ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ವಿಶೇಷ ಉಪನ್ಯಾಸ – 271
ಉದಯರಶ್ಮಿ ದಿನಪತ್ರಿಕೆ
ವರದಿ: ಸುಧಾ ಪಾಟೀಲ
ಬೆಳಗಾವಿ: ಬೆಂಗಳೂರಿನ ನಿರ್ಮಾಣದಲ್ಲಿ ಎಲೆ ಮಲ್ಲಪ್ಪ ಶೆಟ್ಟರು, ಗುಬ್ಬಿ ತೋಟದಪ್ಪನವರ ಜೊತೆಗೆ ಕೆ. ಪಿ. ಪುಟ್ಟಣ್ಣ ಶೆಟ್ಟರದು ಸಹಿತ ಸಾಹಿತ್ತಿಕ, ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಮಹತ್ತರವಾದ ಯೋಗದಾನವಿದೆ ಎಂದು ಹೇಳುತ್ತಾ ಡಾ. ಶಶಿಕಾಂತ ಪಟ್ಟಣ ಸರ್ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.
1856ರ ಏಪ್ರಿಲ್ 29ರಂದು ಬೆಂಗಳೂರು ಬಳಿಯ ಕೃಷ್ಣರಾಜಪುರದಲ್ಲಿ ಎಲ್ಲಪ್ಪಶೆಟ್ಟಿ ಮತ್ತು ಎಲ್ಲಮ್ಮ ದಂಪತಿಗಳ ಸುಪುತ್ರರಾಗಿ ಲಿಂಗಾಯತ ಕುಟುಂಬದಲ್ಲಿ ಜನಿಸಿದರು. ಇವರ ಪ್ರೌಢಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿಯೂ ಕಾಲೇಜಿನ ವಿದ್ಯಾಭ್ಯಾಸ ಸೆಂಟ್ರಲ್ ಕಾಲೇಜಿನಲ್ಲಿಯೂ ನಡೆಯಿತು.ಕೆ ಪಿ ಪುಟ್ಟಣ್ಣ ಶೆಟ್ಟಿಯವರು 1875ರಲ್ಲಿ ಮೈಸೂರು ಸರ್ಕಾರದಲ್ಲಿ ಕರಣಿಕರಾಗಿ, 1884ರಲ್ಲಿ ಮೈಸೂರು ರಾಜ್ಯ ರೈಲ್ವೆ ಇಲಾಖೆಯಲ್ಲಿ ಟ್ರಾಫಿಕ್ ಮ್ಯಾನೇಜರ್ ಆಗಿ, ನಂತರ 1886 ರಲ್ಲಿ ಸಹಾಯಕ ಕಮಿಷನರ್ ಆಗಿ . ಇದರ ಜೊತೆಗೆ ಜಿಲ್ಲಾಧಿಕಾರಿಗಳಾಗಿ ಸಹ ಹೆಸರು ಗಳಿಸಿದರು. 1906ರಲ್ಲಿ ಅವರು ಬೆಂಗಳೂರು ಸಿಟಿ ಕೌನ್ಸಿಲ್ ಸದಸ್ಯರಾದರು.1913ರಲ್ಲಿ ಪುಟ್ಟಣ್ಣ ಶೆಟ್ಟಿ ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿದರು ಎಂದು ಅವರ ಬಗೆಗೆ ವಿವರಿಸಿದರು.
ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ” ರಾಜಸಭಾಭೂಷಣ” ಎಂಬ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ” ದಿವಾನ್ ಬಹದ್ದೂರ್ ” ಎಂಬ ಘನಪ್ರಶಸ್ತಿಯನ್ನು ಗಳಿಸಿ ಕೊಂಡರು.
1912ರಲ್ಲಿ ನಿವೃತ್ತರಾದ ಪುಟ್ಟಣ್ಣ ಶೆಟ್ಟಿ ಅವರು ನಂತರ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ದಿನಗಳಲ್ಲಿ ಪ್ರಾರಂಭವಾದ ಬಹುತೇಕ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆ ಮತ್ತು ಮಾರ್ಗದರ್ಶನದಲ್ಲಿ ಪುಟ್ಟಣ್ಣ ಶೆಟ್ಟಿಯವರ ಪ್ರಮುಖ ಪಾತ್ರವಿದೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷತೆ, ಮೈಸೂರು ಬ್ಯಾಂಕಿನ ಅಧ್ಯಕ್ಷತೆ ಬೆಂಗಳೂರು ಪೌರತ್ವ ಕಾರ್ಯಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಇದಲ್ಲದೆ ರೈಲ್ವೆ ಮಂಡಳಿ ಬೆಂಗಳೂರು ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕ್ ಬೆಂಗಳೂರು ಪ್ರೆಸ್, ಮೈಸೂರು ಕೃಷ್ಣರಾಜೇಂದ್ರ ಮಿಲ್ಸ್, ಕನ್ನಡ ಸಾಹಿತ್ಯ ಪರಿಷತ್, ಮುoತಾದ ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಸಹ ಅವರು ಅಪಾರವಾಗಿ ಶ್ರಮಿಸಿದರು. ಮೈಸೂರು ಲಿಂಗಾಯತ ಅಭಿವೃದ್ಧಿ ಸಂಸ್ಥೆಗಳಲ್ಲಿ ಸಹ ಅವರು ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದರು. ಗುಬ್ಬಿ ತೋಟದಪ್ಪನವರ ಧರ್ಮನಿಧಿ ಅರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರ್ ಧರ್ಮನಿಧಿ ಮುಂತಾದ ಅನೇಕ ಧರ್ಮ ಸಂಸ್ಥೆಗಳಿಗೆ ಅವರು ನ್ಯಾಯಪಾಲಕರಾಗಿದ್ದರು ಎಂದು ಅವರ ಕಾರ್ಯಕ್ಷೇತ್ರವನ್ನು ನಮ್ಮೊಂದಿಗೆ ಹಂಚಿಕೊಂಡರು.
1913 ರಲ್ಲಿ ತಾವು ಬೆಂಗಳೂರು ನಗರ ಸಭೆಯ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೊಸ ಮಾರುಕಟ್ಟೆಗಳು, ಕೈಗಾರಿಕಾ ಪ್ರದೇಶಗಳು, ಬಡ ಜನತೆಗಾಗಿ ವಸತಿ ಸೌಕರ್ಯ, ಒಳಚರಂಡಿ ವ್ಯವಸ್ಥೆ, ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತ ಮಾಡಿದರು. 1918 ರಲ್ಲಿ ಸಾoಕ್ರಾಮಿಕ ರೋಗ ಹಾಗೂ ತೀವ್ರ ಆಹಾರ ಕೊರತೆ ಉಂಟಾದಾಗ ಇವರು ಕಾರ್ಯ ನಿರ್ವಹಿಸಿದ ರೀತಿ ಅನುಕರಣೀ ಯವಾದದ್ದು ಎಂಬ ಶ್ಲಾಘನೆ ಎಲ್ಲೆಲ್ಲೂ ಮಾರ್ದನಿಸಿತು ಎನ್ನುವುದನ್ನು ತಿಳಿಸಿದರು.
ಬ್ರಿಟಿಷ್ ಸರ್ಕಾರ ಇವರಿಗೆ ” ಸರ್ ” ಬಿರುದನ್ನು ನೀಡಿತು. 1917 ರಲ್ಲಿ ” ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ಮತ್ತು ಗೋಲ್ಡ್ ಕ್ವೆಸರ್ ಪದಕಗಳನ್ನು ನೀಡಲಾಯಿತು.1936 ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.
1936 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಾ ಎಂಬ ಗೌರವ ಸನ್ಮಾನವೂ ದೊರಕಿದೆ ಎನ್ನುತ್ತಾ ಇನ್ನಷ್ಟು ಅವರಿಗೆ ಸಂದ ಗೌರವ ಸನ್ಮಾನಗಳನ್ನು ನಮ್ಮೊಂದಿಗೆ ಪ್ರಸ್ತುತಪಡಿಸಿದರು.
ಮುನ್ಸಿಪಲ್ ಅಧ್ಯಕ್ಷರಾಗಿದ್ದಾಗ ಲಾಲ್ ಬಾಗ ಅಭಿವೃದ್ಧಿ ಪಡಿಸಿದ್ದು, 1933ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ನೇತೃತ್ವದಲ್ಲಿ ಟೌನ್ ಹಾಲ್ ಗೆ ಫೌಂಡೇಶನ್ ಹಾಕಿದ್ದು, 1935 ರಲ್ಲಿ ಪುಟ್ಟಣ್ಣ ಶೆಟ್ಟಿ ಅವರ ಹೆಸರಿನಲ್ಲಿ ಅದು ಉದ್ಘಾಟನೆಗೊಂಡಿದ್ದನ್ನು, ಸ್ಟೇಟ್ ಫೈನಾನ್ಸ್ ಅಡ್ವೈಸರ್ ಆಗಿ ರಾಜರಿಗೆ ಸಲಹೆ ನೀಡಿದ್ದು ಹೀಗೆ ಅವರ ಸಾಧನೆಗಳನ್ನು ಹೆಮ್ಮೆಯಿಂದ ತಿಳಿಯಪಡಿಸಿದರು.
ಡಾ. ಸರಸ್ವತಿ ಪಾಟೀಲ ಮೇಡಂ ತಮ್ಮ ವಿದ್ವತ್ ಪೂರ್ಣ ಮಾತುಗಳಿಂದ ಮಾರ್ಗದರ್ಶನ ಮಾಡಿದರು.