ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂದಿನ ದಿನಮಾನಗಳಲ್ಲಿ ಜಗತ್ತಿನ ಜನ ಸಾಮಾಜಿಕ ಜಾಲತಾಣದ ಮೊಬೈಲ್ ಯುಗದಲ್ಲಿ ಇಡೀ ದಿನ ತಮ್ಮನ್ನು ತಾವು ಮುಳುಗಿ ಪ್ರಾಚೀನ ಸಂಸ್ಕೃತಿ ಆಚಾರ- ವಿಚಾರ ಆಧ್ಯಾತ್ಮಿಕತೆಯನ್ನು ಮರೆಯುತ್ತಿರುವದು ತುಂಬಾ ಕಳವಳಕಾರಿ ಸಂಗತಿ ಎಂದು ಶಿಕ್ಷಕ, ಸಾಹಿತಿ, ದಶರಥ ಕೋರಿ ತಿಳಿಸಿದರು.
ಅವರು ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ಕಲಬುರ್ಗಿಯ ಶರಣಬಸಪ್ಪ ಅಪ್ಪನವರ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಋಷಿಗಳ ದೇಶ ಆಧ್ಯಾತ್ಮಿಕತೆಯನ್ನು ಜಗತ್ತಿಗೆ ಪ್ರಸರಣ ಮಾಡಿದ ಪುಣ್ಯಭೂಮಿ. ಜಗತ್ತಿನ ಜನ ಓದು ಬರಹ ಕಲಿಯುವ ಮುನ್ನ ಭಾರತ ಗುರುವಾಗಿತ್ತು. ಇಂದಿನ ಮುಂದುವರೆದ ರಾಷ್ಟ್ರಗಳು ಈಗ ಕಂಡು ಹಿಡಿಯುತ್ತಿರುವ ಅನೇಕ ಸಂಶೋಧನೆಗಳ ಪೈಕಿ ಶೇಕಡಾ ೯೦% ರಷ್ಟು ಸಂಶೋಧನೆಗಳನ್ನು ಭಾರತ ಸಾವಿರಾರು ವರ್ಷಗಳ ಹಿಂದೆಯೇ ಕಂಡು ಹಿಡಿದು ಸಂಶೋಧನಾ ಕ್ಷೇತ್ರದ ಭೀಷ್ಮ ಪಿತಾಮಹ ಎನಿಸಿಕೊಂಡಿದೆ ಎಂದರು.
ನ್ಯಾಯವಾದಿ, ಹಸಿರುಸೇನೆ ರೈತ ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ ಮಾತನಾಡಿ, ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿಯ ಕಡೆಗೆ ಒಲವು ತೋರದೆ ಮೋಬೈಲ್ ಗೀಳಿಗೆ ಬಿದ್ದು ಹಾಳಾಗುತ್ತಿದ್ದಾರೆ. ಅವರ ಮನಸನ್ನು ಹತೋಟಿಯಾಗಿಡಲು ಯೋಗ ಆಧ್ಯಾತ್ಮಿಕ ಚಿಂತನೆಗಳು ಬಹಳಷ್ಟು ಅವಶ್ಯಕವಾಗಿವೆ ಆಧ್ಯಾತಿಕ ಚಿಂತನೆಗಳಿಗೆ ನೀರೆರೆಯಬೇಕಾದರೆ ಅದಕ್ಕೆ ಮೂಲ ಬುನಾದಿ ಸತ್ಸಂಗದ ಅವಶ್ಯಕತೆಯಿದೆ. ಈ ಸತ್ಸಂಗದ ಕಾರ್ಯಕ್ರಮವನ್ನು ಪುರಾಣದ ಮೂಲಕ ಮಾರ್ಸನಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡು ಆಧ್ಯಾತ್ಮಿಕ ಕ್ರಾಂತಿಗೆ ಹೊಸ ಭಾಷೆ ಬರೆದಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯವೆಂದರು.
ತಾಳಿಕೋಟಿ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು ಕಲಬುರ್ಗಿಯ ಶರಣಬಸಪ್ಪ ಅಪ್ಪನವರ ಪುರಾಣ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಎಸ್.ಕೆ. ಲಿಂಗದಳ್ಳಿ, ಫಯಾಜಅಹ್ಮದ ಬಾಗವಾನ, ಶಂಕರ್ ಜಮಾದಾರ, ಗುರುಬಸಯ್ಯ ಹಿರೇಮಠ, ರಾವುತಪ್ಪಸಾಹುಕಾರ ವಾಲೀಕಾರ, ಮಾಳಪ್ಪ ಇಂಡಿ, ಜಟ್ಟೆಪ್ಪ ಜಮಾದಾರ, ವಿಠ್ಠಲ ಹಚಡದ, ಭೀಮಣ್ಣ ಮಸಳಿ, ಮಲ್ಲು ಮೇತ್ರಿ, ರಾಚಪ್ಪ ಬಗಲಿ, ಶಾಮ ಮಸಳಿ, ವಿಠ್ಠಲ ವಾಲೀಕಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಕ್ಷಕರಾದ ಭಾಷಾಸಾಬ ಮುಜಾವರ, ದ್ಯಾಮಗೊಂಡ ಜಮಾದಾರ ನಿರೂಪಿಸಿ, ವಂದಿಸಿದರು.