ಲಿಟಲ್ ವಿಂಗ್ಸ್ ಶಾಲೆಯಲ್ಲಿ ಆಹಾರ ಉತ್ಸವ ಕಾರ್ಯಕ್ರಮ | ಗಮನ ಸೆಳೆದ ಬಗೆ ಬಗೆಯ ತಿಂಡಿ ತಿನಿಸುಗಳು
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದು ನಾವು ವಿದೇಶಿ ಆಹಾರಗಳಾದ ಫಿಜಾ, ಬರ್ಗರ್, ಫ್ರೆಂಚ್ ಫ್ರೈಸ್, ಮೊಮೊಸ್, ನೂಡಲ್ಸ್, ಸೇರಿದಂತೆ ಫಾಸ್ಟ್ ಫುಡ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇವೆ. ಅಲ್ಲದೇ ಮಕ್ಕಳಿಗೂ ಕೂಡಾ ಇಂತಹ ಆಹಾರವನ್ನೇ ತಿನ್ನಿಸುತ್ತಿರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ಪಟ್ಟಣದ ಲಿಟಲ್ ವಿಂಗ್ಸ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಆಯೋಜಿಸಿರುವ ಆಹಾರ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿಷಪೂರಿತ ಜಂಕ್ ಫುಡ್ ತಿನ್ನುವುದರಿಂದ ಹೊಸ ಹೊಸ ರೋಗಿಗಳು ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಪಾಲಕರಾದ ನಾವುಗಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಆಟ-ಪಾಠದ ಜೊತೆಗೆ ದೇಶಿಯ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳ ಕುರಿತು ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಆಹಾರ ಮೇಳ ಅಥವಾ ಆಹಾರ ಉತ್ಸವಗಳಂತ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಮ್ಮ ಸ್ವ-ದೇಶಿಯ ಆರೋಗ್ಯಕರ ಆಹಾರ ಪದಾರ್ಥಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮವನ್ನು ಪತ್ರಕರ್ತ ಮಹಾಂತೇಶ ನೂಲಾನವರ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮ ಮನೆಯಲ್ಲಿ ಸ್ವತಃ ತಾವೇ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸಿ ಆಹಾರ ಉತ್ಸವದಲ್ಲಿ ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿನ ಸೃಜನ ಶೀಲತೆಯನ್ನು ಇನ್ನಷ್ಟು ವಿಕಾಸಗೊಳಿಸಿದ್ದಾರೆ. ಅಲ್ಲದೇ ಪ್ರಥಮ ಬಾರಿಗೆ ಶಾಲೆಯಲ್ಲಿ ಆಹಾರ ಮೇಳ ಆಯೋಜಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ಮನೆಯಲ್ಲಿ ತಯಾರಿಸಿದ ಆಹಾರದ ಅವಶ್ಯಕತೆ ಹಾಗೂ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಒಂದಲ್ಲಾ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡುತ್ತ ಬರುತ್ತಿರುವ ಲಿಟಲ್ ವಿಂಗ್ಸ್ ಶಾಲೆಯ ಶಿಕ್ಷಕರಿಗೆ ಅಭಿನಂದಿಸಿದರು.
ಈ ವೇಳೆ ಶಾಲೆಯ ಸಂಚಾಲಕಿ ಭಾರತಿ ಚೌಧರಿ, ಅಭಿಷೇಕ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಗಣಿಯಾರ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಸಿದ್ಧಲಿಂಗ ಚೌಧರಿ ಮುಖ್ಯ ಅತಿಥಿಗಳಾಗಿದ್ದರು.
ಆಹಾರ ಉತ್ಸವದಲ್ಲಿ ತಿನಿಸುಗಳಾದ ಅವಲಕ್ಕಿ, ಚುರುಮುರಿ ಚೂಡಾ, ಬಾಸುಂದಿ, ಸೇಂಗಾ ಚಕಲಿ, ಚಾಕೊಲೇಟ್, ಸೂರಕುಂಬಾ, ಜಾಮೂನು ಸೇರಿದಂತೆ ಬಗೆ ಬಗೆಯ ತಿಂಡಿಗಳು ಗಮನ ಸೆಳೆದವು.
ಆಹಾರ ಉತ್ಸವದಲ್ಲಿ ಮಂದಾರ ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿ ಮಕ್ಕಳು ಆಹಾರ ಪದಾರ್ಥಗಳನ್ನು ಖರೀದಿಸಿದರು.

