣೆ ಮಳೆಗೆ ಭರವಸೆಯಾಗಿ ನೋವ ಮರೆಸಿದ ಅಪ್ಪ
ನಡೆವ ಹಾದಿಯ ಮುಳ್ಳು ಸರಿಸಿ ಸಿಹಿಯ ಬೆರೆಸಿದ ಅಪ್ಪ
ಬತ್ತಿ ಬೆಳಕ ನೀಡುವ ಪರಿಯ ಕಲಿಸಿ ಕಣ್ಣು ತೆರೆಸಿದ ಅಪ್ಪ
ಸತ್ತ ಬಂಧಕೆ ಉಸಿರ ತುಂಬುತ ಮತ್ತೆ ಮೆರೆಸಿದ ಅಪ್ಪ
ಬಂಧ ಬಾಳಲಿ ಬೆಸೆದು ಚೆಂದ ಭಾವವ ಬೆರೆಸಿದ ಅಪ್ಪ
ಗಂಧವಾಗಿ ಜೀವ ತೇಯ್ದು ಕಂದ ಇಂದುವ ಹರಸಿದ ಅಪ್ಪ ‘
ಸಾವಿರ ಸಾವಿರ ಕೊರತೆಗಳ ನಡುವೆಯೂ ಸದಾ ಪ್ರೀತಿಯ ಒರತೆಯನ್ನೇ ಹರಿಸಿದ ಅಪ್ಪನ ನೆನಪಿನ ಮುಗಿಯದ ಈ ಪಯಣಕೆ ಅಲ್ಪವಿರಾಮ ನೀಡುವ ಈ ನನ್ನ ನುಡಿ ನಮನಕ್ಕೆ ವಿರಾಮ ನೀಡುವೆ.
