ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಂಚಕರ್ಮರು ಎಂದು ಹೆಸರಾದ ಐವರು ಕಾಯಕ ಶರಣರ ಚಿಂತನೆಗಳು, ಜೀವನಶೈಲಿ ಹಾಗೂ ಅವರು ಸಾಗಿಬಂದ ದಾರಿ ಇಂದಿನ ಸರ್ವ ಜನಾಂಗಕ್ಕೆ ಮಾದರಿಯಾಗಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಕಾಯಕ ಶರಣರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಹನ್ನೆರಡನೆಯ ಶತಮಾನದಲ್ಲಿ ತನ್ನ ನಿಷ್ಕಲ್ಮಶ ಭಕ್ತಿಯಿಂದ ಶಿವನಿಗೆ ಅಂಬಲಿ ಕುಡಿಸುತ್ತಿದ್ದ ಮಾದಾರ ಚನ್ನಯ್ಯ, ಚರ್ಮದ ಕಾಯಕ ಮಾಡುತ್ತಲೇ ಸಂಸ್ಕೃತದಲ್ಲಿ ವಚನಗಳನ್ನು ರಚಿಸಿದ ಮಾದಾರ ಧೂಳಯ್ಯ, ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು, ಲಿಂಗದೀಕ್ಷೆ ಪಡೆದು ಕಲ್ಯಾಣ ಕ್ರಾಂತಿಯಲ್ಲಿ ಶರಣರನ್ನು ರಕ್ಷಿಸಿದ ಡೋಹರ ಕಕ್ಕಯ್ಯ, ತಮ್ಮ ತೊಡೆಗಳಿಂದ ಚಮ್ಮಾವುಗೆಗಳನ್ನು(ಪಾದರಕ್ಷೆ) ಮಾಡಿದ ಸಮಗಾರ ಹರಳಯ್ಯ, ನಿರಂತರ ಪ್ರಯತ್ನದಿಂದ ಲಿಂಗದೀಕ್ಷೆ ಪಡೆದು ಜನರ ನೀರಿನ ದಾಹವನ್ನು ನೀಗಿಸಿದ ಉರಿಲಿಂಗಪೆದ್ದಿ ಅವರ ಆದರ್ಶಗಳು ನಿಜಕ್ಕೂ ಪ್ರೇರಣಾದಾಯಕ ಹಾಗೂ ಮಾದರಿಯಾಗಿವೆ ಎಂದು ಐವರು ಶಿವಶರಣರ ಕುರಿತು ಹೇಳಿದರು.
ತಹಶೀಲ್ದಾರ ಪ್ರಕಾಶ ಸಿಂದಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ಉಪತಹಶೀಲ್ದಾರ ಗಿರಿಜಾದೇವಿ ಸಜ್ಜನ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ಸುನೀಲ ಕನಮಡಿ, ಹುಸೇನ ಕೊಕಟನೂರ, ಮುಖಂಡರಾದ ರಾಘವೇಂದ್ರ ಗುಡಿಮನಿ, ಅಹ್ಮದ ಮುಲ್ಲಾ, ಸಿಬ್ಬಂದಿ ಶಿವಶಂಕರ ಜಾಧವ, ಅಮೋಘಸಿದ್ದ ದಳವಾಯಿ, ಕುಮಾರ ಅವರಾದಿ, ಕಿಶೋರ ರಾಠೋಡ, ಆಕಾಶ ಮೇತ್ರಿ, ಚನಬಸು ಹೊಸಮನಿ, ಅಬುಲಕಲಾಮ್ ಮೋಮಿನ, ಸುರೇಶ ಶಿರಶ್ಯಾಡ, ಸಿದ್ದು, ಪ್ರವೀಣ ಹೂಗಾರ, ವಿನೋದ ರೆಡ್ಡಿ, ಇದ್ದರು.

