ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಗತ್ತಿನಲ್ಲಿ ಶೇ.೯೫ ರಷ್ಟು ಜನರಿಗೆ ಆಸೆ ಎಂಬುವದು ಇರುತ್ತದೆ. ಆದರೆ ಯಾರಲ್ಲಿಯೂ ದುರಾಶೆಯಿರಬಾರದು. ನನಗೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ,ಪ್ರಧಾನಮಂತ್ರಿಯಾಗುವ ಆಸೆಯಿರುತ್ತದೆ. ಆದರೆ ಯಾರೂ ಅರ್ಹರು ಇರುತ್ತಾರೋ ಅವರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುತ್ತಾರೆ ಎಂದು ಜವಳಿ, ಸಕ್ಕರೆ, ಕೃಷಿ ಮಾರಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ವ್ಹಿ.ಕಿರಸೂರ ಅವರ ವಯೋನಿವೃತ್ತಿಯಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬೀಳ್ಕೋಡುವ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನು ಎಷ್ಟೇ ಆಸೆ ಹೊಂದಿದ್ದರೂ ಭಗವಂತನು ಅವನು ಏನು ಆಗಬೇಕೆಂದು ನಿರ್ಧಾರ ಮಾಡಿರುತ್ತಾನೋ ಅದು ಅಗುತ್ತದೆ. ಕೆಲವೊಮ್ಮೆ ಅರ್ಹರು ಸಹ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿದಂತೆ ಕೆಲ ಹುದ್ದೆಗಳು ಸಿಗುವುದಿಲ್ಲ. ಇದು ವಿಧಿಯಾಟ. ವ್ಯಕ್ತಿ ಬದುಕಿನಲ್ಲಿ ಅನೇಕ ಮೆಟ್ಟಿಲು ಏರುತ್ತಾನೆ. ಕೆಲವೊಮ್ಮೆ ಇಳಿಯುತ್ತಾನೆ. ಜೀವನದಲ್ಲಿ ಏರಿಳಿತ ಇರುತ್ತದೆ. ಕೆಲವರ ಜೀವನದಲ್ಲಿ ಮಾತ್ರ ಸದಾ ಏರಿಕೆಯಾಗುವುದನ್ನು ಕಾಣುತ್ತೇವೆ ಎಂದರು.
ದೇಶ ಕಟ್ಟುವಲ್ಲಿ ಅಭಿಯಂತರರ ಪಾತ್ರ ಹಿರಿದು. ನಾಡಿನಲ್ಲಿ ಸಾಕಷ್ಟು ಅಭಿಯಂತರರು ನೀಡಿದ ಸೇವೆ ಸದಾ ಸ್ಮರಣೀಯವಾಗಿದೆ. ಅದರಲ್ಲಿಯೂ ಡಾ.ವಿಶ್ವೇಶ್ವರಯ್ಯ. ಬಾಳೆಕುಂದ್ರಿಯಂತಹ ಅಭಿಯಂತರರು ಸದಾ ಕಿರಿಯ ಅಭಿಯಂತರರಿಗೆ ಸದಾ ಸ್ಪೂರ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ನನ್ನ ಅವಽಯಲ್ಲಿ ಅನೇಕ ಅಭಿಯಂತರರು ಉತ್ತಮ ಕಾರ್ಯ ಮಾಡುವ ಮೂಲಕ ಸದಾ ನನ್ನ ನೆನಪಿನಲ್ಲಿದ್ದಾರೆ ಎಂದರು.
ಇಂದು ವಯೋವೃತ್ತಿಯಿಂದ ನಿವೃತ್ತಿಯಾಗುತ್ತಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಜಿ.ವ್ಹಿ.ಕಿರಸೂರ ಅವರು ತಮ್ಮ ಸೇವಾವಧಿಯಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ೪೦ ವರ್ಷಗಳ ಕಾಲ ಪ್ರಾಮಾಣಿಕವಾದ ಸೇವೆ ಸಲ್ಲಿಸಿದ್ದು ಶ್ಲಾಘನೀಯ. ಇವರು ತಮ್ಮ ಸೇವಾವಧಿಯಲ್ಲಿ ಯಾರೊಂದಿಗೂ ಭಿನ್ನಾಭಿಪ್ರಾಯ ಹೊಂದದೇ ಸದಾ ಸಂತೋಷದಿಂದ ಸೇವೆ ಮಾಡುತ್ತಿದ್ದು ವೈಶಿಷ್ಟಮಯವಾದ ಸಂಗತಿ. ಇವರು ಸರ್ಕಾರಿ ಸೇವೆಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ನಿವೃತ್ತಿಯಾಗಬಾರದು. ಇವರ ನಿವೃತ್ತಿ ಜೀವನ ಸುಖಮಯವಾಗುವ ಜೊತೆಗೆ ಇವರಿಂದ ಸಮಾಜಕ್ಕೆ ಸೇವೆ ಸಿಗುವಂತಾಗಲಿ. ನನ್ನ ಮತಕ್ಷೇತ್ರದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ನನ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಕಾರ್ಯನಿರ್ವಹಿಸುತ್ತಿರುವದರಿಂದಾಗಿ ಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ಗುರುತಿಸುವುದು ಅವನು ಮಾಡಿದ ಸೇವೆಯಿಂದ ಎಂದರೆ ತಪ್ಪಾಗಲಾರದು. ಇಂದು ನಿವೃತ್ತಿಯಾಗುತ್ತಿರುವ ಜಿ.ವ್ಹಿ.ಕಿರಸೂರ ಅವರು ಬದ್ಧತೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯನಿರ್ವಹಿಸಿದ್ದರಿಂದಾಗಿ ಅವರ ನಿವೃತ್ತಿದಿನ ಇಷ್ಟೊಂದು ಜನತೆ ಸೇರಿ ಅವರನ್ನು ಅದ್ದೂರಿಯಾಗಿ ಬೀಳ್ಕೋಡುಗೆ ನೀಡುತ್ತಿರುವದು ಸಂತಸದಾಯಕ ಸಂಗತಿ ಎಂದರು.
ಆಲಮಟ್ಟಿ ಆಣೆಕಟ್ಟಿನ ಅಧೀಕ್ಷಕ ಅಭಿಯಂತರ ವ್ಹಿ.ಆರ್.ಹಿರೇಗೌಡರ ಮಾತನಾಡಿ, ಮನುಷ್ಯನಿಗೆ ಸರ್ಕಾರಿ ನೌಕರಿ ಸಿಗುವದು ಅನಿಶ್ಚಿತವಾದರೆ, ನೌಕರಿ ಸಿಕ್ಕ ನಂತರ ನಿವೃತ್ತಿ ನಿಶ್ಚಿತವಾಗುತ್ತದೆ. ಸರ್ಕಾರಿ ವೃತ್ತಿಯಲ್ಲಿ ನಿಷ್ಠೆಯಿಂದ ಜನರ ಸೇವೆ ಮಾಡುವದು ಬಹಳ ಮುಖ್ಯ. ಸೇವೆಯಲ್ಲಿರುವವರು ರಾಜರಂತೆ ಬದುಕುವದು ಸಾಧ್ಯವಿಲ್ಲ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸಚಿವ ಶಿವಾನಂದ ಪಾಟೀಲ ಅವರ ನಿರೀಕ್ಷೆಗೆ ತಕ್ಕಂತೆ ಅಽಕಾರಿಗಳು ಕಾರ್ಯ ಮಾಡುವುದು ಬಹುಮುಖ್ಯವಾಗಿದೆ ಎಂದರು.
ವಯೋನಿವೃತ್ತಿ ಹೊಂದುತ್ತಿರುವ ಜಿ.ವ್ಹಿ.ಕಿರಸೂರ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾನು ೧೯೮೬ ರಲ್ಲಿ ಸರ್ಕಾರಿ ಸೇವೆ ಸೇರಿದ ನಂತರ ವಿವಿಧ ಇಲಾಖೆಯಲ್ಲಿ ಅಭಿಯಂತರನಾಗಿ ಪ್ರಾಮಾಣಿಕ ಸೇವೆ ಮಾಡಿದ ತೃಪ್ತಿಯಿದೆ. ೧೯೯೫ ರಲ್ಲಿ ವಿಜಯಪುರ ಜಿಲ್ಲೆಗೆ ಬಂದ ನಂತರ ಇಲ್ಲಿಯವರೆಗೂ ಬೇರೆ ಯಾವುದೇ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲಿಲ್ಲ. ಕೋವಿಡ್ ಕಾಲಘಟ್ಟದಲ್ಲಿಯೂ ನಾನು ಸಾಕಷ್ಟು ಸೇವೆ ಜನರಿಗೆ ಒದಗಿಸಿದ್ದೇನೆ ಎಂದು ಸ್ಮರಿಸಿದರು.
ನಿವೃತ್ತ ಅಧೀಕ್ಷಕ ಅಭಿಯಂತರ ಎಸ್.ಬಿ.ಪಾಟೀಲ ಮಾತನಾಡಿದರು. ಗಣಪತಿ ಅಭಿಷೇಕ, ಅಕ್ಷಯ ಕಿರಸೂರ, ವ್ಹಿ.ಎಸ್.ಪತ್ತಾರ, ಆರ್.ಎಸ್.ಪಾಟೀಲ, ಎ.ಎಸ್.ಮಠ ಕಿರಸೂರ ಅವರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಕಿರಸೂರ ಅವರ ಪುತ್ರ ಅಕ್ಷಯ ಕಿರಸೂರ ತನ್ನ ತಂದೆ ಕುರಿತು ಅಭಿಪ್ರಾಯ ಪಡಿಸಿದ್ದು ಎಲ್ಲರನ್ನು ಭಾವನಾತ್ಮಕವಾಗಿ ಮನ ಸೆಳೆಯಿತು.
ವೇದಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿಭಾಗ ಮಟ್ಟದ ತಾಂತ್ರಿಕ ಸಲಹೆಗಾರ ಬಿ.ಕೆ.ಜಂಗಮಶೆಟ್ಟಿ, ಕಿರಸೂರ ಅವರ ಧರ್ಮಪತ್ನಿ ಮಂಗಳಾ ಕಿರಸೂರ ಇದ್ದರು. ಗಾಯಕ ವಿರೇಶ ವಾಲಿ ಪ್ರಾರ್ಥಿಸಿದರು. ಸಹಾಯಕ ಅಭಿಯಂತರ ಡಿ.ಬಿ.ಕಲಬುರ್ಕಿ ಸ್ವಾಗತಿಸಿದರು. ಸೋಮನಾಥ ಕೊಳಗೇರಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಭಜಂತ್ರಿ ಪರಿಚಯಿಸಿದರು. ಶೃತಿ ಜಾಧವ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿಯಾದ ಜಿ.ವ್ಹಿ.ಕಿರಸೂರ ಅವರನ್ನು ಸಚಿವ ಶಿವಾನಂದ ಪಾಟೀಲ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ, ಗುತ್ತಿಗೆದಾರರು, ವಿವಿಧ ಅಭಿಯಂತರರು, ಅಧಿಕಾರಿಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ನೂತನವಾಗಿ ನಿರ್ಮಿಸಿದ ಲೋಕೊಪಯೋಗಿ ಇಲಾಖೆಯ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.