ಬಸವ ಜನ್ಮಭೂಮಿ ಪ್ರತಿಷ್ಠಾನದ ೧೪ನೇ ವಾರ್ಷಿಕೋತ್ಸವ | ರಾಜ್ಯಮಟ್ಟದ ವಚನವೈಭವ |ಬಸವವಿಭೂಷಣ ಮತ್ತು ಬಸವಭೂಷಣ ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಸಾಧಾರಣವಾದುದನ್ನು ಸಾಧಿಸಿದ ವ್ಯಕ್ತಿಯ ಅರ್ಹತೆ ಮತ್ತು ಶ್ರೇಷ್ಠತೆಗಾಗಿ ಪ್ರಶಸ್ತಿ, ಗೌರವಾದರಗಳು ಅರಸಿ ಬಂದಾಗ ವ್ಯಕ್ತಿಯ ವಿಕಾಸ ಸಹಜ. ಅಂತಹ ಸಾಧಕರು ತಮ್ಮ ಮನಸ್ಸನ್ನು ನಿಭಾಯಿಸಿ ಗೆಲುವನ್ನು ಸಾಧಿಸಿದಾಗ ಆಗುವ ಆನಂದಕ್ಕೆ ಪಾರವೆ ಇರದು ಎಂದು ಬೆಂಗಳೂರಿನ ಸಾಹಿತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಹೇಳಿದರು.
ಇಲ್ಲಿನ ಬಸವ ಜನ್ಮಭೂಮಿ ಪ್ರತಿಷ್ಠಾನದ ವತಿಯಿಂದ ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ಡಿ. ೨೫ ರಂದು ಹಮ್ಮಿಕೊಂಡಿದ್ದ ಪ್ರತಿಷ್ಠಾನದ ೧೪ನೇ ವಾರ್ಷಿಕೋತ್ಸವ, ರಾಜ್ಯಮಟ್ಟದ ವಚನವೈಭವ ಹಾಗೂ ರಾಷ್ಟ್ರಮಟ್ಟದ ಬಸವವಿಭೂಷಣ ಮತ್ತು ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನೊಳು ಹೆಸರಾದ ವಿಜಯಪುರ ಜಿಲ್ಲೆ ವಚನ ಸಾಹಿತ್ಯದ ತವರು, ಬಸವೇಶ್ವರರ ಜನ್ಮಸ್ಥಳವಾದ ಬಸವನಬಾಗೇವಾಡಿ ಸಮಸ್ತ ಶರಣ ಸಂಕುಲದ ಅಸ್ಮಿತೆ. ಇಂತಹ ಪಾವನಭೂಮಿಗೆ ಬಂದಿರುವುದು ನನ್ನ ಪುಣ್ಯ ಎಂದರು.
ಮುಖ್ಯ ಅತಿಥಿ ಚಿತ್ರದುರ್ಗದ ಸಾಹಿತಿ ಶೈಲಾ ಜಯಕುಮಾರ ಮಾತನಾಡಿ ಹೃದಯಪೂರ್ವಕವಾಗಿ ಆರಂಭಿಸಿದ ಕೆಲಸಕ್ಕೆ ಪ್ರತಿಫಲ ಸಿಗುವಂತೆ, ನಮ್ಮ ಕರ್ತವ್ಯದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದಾಗ ಸಿಗುವ ಗೌರವ ಬೇರೆಲ್ಲೂ ಸಿಗಲಾರದು. ಸಂಸ್ಕಾರಯುತ ಜೀವನ ನಡೆಸಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಸಮಾಜಮುಖಿ ಕಾರ್ಯ ನಮ್ಮ ವ್ಯಕ್ತಿತ್ವವನ್ನು ವಿಕಸಿತಗೊಳಿಸುತ್ತದೆ ಎಂದರು.
ಮುಖ್ಯ ಅತಿಥಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿ ಕಲೆ, ಸಂಸ್ಕೃತಿ, ನಾಡು-ನುಡಿ ಸೇವೆಗಾಗಿ ಮಿಡಿಯುವ ಮನಸ್ಸುಗಳಲ್ಲಿ ಛಲವಿದ್ದು ಗುರಿ ಸೇರುವ ತುಡಿತ ಇರುತ್ತದೆ. ತಮ್ಮ ನಿಸ್ವಾರ್ಥ ಸೇವೆಯನ್ನು ಕನ್ನಡ ಮಾತೆಯ ಪದತಲದಲ್ಲಿ ಅರ್ಪಿಸಿದಾಗ ಸಾರ್ಥಕಭಾವ ಮೂಡುತ್ತದೆ ಎಂದರು.
ಪಾವನ ಸಾನಿಧ್ಯ ವಹಿಸಿದ್ದ ಕೊಣ್ಣೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಿಶ್ವವಂದ್ಯ ಬಸವೇಶ್ವರರ ಹೆಸರಿನ ಪ್ರಶಸ್ತಿ ಪಡೆದ ಸಾಧಕರ ಜನ್ಮ ಪಾವನ. ಪ್ರತಿಭೆಯನ್ನೆ ಮಾನದಂಡವಾಗಿಸಿಕೊಂಡು, ಅರ್ಹ ಪ್ರತಿಭೆಗಳಿಗೆ ಪ್ರಶಸ್ತಿ ನೀಡುವುದು ಶುದ್ಧ, ಸಿದ್ಧ ಸತ್ಕಾರ್ಯಗಳಲ್ಲೊಂದಾಗಿದೆ ಹಾಗಾಗಿ ತನ್ನ ಹಿರಿಮೆ ಗರಿಮೆಯನ್ನು ಬಾನೆತ್ತರಕ್ಕೆ ಹಾರಿಸಿದ ಕೀರ್ತಿಗೆ ಬಸವ ಜನ್ಮಭೂಮಿ ಪ್ರತಿಷ್ಠಾನ ಸಾಕ್ಷಿಯಾಗಿದೆ. ಅಗ್ರಹಾರ ಬಾಗೇವಾಡಿಯು ಬಸವಣ್ಣನವರ ಜನನದಿಂದ ಪುನೀತವಾದ ತಾಣವಾಗಿ ವಿಜೃಂಭಿಸಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ಪ್ರತಿಬಿಂಬವಾಗಿ ಪ್ರತಿಷ್ಠಾನ ಹೆಸರು ಮಾಡಿದೆ ಎಂದರು.
ಅತಿಥಿ ಯಾದಗಿರಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಯಪ್ರಕಾಶ ಎಚ್. ಸಾಹಿತಿ ಶಂಕರ ಬೈಚಬಾಳ ಅಧ್ಯಕ್ಷತೆ ವಹಿಸಿದ್ದ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ, ಪ್ರತಿಷ್ಠಾನದ ಸಂಚಾಲಕ ಸಾಹಿತಿ ಮುರುಗೇಶ ಸಂಗಮ ಮಾತನಾಡಿದರು.
ಯಾದಗಿರಿಯ ಜಯಪ್ರಕಾಶ ಎಚ್ (ಆಡಳಿತ) ಮಮದಾಪುರದ ಗುರುರಾಜ ಇಜೇರಿ (ಸರಕಾರಿ ಸೇವೆ) ವಿಜಯಪುರದ ಗಜಾನನ ಚೌಧರಿ (ಸಮಾಜಸೇವೆ) ಸುರೇಶ ಶೆಡಶ್ಯಾಳ (ಸಂಘಟನೆ) ಫಯಾಜಅಹ್ಮದ ಕಲಾದಗಿ (ಸಮಾಜಸೇವೆ) ಕೆರಿಮಾಸ್ತಿಹೊಳಿಯ ನಿಂಗೌಡಾ ಪಾಟೀಲ (ರಂಗಭೂಮಿ) ಕುಮಠೆಯ ನೀಲಾ ಇಂಗಳೆ (ಶಿಕ್ಷಣ) ಮುತ್ತಗಿಯ ಚಂದ್ರಕಾಂತ ಪತ್ತಾರ (ಚಿತ್ರಕಲೆ) ಕಲಾದಗಿಯ ಡಾ. ಸುನಂದಾ ನಾಯಿಕ (ಶಿಕ್ಷಣ) ಬಬಲೇಶ್ವರದ ಬಾಪುರಾಯ ಜಂಗಮಶೆಟ್ಟಿ (ಸಮಾಜಸೇವೆ) ಚೌಡಪ್ಪ ಬೂದಿಹಾಳ (ಕೃಷಿ) ಶಿಕಾರಿಪುರದ ಕಾಂಚನ ಕುಮಾರ (ಸಮಾಜಸೇವೆ) ಬಸವವಿಭೂಷಣ ರಾಷ್ಟ್ರ ಪ್ರಶಸ್ತಿ ಪಡೆದರು.
ದಾವಣಗೆರೆಯ ಸಾಲಿಗ್ರಾಮ ಗಣೇಶ ಶೆಣೈ (ಪತ್ರಿಕೋದ್ಯಮ) ಚಿತ್ತರಗಿಯ ಮಂಜುನಾಥ ಸಂಗನಾಳ (ರಂಗಭೂಮಿ) ವಿಜಯಪುರದ ಶಿವಕುಮಾರ ಬಾಗಿ (ಜೀವಮಾನ ಸಾಧನೆ) ಸುನಿಲ ಜೈನಾಪುರ (ಸಂಘಟನೆ) ಯಂಭತ್ನಾಳದ ಶಿವಾನಂದ ಮಂಗಾನವರ (ಕೃಷಿ) ಚಡಚಣದ ನಬಿಲಾಲ ಹರನಾಳ (ಶಿಕ್ಷಣ) ಹಾಸನದ ಎಚ್. ರಾಮಣ್ಣ (ರಂಗಭೂಮಿ) ಗಣಿಯ ರವಿ ಚಿನಗುಂಡೆ (ವಿಜ್ಞಾನ) ಬೆಂಗಳೂರಿನ ಮೌಲಾಲಿ ಬೋರಗಿ (ಸಾಹಿತ್ಯ) ಚಿತ್ರದುರ್ಗದ ಶೈಲಾ ಜಯಕುಮಾರ (ಸಾಹಿತ್ಯ) ಹತ್ತರಕಿಹಾಳದ ಭೀಮರಾಯಗೌಡ ಬಿರಾದಾರ (ರಂಗಭೂಮಿ) ಬಸವಭೂಷಣ ರಾಜ್ಯಪ್ರಶಸ್ತಿ ಪಡೆದರು.
ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ನಿರ್ದೇಶಕರಾಗಿ ಆಯ್ಕೆಯಾದ ನಾಗರಾಜ ಎಮ್ಮಿಯವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಮಲ್ಲಿಕಾರ್ಜುನ ತೊದಲಬಾಗಿ, ಸಾಹಿತಿ ತಾರಾಮತಿ ಪಾಟೀಲ ನಿರ್ವಹಿಸಿದರು. ಗೀತಾ ವೈದ್ಯ ಪ್ರಾರ್ಥಿಸಿದರು. ಪ್ರೊ.ಎ.ಎಚ್.ಕೊಳಮಲಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಅವಟಿ ನಿರೂಪಿಸಿದರು. ಸಾಹಿತಿ ಬಸನಗೌಡ ಬಿರಾದಾರ ವಂದಿಸಿದರು.