ಲೇಖನ
– ನಂದಿನಿ ಧರ್ಮರಾಜ್
(“ನಮ್ಮ ಕಥಾ ಅರಮನೆ” ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ತಂಪಾದ ಗಾಳಿ, ಜೀಕುತ್ತಿದ್ದ ಸೀರೆಯ ಜೋಳಿಗೆಯಲ್ಲಿ ತನ್ನ ಕಂದನನ್ನು ಮಲಗಿಸಿ, ಕೈ ಬಳೆಯ ಸದ್ದು ಕೂಸಿನ ನಿದಿರೆಗೆ ಭಂಗತಾರದಂತೆ ಮೆಲ್ಲನೆ ಸಾವರಿಸಿ , ದೂರ ಸರಿದು ವಾರದ ಬಾಣಂತಿಯೆಂದೂ ಲೆಕ್ಕಿಸದೆ,ತನ್ನ ಕುಟುಂಬದ ನಿರ್ವಹಣೆಗಾಗಿ ಕಬ್ಬು ಕಡಿಯಲು ನಿಂತ, ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ನಮ್ಮೂರಿನತ್ತ ಬಂದು ತನ್ನ ವಲಸೆಯ ಗುರಿ ಮತ್ತು ಉದ್ದೇಶವನ್ನು ಪ್ರತಿ ನಿತ್ಯ ಆರಾಧಿಸುವ ,ಹನುಮವ್ವ ಅವಳ ಕುಟುಂಬವೆಂಬ ಜಗತ್ತಿಗೆ ಊರುಗೋಲು ಮತ್ತು ಮಾದರಿಯಾಗಿದ್ದಾಳೆ.
ಅಲ್ಲಾ ಹನುಮವ್ವ ಬಾಣಂತಿ ನಂಜಾದರೆ ಏನು ಮಾಡ್ತೀಯಾ ..!
ಸ್ವಲ್ಪ ದಿನ ಕೆಲಸ ಮಾಡದೆ ಸುಮ್ಮನಿರು.ನಿಮ್ಮೂರಿಗೋಗಿ ಬಾಣಂತನ ಮುಗಿಸಿಕೊಂಡು ಬಾ.ಆಮೇಲೆ ಇದ್ದಿದ್ದೇ ..!ಎಂದಾಗ
ಇಲ್ಲಾ ಕಣ್ರಕ್ಕಾ ..ನನ್ನ ಗಂಡ ಅದಾನಲ್ಲಾ, ಇಲ್ಲಿದ್ರೆ ಸುಮ್ಮನೆ ಕೆಲಸ ಮಾಡ್ತಾನಾ..
ನಮ್ಮೂರಿಗೆ ಒಂಟ್ನಂದ್ರಾ.. ಅದೇ ಕುಡಿಯಕತ್ತಾನ..ನಾನಿದ್ರಾ ಹಂಗೆ ಮಾಡೋವಲ್ಲಾ..!
ಇಬ್ರೂ ಕೂಡಿ ಕೆಲಸ ಮಾಡ್ತೀವಿ.. ಊರಲ್ಲಿ ಕಟ್ಟೀರೋ ಮನೆಗೆ ಬ್ಯಾಂಕನಾಗ ಸಾಲ ಮಾಡಿವ್ರೀ..
ಮತ್ತೆ ಒಬ್ಬಾತ ದುಡಿದ್ರೇ ಹೆಂಗ ಆದಾದ್ರೀ..
ಇಬ್ರೂ ದುಡಿದು ಒಟ್ಟಾಗಿ ಊರಿಗೆ ಹೋಕ್ಕಿವ್ರಿ…
ಹನುಮವ್ವ ನ ಮಾತುಗಳು ಸಹಜವಾದರೂ.. ಅವಳ ಕಾಯಕ ದಿನಗೂಲಿಯಾದರೂ… ಕುಡುಕ ಗಂಡನನ್ನು ಜವಾಬ್ದಾರಿಯುತ ದಾರಿಯಲ್ಲಿ ಸಾಗಿಸಿಕೊಂಡು, ತನ್ನದೊಂದು ಗೂಡನ್ನು ಉಳಿಸಿಕೊಳ್ಳುವ ಪ್ರಜ್ಞೆ,ತನಗಿಂತಲೂ ಕುಟುಂಬಕ್ಕಾಗಿ ದುಡಿಯುವ ತುಡಿತದ ಮನಸ್ಥಿತಿ, ಬ್ಯಾಂಕ್ ನ ಸಾಲವನ್ನು ತೀರಿಸಬೇಕೆಂಬ ಆರ್ಥಿಕ ಶಿಸ್ತು ,ಇವೆಲ್ಲದರಿಂದ ಹನುಮವ್ವ ಒಂದರ್ಥದಲ್ಲಿ ಕುಟುಂಬವನ್ನು ಮುನ್ನಡೆಸುವ ಮಹಿಳೆಯಾಗಿದ್ದಾಳೆ.
ಒಂದು ಪುಟ್ಟ ಪ್ರಪಂಚದಂತೆಯೇ.. ವಿಶಾಲ ಜಗತ್ತನ್ನು ಗೆದ್ದ , ಆಳಿದ (ಪ್ರೀತಿಯಿಂದ , ಸಹಕಾರದಿಂದ, ಛಲದಿಂದ) ಮಹಿಳಾ ಮಣಿಗಳು ನಮ್ಮೊಡನೆ ಹಲವಾರು ಮಂದಿ ಇದ್ದರು ಮತ್ತು ಈಗಲೂ ಇದ್ದಾರೆ.
ಸೇವೆಯ ಸಂಕೇತವಾಗಿ ಮದರ್ ತೆರೇಸಾ, ವಿಜ್ಞಾನದ ಸಂಕೇತವಾಗಿ ಮೇರಿ ಕ್ಯೂರಿ, ಅಕ್ಷರದ ಸಂಕೇತವಾಗಿ ಸಾವಿತ್ರಿ ಬಾಯಿ ಫುಲೆ
ಶೂರತೆಯ ಸಂಕೇತವಾಗಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ
ಧೀರತೆಯ ಸಂಕೇತವಾಗಿ ಇಂದಿರಾಗಾಂಧಿ, ಈಗಲೂ..
ಸರಳತೆ ಮತ್ತು ಸ್ಪೂರ್ತಿ ಸಂಕೇತವಾಗಿ ಸುಧಾ ಮೂರ್ತಿ
ಮಾನವ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ ಯೂಸುಫ್ ಮಲಾಲಾ, ಪುಟ್ಟ ಗಿಡಗಳಿಗೆ ನೀರುಣಿಸಿ ಹೆಮ್ಮರವಾಗಿ ಮಕ್ಕಳಂತೆ ಬೆಳೆಸಿದ ಸಾಲು ಮರದ ತಿಮ್ಮಕ್ಕ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಪ್ರಜಾಪ್ರಭುತ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯ ದ್ರೌಪದಿ ಮುರ್ಮು
ಇವರೆಲ್ಲರೂ ಒಂದಲ್ಲಾ ಒಂದು ರೀತಿ ಭಾವನಾತ್ಮಕವಾಗಿ ನಮ್ಮೊಡನೆ ಪ್ರಭಾವಿಸಿ , ನಮ್ಮ ವ್ಯಕ್ತಿತ್ವದ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣೀಭೂತರಾಗಿದ್ದಾರೆ ಅರೇ ಕ್ಷಣವಾದರೂ ಅವರ ಹೇಳಿಕೆಗಳಿಗೆ ಅವರ ಮಾತುಗಳಿಗೆ ತಲೆದೂಗಿ ಅರ್ಪಿಸಿಕೊಂಡಿದ್ದೇವೆ.
ಪ್ರೀತಿಯ ಜಗದೊಳಗೆ ಒಂದಲ್ಲ ಒಂದು ರೀತಿ ನಮ್ಮನ್ನು ಆವರಿಸಿಕೊಂಡು. ಋಣಾತ್ಮಕ ಚಿಂತನೆಗಳ ಮೇಲೆ ಆಳ್ವಿಕೆ ನಡೆಸಿ ಅಹಂಕಾರವನ್ನ ತಗ್ಗಿಸಿದ್ದಾರೆ.
ಇತ್ತೀಚಿಗಂತೂ ಉನ್ನತ ಅಧಿಕಾರಗಳನ್ನು ಹೊಂದುವ ಮೂಲಕ ನಾಲ್ಕು ಗೋಡೆಯ ಒಳಗಿದ್ದ ತಮ್ಮ ಅಸ್ತಿತ್ವವನ್ನ ವಿಶಾಲ ಜಗದೊಳಗೆ ಅಸ್ಮಿತೆಯಾಗಿ ಪರಿವರ್ತಿಸಿಕೊಂಡಿದ್ದಾರೆ, ಕುಟುಂಬದ ಒಳಗು ಮತ್ತು ಹೊರಗೂ ಸಮಬಲದಲ್ಲಿ ನಿಭಾಯಿಸುವವಳಾಗಿದ್ದಾಳೆ.
ಅಪ್ಪ ತರುತ್ತಿದ್ದ ಕಿರು ಸಂಭಾವನೆಯನ್ನೆ… ಬಟವಾಡೆ ಪುಸ್ತಕದಲ್ಲಿ ದಾಖಲಿಸಿ, ಶಿಸ್ತಿನ ಆರ್ಥಿಕ ತಜ್ಞೆಯಾಗಿ ,ಮಕ್ಕಳನ್ನು ಸಲಹುವ ಕಲ್ಯಾಣಿಯಾಗಿ, ಎಲ್ಲರನ್ನೂ ಎಲ್ಲಾ ರೀತಿಯಲ್ಲಿಯೂ ಸಂಭಾಳಿಸುವ ಕಾರುಣಿಯಾಗಿ ಇದ್ದಂತಹ ನನ್ನವ್ವ ಹಾಕಿರುವ ಭದ್ರ ಬುನಾದಿ ಸಕಲವನ್ನೂ ಸಾಧಿಸುವ ಛಲವನ್ನು ನೀಡಿದೆಯೆಂದರೆ ತಪ್ಪಾಗಲಾರದು..
ಸಹನೆ ತಾಳ್ಮೆ ದೌರ್ಬಲ್ಯವಲ್ಲ ಹೆಣ್ಣಿಗೆ ಅಸ್ತ್ರಗಳಾಗಿವೆ.
ಅಂತೆಯೇ ನನ್ನ ಪುಟ್ಟ ಅನಾರೋಗ್ಯದ ಸ್ಥಿತಿಯಲ್ಲಿ ಕಿಂಚಿತ್ತು ಕೊರತೆಯಾಗದಂತೆ ತನ್ನ ತಂದೆಗೆ ಸಹಕರಿಸುವ ನನ್ನ ಮಗಳ ಬಗ್ಗೆ ಹೆಮ್ಮೆಯನ್ನು, ಜವಾಬ್ದಾರಿಯನ್ನು ಪಡೆಯುವ ಮನಸ್ಥಿತಿ ಸ್ಮರಿಸುತ್ತಾ.. ಪ್ರೀತಿ ಮತ್ತು ವಿನಯವೆಂಬ ಅಸ್ತ್ರದಿಂದ ತನ್ನ ಸುತ್ತಲ ಜಗವನ್ನು ಸೆಳೆಯಬಹುದೆಂದು ಪ್ರಾಂಜಲ ಮನದಿಂದ ಆಶಿಸುತ್ತೇನೆ..
ಸಹೃದಯಿ ಸ್ನೇಹಿತರಿಗೆ ಅನಿಸಬಹುದು.. ಏನಪ್ಪಾ?? ಇವರು ಸಾಧನೆ ಮಾಡಿದ ಮಹಿಳೆಯರಿಗಿಂತ ಹನುಮವ್ವ , ತನ್ನ ತಾಯಿ, ತನ್ನ ಮಗಳ ಬಗ್ಗೆ ಹೇಳಿದರಲ್ಲಾ ಎನಿಸಬಹುದು.
ಕೆಲವೊಮ್ಮೆ ರಕ್ತ ಪಿಪಾಸುಗಳನ್ನು, ಹೊಂಚು ಸಂಚುಗಳನ್ನು ಹಿಡಿದು ಜಗತ್ತನ್ನು ಆಳ್ವಿಕೆ ಮಾಡಿದವರಿಗಿಂತ, ಪ್ರೀತಿ ವಿಶ್ವಾಸ,ತ್ಯಾಗದಿಂದ ಆಳುತ್ತಿರುವ , ನಮ್ಮೊಳಗಿನ ನಮ್ಮವರನ್ನು ಗುರುತಿಸುವ ಕೆಲಸವಾಗಬೇಕು ಅಲ್ಲವೇ ಸ್ನೇಹಿತರೆ..
