ಲೇಖನ
– ರೇಷ್ಮಾ ಮಲೆನಾಡ್
ಉದಯರಶ್ಮಿ ದಿನಪತ್ರಿಕೆ
“ಪರೋಪಕಾರಾರ್ಥಮಿದಂ ಶರೀರಂ” ಅಂದರೆ “ಈ ಮನುಷ್ಯ ದೇಹ ಇರುವುದೇ ಪರರಿಗೆ ಉಪಕಾರ ಅಂದರೆ ಒಳಿತನ್ನು ಮಾಡಲು” ಎಂದಿದ್ದಾರೆ ನಮ್ಮ ಹಿರಿಯರು.
“ವನ ಸುಮ” ಅಂದರೆ ಕಾಡಲ್ಲಿ ಬೆಳೆಯುವ ಸುವಾಸನಾಭರಿತ ಮಲ್ಲಿಗೆ ಹೂ ಬೆಳಿಗ್ಗೆ ಅರಳಿ ಎಲೆಮರೆಯಲ್ಲಿಯೇ ಇದ್ದೂ ಇತರರಿಗೆ ತನ್ನ ಪರಿಮಳವನ್ನು ಹಂಚಿ, ಸಂಜೆ ಬಾಡಿ ಉದುರಿ ಮಣ್ಣು ಸೇರಿ ಮಣ್ಣಾಗುತ್ತದೆ,, ಮಾನವ ಜನ್ಮ ನಶ್ವರ, ಯಾವಾಗ ಕಾಲನ ಕರೆ ಬರುತ್ತದೆಯೋ ಆಗ ಹೊರಟುಬಿಡಬೇಕು, ಅದು ನೂರು ವರ್ಷವಾದರೂ ಸರಿಯೇ ಇಂದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಹೋಗುವುದಾದರೂ ಸರಿಯೇ ನಮ್ಮ ಕೈಲಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ, ಇತರರಿಗೆ ಒಳಿತನ್ನು ಮಾಡಿಯೇ ಸಾಯಬೇಕು.
“ಯಾಕೆ ಒಳಿತು ಮಾಡಬೇಕು?” “ಯಾರಿಗೆ ಒಳಿತನ್ನು ಮಾಡಬೇಕು?
,”ಎಷ್ಟು ಒಳಿತು ಮಾಡಬೇಕು? “
“ಹೇಗೆ ಒಳಿತುಮಾಡಬೇಕು?” “ಒಳಿತಾವುದು ಕೆಡುಕಾವುದು?” “ನನ್ನಲ್ಲಿ ದುಡ್ಡಿಲ್ಲ, ನಾನೇ ಕಷ್ಟ ಪಡುತ್ತಿರುವೆ, ಬೇರೆಯವರಿಗೆ ನಾನೇನು ಒಳಿತು ಮಾಡಲಿ?” ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ.
೧) ನೊಂದವರಿಗೆ ನೆರವಾಗುವುದು, ಸಾಂತ್ವನ ನೀಡುವುದು, ಸಮಾಜಕ್ಕೆ, ಬಂಧುಬಾಂಧವರಿಗೆ ಸ್ನೇಹಿತರಿಗೆ, ದೇಶಕ್ಕೆ, ಜಗತ್ತಿಗೆ ಅಭಿವೃದ್ಧಿಯಾಗಲು, ಸಮಸ್ಯೆ ನೀಗಿಸಲು, ಸಂತಸ ನೀಡಲು, ನೋವುನಿವಾರಿಸಲು, ಕಣ್ಣೀರೊರೆಸಲು, ಬದುಕು ಕಟ್ಟಿಕೊಳ್ಳಲು ನಮ್ಮ ಕೈಲಾದ ಪ್ರಯತ್ನ ಮಾಡುವುದು ಇವೆಲ್ಲ ಒಳಿತು ಮಾಡುವುದು ಎನಿಸಿಕೊಳ್ಳುತ್ತದೆ.
೨) ಒಳಿತು ಮಾಡುವುದರಿಂದ ಒಳ್ಳೇದೇ ಆಗುತ್ತೆ. ಬದುಕು ಸಾರ್ಥಕ ಆಗುತ್ತೆ,ಧನ್ಯತಾ ಭಾವ ಮೂಡುತ್ತೆ. ನಾವು ಈ ಜನ್ಮದಲ್ಲಿ ಮಾಡುವ ಒಳ್ಳೆಯ ಕಾರ್ಯಗಳ ಪುಣ್ಯದಿಂದ ನಮ್ಮ ಕುಟುಂಬ, ಸಂತತಿ ದೇವರ ಕರುಣೆಗೆ ಪಾತ್ರವಾಗಿ ಸುಖದಿಂದಿರುತ್ತೆ, ಮತ್ತು ಮುಂದಿನ ಜನ್ಮದಲ್ಲಿ ನಮಗೆ ಉತ್ತಮ ಜೀವನ ಲಭಿಸುತ್ತೆ ಅನ್ನೊ ನಂಬಿಕೆಯನ್ನು ಧರ್ಮಗಳು ಸಾರುತ್ತವೆ.
ನಿಧಾನವಾದರೂ, ಮೊದಲು ಕೆಟ್ಟತನ ವಿಜೃಂಭಿಸಿದರೂ ಕೊನೆಗೆ ಒಳ್ಳೆಯತನವೇ ಗೆಲ್ಲುತ್ತೆ, ಒಳಿತಿಗೇ ಅಂತಿಮ ಜಯ.
ಒಳ್ಳೆಯ ಕಾರ್ಯಮಾಡುವವರಿಗೆ, ಒಳಿತು ಮಾಡುವವರಿಗೆ ಸಮಾಜದ ಎಲ್ಲ ವರ್ಗದ ಜನರ ಬೆಂಬಲ ಮತ್ತು ದೈವ ಕೃಪೆಯು ಇರುತ್ತದೆ.
ಒಳ್ಳೆಯತನ, ಒಳಿತು ಮಾಡುವುದು ಅಕ್ಷಯ ನಿಧಿ, ಅತೀ ದೊಡ್ಡ ಆಸ್ತಿ, ಆಪದ್ರಕ್ಷಕ ಕೂಡ ಆಗುತ್ತೆ. ಒಳಿತು ಮಾಡುವವರು ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಅನಾಯಾಸವಾಗಿ ಗಳಿಸುತ್ತಾರೆ.
೩) ಧನಬಲವಿಲ್ಲ, ಅಧಿಕಾರವಿಲ್ಲ, ಆಸ್ತಿ ಪಾಸ್ತಿ ಇಲ್ಲ, ದೇಹಬಲವಿಲ್ಲ, ನನ್ನದೇ ನನಗೆ ಹಾಸಿಹೊದ್ದು ಕೊಳ್ಳುವಷ್ಟಿದೆ, ನಾನು ಹೇಗೆ ಒಳಿತು ಮಾಡಲಿ? ಎನ್ನುವವರಿದ್ದಾರೆ.
“ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡುವೆ ಬಡವನಯ್ಯ” ಎಂದ ಶರಣರು ಎನ್ನ ದೇಹವೇ ದೇಗುಲ, ಎನ್ನ ಕಾಲೆ ಕಂಬ,ಎನ್ನ ಶಿರ ಹೊನ್ನಕಳಸವಯ್ಯ” ಎಂಬ ಉತ್ತರವನ್ನೂ ನೀಡುವುದರ ಮೂಲಕ ಒಳಿತು ಮಾಡಲು ಶ್ರೀಮಂತಿಕೆ, ಧನ ದೌಲತ್ತು ಬೇಕಿಲ್ಲ, ನಮ್ಮ ಕೈಲಿ ಸಾಧ್ಯವಾದ ಒಳಿತನ್ನೇ ಮಾಡಬಹುದು ಎಂದಿದ್ದಾರೆ. ಹೌದು ಹಳ್ಳಿಯ ಬಡ ಹೆಣ್ಣುಮಗಳಾದ ತಿಮ್ಮಕ್ಕ ತನ್ನನೋವು,ಆರ್ಥಿಕ ಅಸಹಾಯಕತೆಗಳನ್ನು ಮೀರಿ ನಿಂತು ಜನರಿಗೆ ತಂಪು ನೆರಳನ್ನು ನೀಡುವ ಗಿಡಗಳನ್ನು ನೆಟ್ಟು, ನೀರುಣಿಸಿ ಬೆಳೆಸಿ ಸಾಲು ಸಾಲು ಬೃಹತ್ ವೃಕ್ಷಗಳನ್ನಾಗಿಸಿ “ಸಾಲು ಮರದ ಮಾತೆ ತಿಮ್ಮಕ್ಕನಾಗಲಿಲ್ಲವೇ?”
ಅಲ್ಲಾರೋ ಸಿರಸಿಯ ಓರ್ವ ತಾಯಿ ತಾನೇ ಏಕಾಂಗಿಯಾಗಿ ಕಯ್ಯಾರೆ ಬಾವಿ ತೋಡಿ ನೀರಿಲ್ಲದವರಿಗೆ ನೀರು ಇತ್ತಳಲ್ಲವೇ?
“ಮಾತೆ ತೆರೇಸಾ” ಕುಟುಂಬದವರೇ ಅಸಹ್ಯಪಟ್ಟುಕೊಂಡು ಬೀದಿಗೆ ತಳ್ಳಿದ ಕುಷ್ಟ ರೋಗಿಗಳ ಕೀವು ಭರಿತ ಗಾಯಗಳನ್ನು ತೊಳೆದು ಪಟ್ಟಿ ಮಾಡಿ, ಅನ್ನವುಣಿಸಿ ನೆಲೆಯಿತ್ತು,ಔಷಧಿ ಬೇಡಿ ತಂದು ಸಂಗ್ರಹಿಸಿ ನೀಡಿ ಸೇವೆ ಸಲ್ಲಿಸಿ ನೊಂದವರ ಕಣ್ಣೀರು ಒರೆಸಲಿಲ್ಲವೇ?. ಅದಾರೋ “ಸಿಧೂತಾಯಿ ಸಪ್ಕಲ್” ಎಂಬ ಮಹಾತಾಯಿ ತಾನೇ ಭಿಕ್ಷೆ ಬೇಡಿ 1500 ಅನಾಥ ಬಡಮಕ್ಕಳನ್ನು ತಂದು ಸಾಕಿ, ಓದಿಸಿ, ಮದುವೆ ಮಾಡಿ ನೆಲೆ ನಿಲ್ಲಿಸಿದ, ವೇಶ್ಯಾಗೃಹಗಳಿಗೆ ಮಾರಲ್ಪಟ್ಟಿದ್ದ ಮುಗ್ಧ ಹೆಣ್ಣುಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಮಾನ ಪಡೆದುಕೊಳ್ಳುವಂತೆ ಆತ್ಮಬಲ ತುಂಬಿದ ಅಸ್ಸಾಂ ನ ಮಹಾ ತಾಯಿ “ಪಲ್ಲವಿ ಘೋಷ್ “ ಎಂಬ ಮಹಿಳೆಯ ಸತ್ಯ ಕಥೆ ರೋಮಾಂಚನ ಉಂಟು ಮಾಡತ್ತೆ.
ಒಳಿತು ಮಾಡುವ ಮನಸ್ಸು, ಹೃದಯವಿದ್ದರೆ, ಅತೀ ಸಣ್ಣದೆಂದು ಭಾವಿಸಲ್ಪಡುವ ಒಳ್ಳೆಯ ಕಾರ್ಯ ಕೂಡ ಮಾಡಬಹುದು. ಒಳ್ಳೆಯದು ಮಾಡುವುದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಒಳಿತನ್ನು ಮಾಡಬಹುದು. ಹಸಿದ ಬೀದಿ ನಾಯಿಗಳಿಗೆ ಊಟ ನೀಡುವುದು, ಬಾಯಾರಿದ ದನಕರುಗಳಿಗೆ ನೀರು ಕೊಡುವುದು, ಕೊನೆಗೆ ಏನೂ ಮಾಡದಿದ್ದರೂ ಯಾರಿಗೂ ಕೆಡುಕು ಮಾಡದೆ ಸುಮ್ಮನಿರುವುದು ಕೂಡ ಒಳಿತೇ.
೪) ಒಳಿತುಮಾಡಬೇಕು, ಆದರೆ ಅನರ್ಹರು, ಅಯೋಗ್ಯರಿಗಲ್ಲ, ಅತೀ ಒಳ್ಳೆಯತನ ಮಾಡುವವರಿಗೆ ಕೇಡಾಗಿಬಿಡುವುದುಂಟು, ಹಾಲೆರೆದ ಕೈಗೆ ಕಚ್ಚುವ ಹಾವುಗಳಿರುತ್ತವೆ. “ಎಲ್ಲರಿಗೂ ತೋರಿಸಲು ಹೋಗಿ ಒಳ್ಳೆತನ,ಕಳೆದುಕೊಳ್ಳಬೇಡ ನಿನ್ನತನ” “ಅನ್ನೊ ಮಾತು ಪ್ರಚಲಿತವಿದೆ.
೫) ಹೆತ್ತವರು ಒಳಿತು ಮಾಡುವ ಗುಣ ಹೊಂದಿದ್ದರೆ ಅವರ ಮಕ್ಕಳಿಗೂ ಆ ಗುಣ ಬರುತ್ತೆ. ಪೋಷಕರು ಅಪ್ಪಿ ತಪ್ಪಿಯೂ ಕೆಡುಕು ಮಾಡುವ ಕಾರ್ಯ ಎಸಗಬಾರದು. ಒಳಿತು ಮಾಡುವುದರಲ್ಲಿ ಪೋಷಕರು ಮಕ್ಕಳಿಗೆ ಆದರ್ಶ, ದಾರಿದೀಪವಾಗ ಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಲ್ಲಿ ಒಳಿತು ಮಾಡಬೇಕು ಅನ್ನೊ ಪ್ರಜ್ಞೆಯನ್ನು ಬೆಳೆಸಲು ಶಿಕ್ಷಕರು ಸತತಪ್ರಯತ್ನ, ನಾವೀನ್ಯ, ಪರಿಣಾಮಕಾರಿ ಪ್ರಯತ್ನ ಮಾಡಬೇಕು. ನನ್ನ ಶಾಲೆಯಲ್ಲಿ ಮಕ್ಕಳಿಗೆ ದಿನಕ್ಕೊಂದು ಒಳ್ಳೆಯ ಕೆಲಸ ಅನ್ನು ಮಾಡಿದ ಬಗ್ಗೆ ಬರೆಯಲು ತಿಳಿಸಿದ್ದೆವು. ಅದನ್ನು ಪ್ರಾರ್ಥನಾ ಸಭೆಯಲ್ಲಿ ಓದಿ ಇತರರಿಗೆ ತಿಳಿಸುತ್ತಿದ್ದರು. ಅಲ್ಲದೆ ಸಾಮೂಹಿಕವಾಗಿನಾಡಗೀತೆ, ರಾಷ್ಟ್ರಗೀತೆ ಹಾಡುವುದರ ಜೊತೆಗೆ “ದೇವನು ಕೊಟ್ಟನು ಕರಗಳನೆರಡು ಒಳ್ಳೆಯ ಕಾರ್ಯವ ಮಾಡೆಂದು, ದೇವನು ಕೊಟ್ಟನು ಕಣ್ಣುಗಳೆರಡು, ಒಳ್ಳೆಯ ನೋಟವ ನೋಡೆಂದು, ದೇವನು ಕೊಟ್ಟನು ಕಿವಿಗಳನೆರಡು ಒಳ್ಳೆಯ ಮಾತನು ಕೇಳೆಂದು,.. ಎಂಬ ಸುಧಾ ಪತ್ರಿಕೆಯ ಮಕ್ಕಳ ಪುಟದಲ್ಲಿ ಪ್ರಕಟವಾಗಿದ್ದ (ಬರೆದವರಾರು ಎಂಬ ನೆನಪಿಲ್ಲ) ಪದ್ಯವೊಂದನ್ನು ಶಾಲಾ ಗೀತೆಯನ್ನಾಗಿ ಹಾಡುವಂತೆ ನಿಯಮಿಸಿದ್ದೆವು ಮಕ್ಕಳಲ್ಲಿ ಬಾಲ್ಯದಿಂದಲೇ ಒಳಿತು ಮಾಡಬೇಕು, ಈ ದೇಹ ದೇವರು ಕೊಟ್ಟಿರುವುದು ಒಳಿತು ಮಾಡಲು ಎಂಬ ಮನೋಭಾವ ಬಿತ್ತಿ ಬೆಳೆಸಲು ಕೈಗೊಂಡಿದ್ದ ಕ್ರಮಗಳಿವು.
ಮನುಷ್ಯ ಎಷ್ಟು ವರ್ಷ ಬಾಳಿದ ಅನ್ನೋದಕ್ಕಿಂತ ಹೇಗೆ ಒಳಿತು ಮಾಡುತ್ತಾ ಬದುಕಿದ ಅನ್ನೋದು ಬಹಳ ಮುಖ್ಯ..
ಹಣ ಆಸ್ತಿ ಮಕ್ಕಳು ಮೊಮ್ಮಕ್ಕಳು ಕೂತು ತಿನ್ನುವಷ್ಟು ಮಾಡಿದರೂ ಇನ್ನಷ್ಟು ಹಣ ಗಳಿಸಬೇಕು ಎಂಬ ದುರಾಸೆಯಿಂದ ಗಳಿಸುತ್ತಾ ಸಂಗ್ರಹಿಸುತ್ತಾ ಹೋಗುವವರು “ಹಣ ಸಗಣಿಯಿದ್ದಂತೆ,ಒಂದೆಡೆ ಒಟ್ಟು ಹಾಕಿದ್ದರೆ ಅದು ಕೊಳೆತು ದುರ್ವಾಸನೆ ಬರುತ್ತೆ,ಅದೇ ಅದನ್ನು ಹೊಲದಲ್ಲಿ ಹರಡಿದರೆ ಗೊಬ್ಬರವಾಗಿ ಸಮೃದ್ಧ ಬೆಳೆ ಬೆಳೆಯುತ್ತೆ” ಎಂಬುದು ನೆನಪಿರಬೇಕು.ಗಳಿಸಿದ್ದರಲ್ಲಿ ಒಂದಷ್ಟು ಒಳಿತು ಮಾಡಲು, ಒಳ್ಳೆಯ ಕೆಲಸ ಮಾಡಲು ವ್ಯಯಿಸಬೇಕು, ಕ್ಷಣಿಕ ವಾದ ಈ ದೇಹ ಮಣ್ಣಲ್ಲಿ ಮಣ್ಣಾಗುವುದರೊಳಗೆ ಸಾಧ್ಯವಾದಷ್ಟೂ ಒಳಿತು ಮಾಡಿ ನಮ್ಮ ಜನ್ಮದ ಋಣವನ್ನು ಸ್ವಲ್ಪವಾದರೂ ತೀರಿಸಬೇಕು.
“ಮನುಜನ್ ನರಳುತಿರೆ
ಮನುಜನ್ ಸಂತವಿಸೆ,
ಮನುಜನ್ ದೇವನ್ ತಾನಾದಪನ್,
ಇಲ್ಲದಿರೆ ಮನುಜನ್ ದನುಜನ್”.
ಎಂದಿದ್ದಾರೆ “ಮೇರುಕವಿ ಕುವೆಂಪು”ರವರು.ಮನುಜರಾಗಿ ಹುಟ್ಟಿರುವ ನಾವು ಬದುಕಿರುವಷ್ಟು ಕಾಲ ಕೈಲಾದ,ನಮ್ಮ ಮಿತಿಯಲ್ಲಿ ಸಾಧ್ಯವಾದಷ್ಟು ಒಳಿತು ಮಾಡೋಣ,ದನುಜರಾಗಿ ಸತ್ತಂತೆ ಬದುಕಿ ಸಾಯುವುದು ಸಲ್ಲದು ಅಲ್ಲವೇ.