ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿ. 21: 2026 ರೊಳಗೆ ಶಿಶುಮರಣ ಪ್ರಮಾಣವನ್ನು ಶೇ.5ಕ್ಕೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರ ವಿಭಾಗ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಅವರು ಮಾತನಾಡಿದರು.
ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಆರೋಗ್ಯ ರಕ್ಷಣೆ ಪ್ರಮುಖವಾಗಿದೆ. ಅದಕ್ಕಾಗಿ ಸರಕಾರ ಮತ್ತು ಆಸ್ಪತ್ರೆಗಳು ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ಗ್ರಾಮೀಣ ಭಾಗದಲ್ಲಿ ಮತ್ತು ಮನೆಗಳಲ್ಲಿ ಹೆರಿಗೆಯಾದ ಸಂದರ್ಭದಲ್ಲಿ ನವಜಾತ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಆ್ಯಂಬೂಲನ್ಸ್ ಮುಖಾಂತರ ಅವುಗಳನ್ನು ಸೂಕ್ತ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ 2026 ರೊಳಗೆ ಶಿಶುಮರಣದ ಪ್ರಮಾಣವನ್ನು 5ಕ್ಕೆ ಇಳಿಸಲು ಎಲ್ಲರೂ ಕೈಜೊಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆ ಉಚಿತ ಹೆರಿಗೆ, ತಾಯಿಯ ಎದೆಹಾಲು ಸೌಲಭ್ಯ ಒದಗಿಸುವ ಮೂಲಕ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ರಿಶಿ ಆನಂದ ಮಾತನಾಡಿ, ಅವಧಿ ಪೂರ್ಣ ಜನಿಸುವ ಶಿಶುಗಳನ್ನು ಸೂಕ್ತ ಚಿಕಿತ್ಸೆ ನೀಡುವ ಮೂಲಕ ರಕ್ಷಿಸಬೇಕು. ಅಲ್ಲದೇ, ಸಮುದಾಯ ಮಟ್ಟದಲ್ಲಿ ನವಜಾತ ಶಿಶುಗಳಿಗೆ ಅಗತ್ಯವಾಗಿರುವ TOPS(Temperature, Oxygen, Perfusion, Sugar) ಯೋಜನೆಯನ್ನು ಟಾಪ್- temperature- ಉಷ್ಣತೆ) ಟಾಪ್ಸ್ ಅಂದರೆ ದೇಹದ ಉಷ್ಣತೆ, ಆಮ್ಲಜನಕ, ರಕ್ತ ಸಂಚಾರ ಮತ್ತು ಸಕ್ಕರೆ ಪ್ರಮಾಣದ ಅಂಶಗಳನ್ನು ಪರಿಶೀಲಿಸಲು ಅಗತ್ಯವಾಗಿರುವ ಎಲ್ಲ ಸಹಕಾರ ನೀಡುವುದಜಾಗಿ ತಿಳಿಸಿದರು.
ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಡಾ. ಅರವಿಂದ ಪಾಟೀಲ್ ಮಾತನಾಡಿ, ಡೀಮ್ಡ್ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ ಅವರು ದೂರದೃಷ್ಠಿ ನಾಯಕರಾಗಿದ್ದು, ಅವರ ಸೂಚನೆಯಂತೆ ಜಿಲ್ಲೆಯ ನವಜಾತ ಶಿಶುಗಳಿಗೆ ಸಮರ್ಪಿತ ಆಂಬುಲನ್ಸ್ ಒದಗಿಸಲಾಗುವುದು. ಅಲ್ಲದೇ, ರ್ಯಾಮ್ ಕ್ಯಾನುಲಾ, ಎಂಬ್ರೇಸ್ ನಿಯೊನೇಟಲ್ ನೆಸ್ಟ್ ನಂಥ ಸುಸಜ್ಜಿತ ಸಾಧನಗಳನ್ನು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂಪತ್ ಗುಣಾರಿ, ಆರ್. ಸಿ. ಎಚ್. ಡಾ. ಕೇಶರಸಿಂಗ್ ಗುಂಡಬವಡಿ, ಬಿ.ಎಲ್.ಡಿ.ಇ ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಎಂ. ಪಾಟೀಲ, ಯೋಜನಾ ಸಂಯೋಜಕ ಡಾ. ಸಿದ್ಧು ಚರ್ಕಿ, ರಾಜ್ಯ ಐಎಪಿ ಅಧ್ಯಕ್ಷ ಡಾ. ಎಸ್.ವಿ. ಪಾಟೀಲ ಅವರು ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರ ಮತ್ತು ಚಿಕಿತ್ಸೆ ಕುರಿತು ಮಾತನಾಡಿದರು.
ಈ ಸಭೆಯಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕಮಕ್ಕಳ ತಜ್ಞೆ ಡಾ.ಪೂಜಾ ವಿ ನಿರೂಪಿಸಿದರು.