ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೈಹಿಕ ಆರೋಗ್ಯಕ್ಕೆ ವೈದ್ಯರು, ಆಸ್ಪತ್ರೆಗಳು ಅಗತ್ಯವಾದಂತೆ, ಮಾನಸಿಕ ಆರೋಗ್ಯ, ಮೌಲ್ಯ, ಸಂಸ್ಕಾರಗಳಿಗೆ ಮಠ ಮಾನ್ಯಗಳು ಅತ್ಯಗತ್ಯವಾಗಿವೆ ಎಂದು ಸಂಗಮೇಶ ಆಸ್ಪತ್ರೆಯ ಡಾ.ಎಸ್.ಎಸ್.ಪಾಟೀಲ ಹೇಳಿದರು.
ನಗರದ ಉಕ್ಕಲಿ ರಸ್ತೆಯ ಜಯಶಾಂತಲಿಂಗೇಶ್ವರ ಬೃಹನ್ಮಠದಲ್ಲಿ ಸೋಮವಾರ ಜರುಗಿದ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದು ದೈಹಿಕ ಆರೋಗ್ಯದ ಜೊತೆಜೊತೆಗೆ ಮಾನಸಿಕ ಕ್ಷಮತೆ ಅತೀ ಮುಖ್ಯವಾಗಿವೆ. ಮಾನಸಿಕ ಆರೋಗ್ಯಕ್ಕೆ ಮಾನವೀಯ ಮೌಲ್ಯಗಳು, ಶಿಕ್ಷಣ, ಸಂಸ್ಕಾರಗಳು ಬೇಕು. ಇವುಗಳನ್ನು ಮಠ, ಮಂದಿರ, ಪುರಾಣ, ಪ್ರವಚನಗಳ ಮೂಲಕ ಪಡೆಯಬಹುದಾಗಿದೆ ಎಂದರು.
ಸ್ಥಳೀಯ ಚಿನ್ಮಯ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಇಜೇರಿ ಮಾತನಾಡಿ, ಉತ್ತಮ ಆರೋಗ್ಯ ಹಾಗೂ ಪರಿಸರಕ್ಕೆ ತಾಯಿ ಮಾತ್ರ ಸಂಸ್ಕಾರ ನೀಡಬಲ್ಲಳು ಎಂದರು.
ಶಿಬಿರದಲ್ಲಿ ಆರೋಗ್ಯಧಾಮದ ಹೃದಯರೋಗ ತಜ್ಞ ಶಂಕರಗೌಡ ಪಾಟೀಲ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂತೋಷಗೌಡ ಪಾಟೀಲ, ಸಂಗಮೇಶ ಪಾಟೀಲ ಹಾಗೂ ಸಂಗಮೇಶ್ವರ ಆಸ್ಪತ್ರೆಯ ಶಾಂತೇಶ ಗಂವಾರಮಠ, ಹಣಮಂತ ರತ್ನಾಕರ, ಮಲ್ಲಿಕಾರ್ಜುನ ಪಾಟೀಲ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮಠ ಕಾರ್ಯದರ್ಶಿ ಗುರುಸ್ವಾಮಿ ಶಿರಸಂಗಿಮಠ, ಶ್ರೀನಾಥ ಹೊಸಕೋಟಿ, ರವಿ ಬಿರಾದಾರ, ಭೀಮಣ್ಣ ಗಂಗಶೆಟ್ಟಿ, ಸಾಹೇಬಗೌಡ ಕಳಸಗೊಂಡ, ಕೇಶಿರಾಮ ಪವಾರ, ಶರಣಬಸಪ್ಪ ಗಂಗಶೆಟ್ಟಿ, ಪುಷ್ಪಾ ಮಹಾಂತಮಠ, ಭಾರತಿ ಭುಯ್ಯಾರ ಇದ್ದರು.

