ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ಪಟ್ಟಣವನ್ನು ಒಂದು ಮಾದರಿ ಪಟ್ಟಣವನ್ನಾಗಿ ಅಭಿವೃದ್ದಿ ಮಾಡುವದು ನನ್ನ ಕನಸಾಗಿದ್ದು ಅದನ್ನು ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಚಡಚಣ ಪಟ್ಟಣದಲ್ಲಿ ಸುಮಾರು ೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಚಡಚಣ ಭಾಗದ ಜನರ ಬಹುದಿನದ ಬೇಡಿಕೆಯಾದ ಚಡಚಣದಿಂದ ಉಮದಿವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಸುಮಾರು ೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಮಾರ್ಚ ಅಂತ್ಯದವರೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಸಿಲಾಗುವದೆಂದು ಅವರು ಹೇಳಿದರು.
ಇದಲ್ಲದೆ ಸುಮಾರು ೪ ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುದಾರಣಾ ಕಾಮಗಾರಿಯನ್ನು ಕೈಕೊಳ್ಳಗಾಗುತ್ತಿದೆ ಎಂದು ಅವರು ಹೇಳಿದರು. ಪಟ್ಟಣದಲ್ಲಿ ಶಿಘ್ರವಾಗಿ ಸುಮಾರು ೧೬ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ಇದಲ್ಲದೆ ನಾನು ಶಾಸಕನಾಗಿದ್ದ ಅಂದರೆ ೨೦೦೮ ರಲ್ಲಿ ಚಡಚಣ ಪಟ್ಟಣಕ್ಕೆ ಬಸ್ ಡಿಪೋ ಮತ್ತು ಅಗ್ನಿ ಶಾಮಕ ಠಾಣೆ ಮಂಜೂರಾಗಿದ್ದವು ಆದರೆ ನನ್ನ ನಂತರ ಇಬ್ಬರು ಶಾಸಕರು ಅಧಿಕಾರ ನಡೆಸಿದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಆದರೆ ಇಗ ಮತ್ತೆ ನಾನು ಶಾಸಕನಾಗಿ ಸುಮಾರು ೧೦ ಕೋಟಿ ವೆಚ್ಚದಲ್ಲಿ ಪಟ್ಟಣ್ಣದಲ್ಲಿ ಬಸ್ ಡಿಪೋ ಕಾಮಗಾರಿಯನ್ನು ಶಿಘ್ರದಲ್ಲಿ ಪ್ರಾರಂಭಿಸಲು ಕ್ರಮ ಕೈಕೊಳ್ಳಲಾಗುವದು ಎಂದು ಅವರು ಹೇಳಿದರು.
ಇದಲ್ಲದೆ ಚಡಚಣ ಭಾಗದ ರೈತರ ಕನಸಾದ ಚಡಚಣ ಏತ ನೀರಾವರಿ ಯೋಜನೆಯ ಪ್ರಾರಂಭವಾಗಿದ್ದು ಕೆಲ ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ಇದು ಪ್ರಾಯೋಗಿಕ ಹಂತವಾಗಿದ್ದು ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾಗಿ ನೀರು ಹರಿಯುವಂತೆ ಕ್ರಮ ಕೈಕೊಳ್ಳುವದಾಗಿ ಅವರು ಹೇಳಿದರು. ಪಂಡರಪೂರ-ಗಾಣಗಾಪೂರ ರಾಷ್ಟಿಯ ಹೆದ್ದಾರಿ ಯೋಜನೆ ನೀತಿ ಆಯೋಗದಲ್ಲಿ ಪೆಂಡಿಂಗ ಇದ್ದು ಶಿಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದ ಅವರು ಒಟ್ಟಿನಲ್ಲಿ ಚಡಚಣ ಪಟ್ಟಣ ಮತ್ತು ತಾಲೂಕಿನ ಅಭಿವೃದ್ದಿ ನನ್ನ ಕನಸಾಗಿದ್ದು ಇದನ್ನು ನನಸು ಮಾಡಿಯೆ ಸಿಧ್ಧ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಚಡಚಣ ಮಂಡಲ ಅಧ್ಯಕ್ಷ ಆರ್.ಡಿ.ಹಕ್ಕೆ, ಗ್ಯಾರೆಂಟಿ ಅಧ್ಯಕ್ಷ ರವಿದಾಸ ಜಾಧವ, ಪರಮಾನಂದ ಕೋಳಿ, ದ್ಯಾವಪ್ಪ ಪಾಟೀಲ, ಸಂಗಪ್ಪ ಭಂಡರಕವಟೆ, ಸೈದು ಕೊಡಹೊನ್ನ, ಡಾ|| ವಿ.ಎಸ್.ಪತ್ತಾರ, ಲೋಕೊಪಯೋಗಿ ಎಇಇ ಮಠ, ಪಪಂ ಮುಖ್ಯಾಧಿಕಾರಿ ಪೂಜಾರಿ, ಜೆಇ ಪಾಟೀಲ, ಮಹಾದೇವ ಬನಸೋಡೆ, ದಶರಥ ಬನಸೋಡೆ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.