ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಒಂದು ದೊಡ್ಡ ಕನಸು ಇಟ್ಟುಕೊಂಡು ಹಿರಿಯರು ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯನ್ನು ಆರಂಭಿಸಿದ್ದಾರೆ. ಈ ಶಾಲೆಯು ಕೇವಲ ಬಸವನಬಾಗೇವಾಡಿ ಸಿಮೀತವಾಗದೇ ಇಡೀ ರಾಜ್ಯದಲ್ಲಿಯೇ ಆದರ್ಶಮಯವಾದ ಶಾಲೆಯಾಗಬೇಕೆಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿ ಶಾಲೆಯ ೧೩ ನೇ ವಾರ್ಷಿಕೋತ್ಸವದಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಲರ್‍ಸ್ ಆಪ್ ಕಲ್ಚರ್-೨೦೨೫ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಡಾ.ರಾಧಾಕೃಷ್ಣನ್ ಆದರ್ಶವಾಗಿದ್ದಾರೆ. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತವಾದ ಸ್ಥಾನವಿದೆ. ತಂದೆ-ತಾಯಿಗೆ ಗೌರವ ನೀಡಿದಂತೆ ಶಿಕ್ಷಕರಿಗೂ ಗೌರವ ನೀಡಲಾಗುತ್ತದೆ. ಉತ್ತಮ ಜ್ಞಾನ ನೀಡುವ ಶಿಕ್ಷಕರ ಕೊರತೆ ಇಂದು ಕಾಣುತ್ತಿದೆ. ಶಿಕ್ಷಕರು ಶಾಲೆಯಲ್ಲಿ ಕಲಿಸಿದ್ದನ್ನು ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ-ಪಾಲಕರ ಪಾತ್ರವಿದೆ. ಈ ಶಾಲೆಯಲ್ಲಿ ಉತ್ತಮ ಬೋಧಕ ವೃಂದವಿರುವದು ಶ್ಲಾಘನೀಯ. ಶಾಲೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಮಾಜಕ್ಕೆ ಹೋಗುವಂತಾಗಬೇಕು. ಈ ಶಾಲೆಗೆ ಬೇಕಾದ ಸಹಾಯ-ಸಹಕಾರ ನೀಡಲು ಸದಾ ಬದ್ಧ. ಮುಂದಿನ ದಿನಗಲ್ಲಿ ದೇವಾಲಯದ ೧೬ ಎಕರೆ ಜಮೀನಿನಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾಗುವ ಅಂತರಾಷ್ಟ್ರೀಯ ಶಾಲಾ ಕಟ್ಟಡ ನಿರ್ಮಿಸಿ ಈ ಶಾಲೆಗೆ ಒದಗಿಸುವ ಯೋಜನೆಯಿದೆ ಎಂದ ಅವರು, ಈ ಶಾಲೆಗೆ ಬೇಕಾದ ಎರಡು ಕೋಣೆ, ಶೌಚಾಲಯ ನಿರ್ಮಿಸುವ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು-ಶಿಕ್ಷಕರು ಮಕ್ಕಳಿಗೆ ಸಮಯ ಕೊಡುವ ಅಗತ್ಯವಿದೆ. ವಿದ್ಯೆ ಸರಿಯಾಗಿ ಕಲಿತರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಈ ಶಾಲೆಯಲ್ಲಿ ವಿನೂತನ ಕಾರ್ಯಕ್ರಮಗಳು ನಡೆಯಲು ಶಾಲೆಯ ಆಡಳಿತ ಮಂಡಳಿಯ ಶ್ರಮವಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಗುರಿಯೊಂದಿಗೆ ಶಾಲೆಯಿಂದ ತೆರಳುವಂತಾಗಬೇಕೆಂದರು.
ಸಚಿವ ಶಿವಾನಂದ ಪಾಟೀಲರು ಬಸವನಬಾಗೇವಾಡಿ ಮತಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಕಾಯಕ ಮಾಡುತ್ತಿರುವುದು ಸಂತಸದಾಯಕ ಸಂಗತಿ. ಮುಂಬರುವ ದಿನಗಳಲ್ಲಿ ನಡೆಯುವ ಬಸವ ಜಯಂತಿಯನ್ನು ರಾಷ್ಟ್ರೀಯ ಬಸವ ಜಯಂತಿ ಆಚರಣೆಯಾಗುವಂತೆ ಸಚಿವರು ಪ್ರಯತ್ನಿಸುತ್ತಿರುವದು ಸ್ವಾಗತಾರ್ಹ. ಇವರ ಅಭಿವೃದ್ಧಿ ಕಾರ್ಯಗಳು ಜನಮೆಚ್ಚಿಗೆಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅನಿಲ ಅಗರವಾಲ, ಕನ್ನಡ ರಾಜ್ಯೋತ್ಸವ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ ಮಾತನಾಡಿದರು.
ವೇದಿಕೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಎಂ.ಜಿ.ಆದಿಗೊಂಡ, ಸುರೇಶಗೌಡ ಪಾಟೀಲ, ಪಿಂಟುಗೌಡ ಪಾಟೀಲ, ಸಚೀನ ಬಾಗೇವಾಡಿ,ಎಸ್.ಎ.ನದಾಫ, ಶೈಲಶ್ರೀ ತೇರದಾಳಮಠ, ಪ್ರತಿಭಾ ಮಸಬಿನಾಳ, ಪಿ.ಎಸ್.ರಾಯಗೊಂಡ, ಲಕ್ಷ್ಮೀ ಮಾಲಗಾರ, ಬೇಬಿ ಗಣಾಚಾರಿ, ಮೀನಾಕ್ಷಿ ಮೋದಿ,ಲಕ್ಷ್ಮೀ ಹಿಟ್ನಳ್ಳಿ, ಬಿಇಓ ವಸಂತ ರಾಠೋಡ ಇತರರು ಇದ್ದರು.
ಶಾಲೆಯ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಎಸ್.ಎಸ್.ಝಳಕಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲೆಯ ಪ್ರಾಚಾರ್ಯೆ ಆರ್.ಎಂ.ರೋಣದ ವರದಿ ವಾಚಿಸಿದರು. ಬಿ.ಎನ್.ಹಂಚಲಿ ಸ್ವಾಗತಿಸಿದರು. ಎಸ್.ಎಂ.ಬಿಸ್ಟಗೊಂಡ. ಎಂ.ಆರ್.ಮುಕಾರ್ತಿಹಾಳ, ಎಸ್.ಪಿ.ಸಾಳಂಕೆ, ನಿರೂಪಿಸಿದರು. ಉಮೇಶ ಗೊಳಸಂಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಿಗೆ, ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ರತರಿಗೆ, ಶಾಲೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ, ಶಾಲಾ ಪ್ರಗತಿಗೆ ದೇಣಿಗೆ ನೀಡಿದವರನ್ನು, ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಪತ್ರಕರ್ತರನ್ನು ಸನ್ಮಾನಿಸಲಾಯಿತು.