ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪರಿಸರದ ಕಾಳಜಿ ಕೇವಲ ವಾಟ್ಸಪ್ ಸ್ಟೇಟಸಗೆ ಸೀಮಿತವಾಗಬಾರದು. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರು ಒಂದೊಂದು ಮರ ನೆಟ್ಟು, ಪೋಷಣೆ ಮಾಡಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ನಟ ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡ ಹೇಳಿದರು.
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಗಮ ಯುವ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮಿಣಾಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ವೃಕ್ಷಥಾನ್ ಜಾಥಾದಲ್ಲಿ ಮಾತನಾಡಿದ ಅವರು, ಮರ ಗಿಡಗಳು ಮನುಷ್ಯನಿಗೆ ಶುದ್ಧ ಗಾಳಿ, ನೆರಳು, ಹಣ್ಣು ನೀಡುತ್ತವೆ. ಆದರೆ ಮಾನವನ ತನ್ನ ಸ್ವಾರ್ಥ ಮತ್ತು ದುರಾಸೆಯಿಂದ ಇಂದು ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಸಂಗಮ ಸಂಸ್ಥೆ ಪರಿಸರದ ಕಾಳಜಿಯ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ದೇವರ ಹಿಪ್ಪರಗಿ ಜೆ.ಎಮ್.ಜೆ ನಿರ್ದೇಶಕಿ ಸಿಸ್ಟರ್ ಹೃದಯಾ ಮಾತನಾಡಿ, ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಆಸಕ್ತಿ ವಹಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗಮ ಸಂಸ್ಥೆ ನಿರ್ದೇಶಕ ಫಾ.ಸಂತೋಷ, ಪೊಲೀಸ್ ಹವಾಲ್ದಾರ್ ವಿ.ಪಿ.ಜೋಗಿ ಮಾತನಾಡಿದರು
ಜಾಥಾದಲ್ಲಿ ಸಂಗಮ ಸಂಸ್ಥೆ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೆಲ್ಲೊ, ರಾಜೀವ ಕುರಿಮನಿ, ಫಾ.ಜೀವನ, ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರದ ಸಿಬ್ಬಂದಿಗಳು, ಸಂಗಮ ಯುವ ಒಕ್ಕೂಟದ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿದ್ದರು.