ಶ್ರೀ ಸಿದ್ಧೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದ ಧರ್ಮ ಧ್ವಜಾರೋಹಣ ಸಂದರ್ಭ ಯೋಗ ಗುರು ಸುಬ್ರಮಣ್ಯ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸಿದ್ಧೇಶ್ವರ ಅಪ್ಪಾವರು ಮಹಾತ್ಮರು, ಮಹಾತ್ಮರ ಶಕ್ತಿ, ಕುಗ್ಗುವಂತಹದಲ್ಲ, ನಾಶವಾಗುವಂತಹದ್ದಲ್ಲ ಅದು ಯಾವಾಗಲೂ ಬೆಳಗುವಂತಹದ್ದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿಗಳು ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಧರ್ಮ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಸಿದ್ಧೇಶ್ವರ ಅಪ್ಪಾವರ ನೀಡಿರುವ ಜ್ಞಾನ ಕೇವಲ ಜಿಲ್ಲೆ, ರಾಜ್ಯದಲ್ಲಿ ಬೆಳಗುವುದಿಲ್ಲ ಅದು ಜಗತ್ತಿನ ಬೇರೆ ದೇಶಗಳಲ್ಲಿಯೂ ಬೆಳಗುತ್ತದೆ. ಅಪ್ಪಾವರ ಜ್ಞಾನವಾಣಿಯನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಭಕ್ತರು ಅವರ ಯೂಟ್ಯೂಬ್ ಮೂಲಕ ಭಕ್ತಿಯಿಂದ ಆಲಿಸುತ್ತಾರೆ. ಈ ವರ್ಷ ಎಲ್ಲ ಭಕ್ತರು, ಪೂಜ್ಯರು, ಸಾಹಿತಿಗಳು ಈ ಗುರುನಮನ ಮಹೋತ್ಸವ ಆಚರಣೆಯ ಮೂಲಕ ನಮ್ಮ ಭಕ್ತಿ ಶ್ರದ್ಧೆಯನ್ನು ಅರ್ಪಿಸೋಣ ಎಂದರು.
ಸಿದ್ದೇಶ್ವರ ಅಪ್ಪಾವರು ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಮುಂದೆ ಪ್ರವಚನಗಳು ನಿಲ್ಲಬಹುದು, ಆದರೆ ಆರೋಗ್ಯದ ಕೀಲಿಕೈಯಾಗಿರುವ ಈ ಯೋಗ ಮಾತ್ರ ನಿರಂತರವಾಗಿ ನಡೆಯಲಿದೆ ಎಂದು ಹೇಳಿದ್ದರು. ಅವರ ಮಾತಿನಂತೆ ನಾವು ಡಿ.೧೫ ರಿಂದಲೇ ಯೋಗ ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜ್ಞಾನ ಯೋಗಾಶ್ರಮ ವಿಜಯಪುರ ನಗರದ ಜನರದ್ದು, ಇಲ್ಲಿ ಎಲ್ಲವನ್ನು ನೀವೇ ಮಾಡಬೇಕು. ಆಶ್ರಮಕ್ಕೆ ಬಂದ ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಸೇವೆಯನ್ನು ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಯೋಗ ಗುರು ಸುಬ್ರಮಣ್ಯ ಅವರು ಮಾತನಾಡಿ, ಸಹಸ್ರಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಭಾರತೀಯ ಪರಂಪರೆಯಲ್ಲಿ ಹಿಂದೆ ಇದ್ದಂತಹ ಋಷಿ ಮುನಿಗಳ ಪ್ರತಿಬಿಂಬವಾಗಿದ್ದರು. ಇಂದು ಅವರ ಗುರುನಮನ ಮಹೋತ್ಸವ ಪ್ರಾರಂಭವಾಗಿದ್ದು ಎಲ್ಲರೂ ಭಾಗವಹಿಸಿ ಅವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಯನ್ನು ತಮ್ಮ ಪ್ರವಚನಗಳ ಮೂಲಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯ ಮಾಡಿಕೊಟ್ಟಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಜಗತ್ತಿನ ಹಲವಾರು ದೇಶಗಳಲ್ಲಿ ಪ್ರವಚನ ನೀಡಿ ಸಮಾಜಕ್ಕೆ ಜ್ಞಾನವನ್ನು ಹಂಚಿದ್ದಾರೆ. ಅಪ್ಪಾವರನ್ನು ನೆನೆದರೆ ಸಾಕು ಅವರು ನಮ್ಮ ಬಳಿಯಲ್ಲಿಯೇ ಇರುತ್ತಾರೆ ಎಂದರು.
ಸಾಮಾಜಿಕ ಜಾಲತಾಣಗಳು, ಫೋಟೋ, ವಿಡಿಯೋಗಳು ಇಲ್ಲದ ಕಾಲದಲ್ಲಿ ಅಪ್ಪಾವರನ್ನು ಕಂಡಾಗ, ಇವರೇ ನಾ ಸಿದ್ಧೇಶ್ವರ ಸ್ವಾಮೀಜಿಗಳು ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಸಂದರ್ಭಗಳು ಇವೆ. ಕಾರಣ ಅಪ್ಪಾವರ ಸರಳತೆ. ಅವರು ನಮಗೆ ನೀಡಿರುವ ಜ್ಞಾನ, ಸಂಸ್ಕೃತಿ ಸೂರ್ಯ-ಚಂದ್ರರು ಇರುವ ವರೆಗೂ ಶಾಶ್ವತವಾಗಿ ಉಳಿಯಲಿದೆ. ಅಂತಹ ಯೋಗಿಗಳು ಇದ್ದಂತಹ ಜಾಗದಲ್ಲಿ ಕುಳಿತರೆ ಸಾಕು ಎಂತಹ ಪಾಪಿಯಾದರೂ, ದುರಾತ್ಮನಾದರೂ ಆತ ಪರಿವರ್ತನೆಯಾಗುತ್ತಾನೆ. ಇನ್ನೂ ಅವರ ವಾಣಿಯನ್ನು ಕೇಳಿದರೆ ಸಾಕು ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ವೇದಾಂತ ಕಠಿಣವಾಗಿರುತ್ತವೆ, ಯೋಗ ಅಥವಾ ನಮ್ಮ ವೇಧಗಳು ಕಠಿಣವಾಗಿವೆ ಎಂದು ಕೊಂಡಿದ್ದೇವೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅದನ್ನು ಅತ್ಯಂತ ಸರಳ ರೂಪದಲ್ಲಿ ಪ್ರವಚನ ನೀಡಿದ್ದಾರೆ. ನಾವು ಅವರ ಹೇಳಿಕೊಟ್ಟಿರುವ ಜ್ಞಾನವನ್ನು ಅರಿತು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಬಬಲೇಶ್ವರದ ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮಿಗಳು ತಮ್ಮ ಪಾದ ಸ್ಪರ್ಷದಿಂದ ವಿಜಯಪುರ ಜನರ ಜೀವನ ಪಾವನಗೊಳಿಸಿದ್ದಾರೆ. ನಡೆದಾಡುವ ದೇವರು, ಮಾತನಾಡುವ ದೇವರು, ಶತಮಾನದ ಸಂತ ಎಂದು ಕರೆಯಿಸಿಕೊಂಡಿರುವ ಅಪ್ಪಾವರ ಸೇವೆ ಮಾಡುವ ಭಾಗ್ಯ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಹರ್ಷಾನಂದ ಸ್ವಾಮೀಜಿ, ಶ್ರೀ ಶ್ರದ್ಧಾನಂದ ಸ್ವಾಮೀಜಿ, ಆಶ್ರಮದ ಸರ್ವ ಪೂಜ್ಯರು, ಭಕ್ತರು ಉಪಸ್ಥಿತರಿದ್ದರು.