ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದಾನಗಳಲ್ಲಿ ಶ್ರೇಷ್ಟ ದಾನ ಅಕ್ಷರದಾನ. ಅಕ್ಷರ ಜ್ಞಾನ ಪಡೆದವರು ಈ ಪ್ರಪಂಚವನ್ನೇ ಬದಲಿಸುವ ಶಕ್ತಿ ಹೊಂದುತ್ತಾರೆ. ಅಂತಹ ಅಕ್ಷರ ಜ್ಞಾನ ನೀಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರು ಶಿಕ್ಷಕರು ಎಂದು ಕ್ಷೇತ್ರ ಸಮನ್ವಾಧಿಕಾರಿ ಯು.ಬಿ.ಧರಿಕಾರ ಹೇಳಿದರು.
ತಾಲೂಕಿನ ಕಂದಗನೂರ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಉದ್ಘಾಟನೆ, ಶಾಲಾ ಬೆಳ್ಳಿ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಮತ್ತು ದಾನಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ಈ ದೇಶದ ರಕ್ಷಕ. ಎಲ್ಲ ವೃತ್ತಿಗಳಿಗಿಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ. ಹಿಂದೆ ಗುರು ಶಿಷ್ಯರ ಸಂಬಂಧ ಸಾಕಷ್ಟು ಗಟ್ಟಿಯಾಗಿರುತ್ತಿತ್ತು. ಸಧ್ಯದ ದಿನಮಾನಗಳಲ್ಲಿ ಗುರು ಶಿಷ್ಯರ ಬಾಂಧವ್ಯ ಕಡಿಮೆಯಾಗುತ್ತಿದೆ. ಶಿಕ್ಷಣ ವ್ಯಾಪಾರಿಕರಣದತ್ತ ಸಾಗುತ್ತಿದೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ. ಸಾಕಷ್ಟು ಪ್ರತಿಭಾನ್ವಿತ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಹಣ ಕಟ್ಟಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುವ ಪಾಲಕರು ಕೂಡಲೇ ಬದಲಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿಸಲು ಮುಂದಾಗಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಕೈಜೋಡಿಸುತ್ತಿರುವದು ಹೆಮ್ಮೆಯ ವಿಷಯ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ(ಬಾಬು) ಪ್ರಾಸ್ತಾವಿಕವಾಗಿ, ಪ್ರಾ.ಶಾ.ಶಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರಡಗಿ, ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹಿರೇಮಠ, ನಾಲತವಾಡದ ಉರ್ದು ಶಾಲಾ ಮುಖ್ಯಗುರು ಎಚ್.ಎಚ್.ಖಾಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗೆ ಸಹಾಯಹಸ್ತ ಚಾಚಿದ ಗ್ರಾಮದ ದಾನಿಗಳಿಗೆ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿ ಗಂಗಾಶ್ರೀ ಹಿರೇಮಠ ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದಳು. ಗ್ರಾ.ಪಂ ಸದಸ್ಯೆ ಅಮೀನಾ ಮೊಕಾಶಿ, ಸಿಆರ್‌ಸಿಗಳಾದ ಎಂ.ಎಸ್.ಕೆಂಭಾವಿ, ಎ.ಐ.ಮುದ್ದೇಬಿಹಾಳ, ಎಸ್‌ಡಿಎಂಸಿ ಅಧ್ಯಕ್ಷ ಹುಸೇನಸಾಬ ನಾಯ್ಕೋಡಿ, ಗೌರವಾಧ್ಯಕ್ಷ ದಸ್ತಗೀರಸಾಬ ನಾಯ್ಕೋಡಿ, ಉಪಾಧ್ಯಕ್ಷೆ ರಂಜಾನಬಿ ನಾಯ್ಕೋಡಿ, ಗ್ರಾಮದ ಪ್ರಮುಖರಾದ ಹಸನಸಾ ನಾಯ್ಕೋಡಿ, ಬಂದಗೀಸಾಬ ಮೂಕಿಹಾಳ, ಶಿವನಗೌಡ ಶಿವಣಗಿ, ರಾಮನಗೌಡ ಬಿರಾದಾರ, ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಶಿಕ್ಷಕಿಯರಾದ ಜಯಶ್ರೀ ಮಠ ಮತ್ತು ಹೇಮಾ ಬಿರಾದಾರ ನಿರೂಪಿಸಿದರು.

