ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಇ-ಆಫೀಸ್ ನಾಗರಿಕ ಪೋರ್ಟಲ್‌ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರ ಜನರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಎಲ್ಲ ರೀತಿಯ ತಂತ್ರಾಂಶಗಳನ್ನು ಆಡಳಿತದಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಈ ದಿಶೆಯಲ್ಲಿ ಅಧಿಕಾರಿಗಳು ಜನರಿಗೆ ಸಮರ್ಪಕವಾದ ಕಾರ್ಯವನ್ನು ಮಾಡಿಕೊಡಬೇಕು. ಸರ್ಕಾರ ನಿಗದಿ ಪಡಿಸಿದ ಅವಧಿಯಲ್ಲಿ ಜನರ ಕೆಲಸಗಳನ್ನು ಮಾಡಿಕೊಡುವ ಮೂಲಕ ಅವರಿಗೆ ನೆರವಾಗಬೇಕು. ಜನರು ಪುರಸಭೆಯಲ್ಲಿ ಆರಂಭಿಸಿದ ಇ-ಆಫೀಸ್ ನಾಗರಿಕ ಪೋರ್ಟಲ್ ಸದುದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಮಾತನಾಡಿ, ಈಗಾಗಲೇ ಸರ್ಕಾರ ಕಂದಾಯ ಇಲಾಖೆಯಲ್ಲಿ ಇ-ಆಫೀಸ್ ಪೋರ್ಟಲ್ ಆರಂಭಿಸಿದೆ. ಅದರಂತೆ ಮಹಾನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಇಂತಹ ಸೇವೆ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಈ ಸೇವೆಯನ್ನು ಸರ್ಕಾರ ಆರಂಭಿಸಿದೆ. ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಽಕಾರಿಗಳ ನಿರ್ದೇಶನದ ಮೇರೆಗೆ ಈಗಾಗಲೇ ವಿಜಯಪುರ ಮಹಾನಗರ ಪಾಲಿಕೆ, ಇಂಡಿ, ತಾಳಿಕೋಟಿ, ಮುದ್ದೇಬಿಹಾಳ,ಸಿಂದಗಿ ಪುರಸಭೆಯಲ್ಲಿ ಇ-ಆಫೀಸ್ ಪೋರ್ಟಲ್ ಆರಂಭಿಸಲಾಗಿದೆ. ಇಂದು ಬಸವನಬಾಗೇವಾಡಿಯಲ್ಲಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಪಟ್ಟಣ ಪಂಚಾಯಿತಿಗಳಲ್ಲಿಯೂ ಈ ಸೇವೆಯು ಆರಂಭವಾಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ವ್ಯವಸ್ಥಾಪಕ ಸುರೇಶ ಬಾಗೇವಾಡಿ ಅವರು ಮಾತನಾಡಿ, ಗುಣಮಟ್ಟದ ಸೇವೆ ಮತ್ತು ಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಇ-ಆಫೀಸ್ ತಂತ್ರಾಂಶ ಅಳವಡಿಸಲಾಗಿದೆ. ಈ ಸೇವೆಯಿಂದ ಜನರಿಗೆ ತ್ವರಿತ ಸೇವೆ ಸಿಗಲಿದೆ. ಇ-ಆಫೀಸ್ ಜಾರಿಯಾಗುವದರಿಂದಾಗಿ ಕಡತಗಳು ಕಳೆದುಹೋಗುವ ಪ್ರಮೇಯವಿಲ್ಲ. ಸಾರ್ವಜನಿಕ ದಾಖಲೆಗಳ ಗಣಕೀಕರಣ ಮತ್ತು ಸುರಕ್ಷತೆ ಕಾಪಾಡಬಹುದು. ಕಡತ ಹುಡುಕುವಲ್ಲಿ ಸಮಯದ ಉಳಿತಾಯವಾಗುವ ಜೊತೆಗೆ ವಿಲೇವಾರಿಯಲ್ಲಿ ಸ್ವಯಂ ಚಾಲನೆಯಾಗುತ್ತದೆ. ಆನ್‌ಲೈನ ಮೂಲಕ ಕುಳಿತಲ್ಲಿಯೇ ಅರ್ಜಿದಾರರು ಕಡತದ ಸ್ಥಿತಿ ತಿಳಿದುಕೊಳ್ಳಬಹುದು. ಹಲವು ಅವ್ಯವಹಾರಗಳಿಗೆ ಕಡಿವಾಣಯಾಗುವ ಜೊತೆಗೆ ಸಾರ್ವಜನಿಕರ, ನೌಕರರ ಸಮಯ ಉಳಿತಾಯವಾಗುತ್ತದೆ. ಕಚೇರಿಯ ಕೆಲಸದ ಹಿನ್ನೆಲೆಯಲ್ಲಿ ಸಾರ್ವಜನಿಕರ ನಿತ್ಯ ಅಲೆದಾಟ ತಪ್ಪುತ್ತದೆ. ಇ-ಆಫೀಸ್ ಜಾರಿಯಾಗುವದರಿಂದಾಗಿ ಕಾಗದ ರಹಿತ ಸೇವೆ ಒದಗಿಸಬಹುದು. ನೌಕರರು ನಿತ್ಯ ಬಾಕಿಯಿರುವ ಅರ್ಜಿಗಳ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಜಗದೇವಿ ಗುಂಡಳ್ಳಿ, ನಜೀರ ಗಣಿ, ಪ್ರವೀಣ ಪೂಜಾರಿ, ವರ್ತಕ ಅನಿಲ ಅಗರವಾಲ, ಪುರಸಭೆ ಅಭಿಯಂತರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಪುರಸಭೆ ಸಿಬ್ಬಂದಿಗಳಾದ ವಿಜಯಕುಮಾರ ವಂದಾಲ, ಮಹೇಶ ಹಿರೇಮಠ, ಸಿದ್ರಾಮಗೌಡ ಪಾಟೀಲ, ಆರ್.ಬಿ.ಮುಲ್ಲಾ, ರಾಜು ರಾಠೋಡ, ಗುರುರಾಜ ಮಾಗಾವಿ, ಶ್ರೀಧರ ಕಟ್ಟೀಮನಿ, ಗೌಡಪ್ಪ ಪಾಟೀಲ ಇತರರು ಇದ್ದರು.