ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಉತ್ತಮವಾದ ಕಾಂಕ್ರೇಟ್ ರಸ್ತೆಯನ್ನು ನಿರ್ಮಿಸಿದ್ದೇವೆ. ಸಧ್ಯ ಆ ರಸ್ತೆಯನ್ನು ಅಗೆದು ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿಗೆ ಪೈಪಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ರಸ್ತೆ ಹಾಳಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಕಾಮಗಾರಿ ಮಾಡಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆ ರಾಜ್ಯ ಸರ್ಕಾರದ ನೇರವಾದ ಯೋಜನೆ ಅಲ್ಲ. ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆ. ಶೇ೫೦ ರಷ್ಟು ಕೇಂದ್ರದಿಂದ ಶೇ೫೦ ರಷ್ಟು ರಾಜ್ಯದಿಂದ ಹಣ ಬಿಡುಗಡೆಯಾಗುತ್ತದೆ. ಈ ಬಗ್ಗೆ ಒಂದು ಮಾತು ಕೂಡ ಶಾಸಕರು ಹೇಳ್ತಿಲ್ಲ. ನಾನು ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡೋದಿಲ್ಲ. ಆದರೆ ಅಭಿವೃದ್ಧಿ ಕಳಪೆಯಾದರೆ ಸುಮ್ಮನಿರೋದಿಲ್ಲ ಎಂದರು.
ಈ ಕಾಮಗಾರಿ ಮಾಡುತ್ತಿರುವವರು ಶಾಸಕರ ಅಳಿಯ ಸುರೇಶ ನಾಡಗೌಡರು. ಆವರು ತಾಲೂಕನ್ನು ಲೂಟಿ ಹೊಡೆಯಲು ಬಂದಿದ್ದಾರೆ. ಈ ಕಾಮಗಾರಿ ಗುಣಮಟ್ಟದಲ್ಲಿ ನಡೆಯುತ್ತಿಲ್ಲ. ಕುಡಿಯುವ ನೀರಿನ ಯೋಜನೆಯನ್ನು ಹಳ್ಳ ಹಿಡಿಸುತ್ತಿದ್ದಾರೆ. ಒಳಚರಂಡಿ ಯೋಜನೆ ಕಾಮಗಾರಿ ಕೂಡ ನಡೆಯುತ್ತಿದ್ದು ಅದನ್ನೂ ಕೂಡ ಕಳಪೆ ಮಾಡಲಾಗುತ್ತಿದೆ. ಇಂಜಿನೀಯರ್‌ಗಳು ಕಳಪೆ ಕಾಮಗಾರಿ ನಡೆಸಿ ಹೋದರೆ ನಾನು ಬಿಡೋದಿಲ್ಲ. ನಿವೃತ್ತರಾದರೂ ಕೂಡ ತನಿಖೆ ಮಾಡಿಸಿ ಶಿಕ್ಷೆಗೆ ಗುರಿಪಡಿಸುತ್ತೇನೆ ಎಂದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪುರಸಭೆ ಸದಸ್ಯರಾದ ಚನ್ನಪ್ಪಣ್ಣ ಕಂಠಿ, ಸಂಗಮ್ಮ ದೇವರಳ್ಳಿ, ಸದಾಶಿವ ಮಾಗಿ, ಬಸವರಾಜ ಮುರಾಳ, ಪ್ರಮುಖರಾದ ಸಂಜು ಬಾಗೇವಾಡಿ, ಗೌರಮ್ಮ ಹುನಗುಂದ, ಅಪ್ಪು ಧನ್ನೂರ, ಸಂಗಮೇಶ ಅಂಗಡಿ ಸೇರಿದಂತೆ ಮತ್ತೀತರರು ಇದ್ದರು.

