ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತ ಒಂದು ವರ್ಷ ದುಡಿದರೆ ಭಿವಿಷ್ಯದ ವರ್ಷಕ್ಕೆ ಸಾಕಾಗುವಷ್ಟು ಆಹಾರ ಸಂಗ್ರಹಿಸುತ್ತಾನೆ. ಆದರೆ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದರೆ ಇಡೀ ಜೀವನಪರ್ಯಂತ ಸಾಕಾಗುವಷ್ಟು ಜ್ಞಾನವೆಂಬ ಆಹಾರ ಸಂಗ್ರಹಿಸಬಹುದು. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ತಮ್ಮ ಕೈಯಲ್ಲಿದೆ. ತಮ್ಮ ಹಣೆಯ ಬರಹವನ್ನು ತಾವೇ ಬರೆದುಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ ಹೇಳಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ತಾರುಣ್ಯದಲ್ಲಿ ಕಷ್ಟಪಟ್ಟು ದುಡಿದರೆ ವೃದ್ಧಾಪ್ಯದಲ್ಲಿ ಅದೇ ಫಲವಾಗಿ ನೆಮ್ಮದಿ ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿಗಳು ಪಾಲಕರ ಕನಸನ್ನು ಈಡೇರಿಸಿದಂತಾಗುತ್ತದೆ. ಅವರ ಉದರದಲ್ಲಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದರು.
ಎಂ.ಎಂ. ಮುಜಗೊಂಡ ಮಾತನಾಡಿ, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಉತ್ತಮ ಪಾಠ ಬೋಧನೆಯ ಮೂಲಕ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗ್ರಾಪಂ ಸದಸ್ಯ ಸುರೇಶ ವಾಲಿ, ಗಣ್ಯರಾದ ಸಂಕಪಗೌಡ ಬಿರಾದಾರ, ಅರವಿಂದ ಕರಾಳೆ, ಈರಣ್ಣ ಕಾರಕಲ್, ರಾಜೇಸಾಬ ನದಾಫ, ಪ್ರಾಚಾರ್ಯೆ ಮೀನಾಕ್ಷಿ ವಾಗ್ದಾಳೆ ಮತ್ತಿತರಿದ್ದರು.