ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಇಂಡಿ ಹಾಗೂ ಹಾಪ್‌ಕಾಮ್ಸ್ ವಿಜಯಪುರ ಇವರ ಸಹಯೋಗದಲ್ಲಿ ಜ.13 ರಿಂದ 15ರವರೆಗೆ ನಗರದ ಬಸವ ವನದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಮೂರು ದಿಗಳ ಫಲ-ಪುಷ್ಪ ಪ್ರದರ್ಶನ, ಹಣ್ಣುಗಳ ಮೇಳ ಹಾಗೂ ತೋಟಗಾರಿಕೆ ಅಭಿಯಾನ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರು ಬೆಳೆದಿರುವ ವಿವಿಧ ಹಾಗೂ ಅತ್ಯುತ್ತಮ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಇಲಾಖಾ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿಯ ಜೊತೆಗೆ ಹಣ್ಣು, ಹೂ, ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಪ್ರದರ್ಶನ ಮತ್ತು ತೋಟಗಾರಿಕೆಯಲ್ಲಿ ಯಾಂತ್ರೀಕರಣ, ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಮತ್ತು ಲಿಂಬೆ ಕುರಿತು ಒಂದು ದಿನದ ವಿಚಾರ ಸಂಕೀರ್ಣ ಹಾಗೂ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ರೈತರು, ನಾಗರಿಕರು ಮತ್ತು ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
