ಉದಯರಶ್ಮಿ ದಿನಪತ್ರಿಕೆ
ಚಡಚಣ: ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ರೈತ ಮಹಿಳೆಯರು ಸೋಮವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತೈದೆಯರಿಗೆ ಉಡಿ ತುಂಬುವ ಮೂಲಕ ರಾಷ್ಟ್ರೀಯ ರೈತ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜೆ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಭೂತಾಯಿಗೆ ಚರಗ ಚೆಲ್ಲಿದರು. ಗ್ರಾಮದ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯ ಸೇರಿದಂತೆ ಇತರ ವಿಶೇಷ ಭೋಜನವನ್ನು ಭೂತಾಯಿಗೆ ಅರ್ಪಿಸಿದರು.
ಚರಗ ಚೆಲ್ಲುವ ಸಂಭ್ರಮ ಮುಗಿದ ನಂತರ ತುಂಬಿದ ಹೊಲದ ಮಧ್ಯ ಮುತೈದೆಯರ ಊಟವಾದ ಮೇಲೆ ಎಲ್ಲರೂ ಸಹ ಭೋಜನವನ್ನು ಸವಿದರು. ಸ್ವಲ್ಪ ಹೊತ್ತು ಹೊಲದಲ್ಲಿ ವಿಶ್ರಾಂತಿ ಕಳೆದು ಸಂಜೆ ವೇಳೆಗೆ ಮನೆಗೆ ಮರುಳಿದರು.
ರೇವತಗಾಂವ ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿಯವರು ಮಾತನಾಡುತ್ತ. ‘ನಾಲ್ಕು ದಿಕ್ಕುಗಳಿಗೂ ಚರಗ ಚೆಲ್ಲುವುದು ಸಮೃದ್ಧ ಫಸಲು ಬೆಳೆಯಲಿ, ಬೆಳೆಗೆ ಯಾವುದೇ ರೋಗ ತಗುಲದೆ ಒಳ್ಳೆಯ ಇಳುವರಿ ಬರಲಿ ಎಂಬ ಆಶಯದೊಂದಿಗೆ ಕೃಷಿಕರು ಭೂಮಿತಾಯಿಗೆ ಅರ್ಪಿಸುವ ನೈವೇದ್ಯವೇ ಚರಗವಾಗಿದೆ’ ಎಂದು ಹೇಳಿದರು.

