ಉದಯರಶ್ಮಿ ದಿನಪತ್ರಿಕೆ
ಇಂಡಿ: ಎರೆಹುಳು ಗೊಬ್ಬರ ಉಪಯೋಗಿಸುವದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವದಲ್ಲದೆ ಒಂದು ಎಕರೆಗೆ ವರ್ಷಕ್ಕೆ ೨ ಲಕ್ಷ ರೂ ಹೆಚ್ಚು ಆದಾಯ ಸಂಪಾದಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು.
ಪಟ್ಟಣದ ಕೃಷಿ ಉಪನಿರ್ದೇಶಕರ ಕಚೇರಿಯ ಸಬಾಭವನದಲ್ಲಿ ನಡೆದ ಎರೆಹುಳ ತರಬೇತಿ ಕುರಿತು ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡುತ್ತಿದ್ದರು.
ಎರೆಹುಳು ರೈತರ ಮಿತ್ರ ರೈತ ಬಂಧು ಎಂದು ಕರೆಯಲಾಗುತ್ತಿದೆ. ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಹುಳುಗಳು ನೈಸರ್ಗಿಕ ಪೋಷಕಾಂಶಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸುತ್ತವೆ. ಎರೆಹುಳು ಗೊಬ್ಬರ ರೈತರಿಗೆ ಸಹಾಯವಾಗುತ್ತದೆ. ಎಲ್ಲ ಸಾವಯುವ ಬೆಳೆಗಳ ಕಸಕಡ್ಡಿ ಮಿಗಿಲು ಪದಾರ್ಥಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸಬಹುದು, ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಗೊಬ್ಬರ ಉಪಯುಕ್ತತೆಯಾಗಿದೆ ಎಂದರು.
ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ ಮಣ್ಣಿನ ಹಾಸಿಗೆಯ ಕೆಳಭಾಗದಲ್ಲಿ ಕಾಂಕ್ರೀಟ್ ಹಾಕಬೇಕು, ಇಲ್ಲದಿದ್ದರೆ ಎರೆಹುಳು ಹೊರಗೆ ಹೋಗುವ ಸಾದ್ಯತೆ ಇರುತ್ತದೆ. ಅತಿಯಾದ ಬಿಸಿಲು ಇರುವ ಕಡೆ ಬೆಡ್ ಮೇಲೆ ಚಾವಣಿ ನಿರ್ಮಿಸಬೇಕು,ಮಳೆ ನಂತರ ನಾನಾ ರೀತಿಯ ಬೆಳೆ ತ್ಯಾಜ್ಯ ಮತ್ತು ಪಶು ಗೊಬ್ಬರ ಸಂಗ್ರಹಿಸಬೇಕು. ಹಾಸಿಗೆ ಕೆಳಭಾಗದಲ್ಲಿ ತಡವಾಗಿ ಕೊಳೆಯುತ್ತಿರುವ ತೆಂಗಿನ ಎಲೆಗಳು ಮತ್ತು ಕಬ್ಬು ಬಾಳೆ ಎಲೆಯಂತಹ ತ್ಯಾಜ್ಯ ತರಕಾರಿ ತಾಜ್ಯ ಸಂಪೂರ್ಣವಾಗಿ ಕೊಳೆತ ದನದ ಸಗಣಿ ಹಾಕಬೇಕು ಎಂದರು.
ಎರಡು ವಾರಗಳವರೆಗೆ ಟ್ಯಾಪ ನೀರಿನಿಂದ ಭಾಗಶಃ ಸಿಂಪಡಿಸಿ ಹಾಸಿಗೆಗಳಲ್ಲಿ ೩೦ ರಿಂದ ೪೦ ಪ್ರತಿಶತ ತೇವಾಂಶ ಖಚಿತಪಡಿಸಿಕೊಳ್ಳಬೇಕು ಎಂದು ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ಪ್ರಾತ್ಯಕ್ಷೆತೆ ಮೂಲಕ ತಿಳಿಸಿಕೊಟ್ಟರು.
ಎ.ಎಸ್.ಹುಣಶ್ಯಾಳ, ಪ್ರಗತಿಪರ ರೈತರಾದ ಶರಣಗೌಡ ಪಾಟೀಲ, ಮಾಳಪ್ಪ ಗುಡ್ಲ ಮಾತನಾಡಿದರು