ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬ್ರಿಟಿಷರ ಕಾಲದಿಂದಲೂ ಅತೀ ಹಿಂದುಳಿದಿರುವ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಕೇಂದ್ರ ಸರ್ಕಾರ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ರಚಿಸಿ ರೈಲು ಓಡಿಸಬೇಕು ಎಂದು ಜಿಪಂ. ಮಾಜಿ ಸದಸ್ಯ ಶಿವಾನಂದ ಅವಟಿ ಹೇಳಿದರು.
ಆಲಮಟ್ಟಿಯ ರವಿವಾರ ಸಂತೆ ಮಾರುಕಟ್ಟೆ ಪ್ರದೇಶದ ಬಳಿಯಿರುವ ಈಶ್ವರಲಿಂಗ ದೇವಸ್ಥಾನದಲ್ಲಿ ಆಲಮಟ್ಟಿ ರೈಲು ಅಭಿವೃದ್ಧಿ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳ ರಚನಾ ಸಭೆಯಲ್ಲಿ ಮಾತನಾಡಿದರು.
ಇನ್ನು ವಿಜಯಪುರದಿಂದ ನೇರವಾಗಿ ಬೆಂಗಳೂರಿಗೆ ತಲುಪಲು ಆಲಮಟ್ಟಿ-ಚಿತ್ರದುರ್ಗ ರೈಲು ಮಾರ್ಗವೂ ಅವಶ್ಯವಾಗಿದ್ದು, ಈ ಕುರಿತು ಕೇಂದ್ರ ಸರ್ಕಾರವು ಎರಡೂ ರೈಲ್ವೆ ಮಾರ್ಗಕ್ಕೆ ಮೀಕ್ಷೆಯನ್ನೂ ನಡೆಸಿದ್ದು, ಕೂಡಲೇ ಕೇಂದ್ರ ಸರ್ಕಾರ ಎರಡೂ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಬೇಕು ಎಂದರು.
ಮಾಧ್ಯಮ ಸಲಹೆಗಾರರನ್ನಾಗಿ ನಿಡಗುಂದಿ ತಾಲ್ಲೂಕಿನ ಎಲ್ಲ ಪತ್ರಕರ್ತರನ್ನು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ
ಆಲಮಟ್ಟಿ ರೈಲು ಅಭಿವೃದ್ಧಿ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಆಲಮಟ್ಟಿಯ ಅನ್ನದಾನೇಶ್ವರ ಪುರವರಹಿರೇಮಠದ ಪೀಠಾಧಿಪತಿ ರುದ್ರಮುನಿಸ್ವಾಮೀಜಿ, ಅಧ್ಯಕ್ಷರಾಗಿ ಭರತರಾಜ ದೇಸಾಯಿ(ಗಣಿ), ಉಪಾಧ್ಯಕ್ಷರಾಗಿ ಗ್ರಾಪಂ. ಮಾಜಿ ಉಪಾಧ್ಯಕ್ಷ ಎನ್.ಎ.ಪಾಟೀಲ, ತಾಪಂ.ಮಾಜಿಸದಸ್ಯ ಮಲ್ಲು ರಾಠೋಡ, ಎಂ.ಡಿ.ಬಾಗಲಕೋಟ, ಜಿ.ಪಂ.ಮಾಜಿ ಸದಸ್ಯ ಎಸ್.ಎಂ.ಅವಟಿ, ಪ್ರಭಯ್ಯಾ ಹಿರೇಮಠ, ಗ್ರಾಪಂ. ಅಧ್ಯಕ್ಷೆ ಶ್ರೀಮತಿ ಕವಿತಾ ಬಡಿಗೇರ, ಪ್ರಧಾನಕಾರ್ಯದರ್ಶಿಗಳಾಗಿ ರಮೇಶ ರೇಶ್ಮಿ, ಬಿ.ಎಚ್.ಗಣಿ, ಬಿ.ಕೆ.ಬಾಗವಾನ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ ಆಲಮಟ್ಟಿ, ಬಸವರಾಜ ಹೆರಕಲ್ಲ ಹಾಗೂ ಕಾರ್ಯದರ್ಶಿಗಳಾಗಿ ಶ್ರೀಧರ ಬಿದರಿ, ಮಹಾಂತೆಶ ಹಿರೇಮಠ ಕಾನೂನು ಸಲಹೆಗಾರರಾಗಿ ಬಿ.ಎಂ.ಸಜ್ಜನ್ ಅವರುಗಳನ್ನು ಆಯ್ಕೆಗೊಳಿಸಲಾಗಿದೆ.
ಸದಸ್ಯರುಗಳಾಗಿ ನಿಡಗುಂದಿ ತಾಲ್ಲೂಕಿನ ಎಲ್ಲ ಗ್ರಾಮಗಳ ಹಿರಿಯರು ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಕೆಲ ಗ್ರಾಮಗಳ ಮುಖಂಡರುಗಳನ್ನು ನೇಮಕಗೊಳಿಸಲಾಯಿತು.