ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಬಲಾದಿಯ ಅರ್ಥಾರ್ಥ ಸಾರವಾಡದ ಕಾಲಜ್ಞಾನ ಬಹಳ ಅದ್ಭುತವಾದದ್ದು. ಈ ಭವ್ಯ ಪರಂಪರೆಯ ಮೂಲಪುರುಷನೇ ಸಾರವಾಡದ ಚಿಕ್ಕಪ್ಪಯ್ಯ ಎಂದು ಸಾರವಾಡದ ಓಂಕಾರಯ್ಯ ಶ್ರೀಗಳು ಹೇಳಿದರು.
ಅವರು ಬುಧವಾರ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಸದಾಶಿವ ಅಜ್ಜನ ಮಠದಲ್ಲಿ ಚಿಕ್ಕಬೇವನೂರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಸಾರವಾಡದ ಅಧಿದೇವತೆ ಚಿಕ್ಕಪ್ಪಯ್ಯ ಮೊಟ್ಟಮೊದಲು ಕಾಲಜ್ಞಾನದ ಹಾಡುಗಳನ್ನು ಬರೆದು ಶ್ರೀಕಾರ ಹಾಕಿದರು. ನಂತರ ಈ ಪರಂಪರೆಯನ್ನು ಆತನ ಕೃಪಾಪುತ್ರ ಸದಾಶಿವ ಮುತ್ಯ ಮುಂದುವರೆಸಿಕೊಂಡು ಬಂದರು ಕಾಲಜ್ಞಾನದಲ್ಲಿ ಅವರು ಹೇಳಿದ ನುಡಿಗಳು ಇಂದಿಗೂ ಸತ್ಯವಾಗಿದೆ ಎಂದು ಹೇಳಿದರು.
ಅಕ್ಕಮಹಾದೇವಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಉಮೇಶ ಬಳಬಟ್ಟಿ ಮಾತನಾಡಿ, ತ್ರಿಕಾಲ ಜ್ಞಾನ ಹೊಂದಿದ ಸಾರವಾಡದ ಶ್ರೀ ಮಠದ ಶಾಖಾ ಮಠ ಚಿಕ್ಕಬೇವನೂರ ಗ್ರಾಮದಲ್ಲಿಯೂ ಪ್ರಾರಂಭವಾಗಿದ್ದು ಸಂತಸ ತಂದಿದೆ. ಗ್ರಾಮಸ್ಥರು ಪ್ರತೀ ವರ್ಷವೂ ಸಹ ಜಾತ್ರಾ ಮಹೋತ್ಸವ ನೆರವೇರಿಸುವ ಜೊತೆಗೆ ಸಾಮೂಹಿಕ ವಿವಾಹ, ಧರ್ಮ ಸಭೆಗಳನ್ನು ಏರ್ಪಡಿಸಿ ಬಡವರ ಪಾಲಿಗೆ ಆಸರೆಯಾಗಬೇಕು ಎಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ ಬಿರಾದಾರ ವಕೀಲರು, ರಾಚು ಹಂಜಗಿ,ಶಂಕರ ದೇಸಾಯಿ, ಅಶೋಕ ಅಗಸರ, ಸತೀಶ ಮದರಖಂಡಿ, ಶಶಿಕಾಂತ ಬಿರಾದಾರ, ಶಿವಾನಂದ ವರವಂಟಿ, ಶರಣು ಜಂಬಗಿ, ಶ್ರೀಶೈಲ ಮುಟಗೇರ, ವಿನೋದ ಉಮ್ಮರ್ಜಿ, ಸುನೀಲ ಮದರಖಂಡಿ, ಶಿವಾನಂದ ಕರ್ಕಿ ಇತರರು ಉಪಸ್ಥಿತರಿದ್ದರು.
ಜಯಕುಮಾರ ಜಂಬಗಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

