ಉದಯರಶ್ಮಿ ದಿನಪತ್ರಿಕೆ
ವರದಾನಿ ಲಕ್ಕಮ್ಮದೇವಿ ಪ್ರಧಾನ ವೇದಿಕೆ.
ಇವಣಗಿ(ಬಸವನಬಾಗೇವಾಡಿ): ನಾಡಿನಲ್ಲಿ ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷಾಭಿಮಾನ ಹೆಚ್ಚಲು ಪೂರಕವಾಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಅನ್ನದ ಹಾಗೂ ಆಡಳಿತ ಭಾಷೆಯಾಗಿರುವದರಿಂದ ನಾವೆಲ್ಲರೂ ಕನ್ನಡ ಕಟ್ಟಾಳುಗಳಾಗಬೇಕು. ೨೦೧೨ ರಲ್ಲಿ ವಿಜಯಪುರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅಭಿಮಾನದಿಂದ ಭಾಗವಹಿಸುವ ಮೂಲಕ ಕನ್ನಡಮ್ಮನ ಸೇವೆ ಮಾಡಿದ್ದನ್ನು ಸ್ಮರಿಸಿಕೊಂಡರು. ಇವಣಗಿ ಗ್ರಾಮದಲ್ಲಿ ಜರುಗಿದ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಗ್ರಾಮಸ್ಥರು ಸೇರಿದಂತೆ ಕಸಾಪ ಪದಾಧಿಕಾರಿಗಳು, ಎಲ್ಲ ಇಲಾಖೆಯ ನೌಕರ ಬಾಂಧವರು,ಶಿಕ್ಷಕರು ಹಗಲಿರುಳು ಶ್ರಮಿಸಿದ್ದು ಶ್ಲಾಘನೀಯ ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ನಿಂಗಪ್ಪ ಬೊಮ್ಮನಹಳ್ಳಿ ಮಾತನಾಡಿದರು. ವೇದಿಕೆಯಲ್ಲಿ ರಾಜೇಸಾಬ ಶಿವನಗುತ್ತಿ, ನಿಂಗಪ್ಪ ಬಾಗೇವಾಡಿ, ಯಲ್ಲಪ್ಪ ಇಟಗಿ, ಯಲಗೂರದಪ್ಪ ಸುಭಾನಪ್ಪರ,ದ್ಯಾವಪ್ಪ ರೂಡಗಿ ಇತರರು ಇದ್ದರು.
ಬಿ.ವ್ಹಿ.ಚಕ್ರಮನಿ ಸ್ವಾಗತಿಸಿದರು. ಶಾಂತಾ ಚೌರಿ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು. ನಂತರ ವಿವಿಧ ಕಲಾ ತಂಡಗಳಿಂದ ಜರುಗಿದ ಸಾಂಸ್ಕ್ರತಿಕ ಕಾರ್ಯಕ್ರಮಗಳು ತಡರಾತ್ರಿಯವರೆಗೂ ಜನಮನಸೂರೆಗೊಂಡವು.
ತಾಲೂಕು ಸಮ್ಮೇಳನದ ನಿರ್ಣಯಗಳು
ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಜೆ ಜರುಗಿದ ಬಹಿರಂಗ ಅಧಿವೇಶನದಲ್ಲಿ ಐದು ನಿರ್ಣಯಗಳನ್ನು ತೆಗೆದುಕೊಂಡಿತ್ತು.
ಸಮ್ಮೇಳನದ ನಿರ್ಣಯಗಳು
೧. ಪ್ರತಿಯೊಂದು ಶಾಲಾ-ಕಾಲೇಜುಗಳ ಮುಂದೆ ನಾಡದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡುವುದು.
೨. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನ ಪೂರ್ಣಗೊಳಿಸುವುದು.
೩. ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದು.
೪.ತಾಲೂಕಿಗೆ ತಾಂತ್ರಿಕ ಮಹಾವಿದ್ಯಾಲಯದ ವ್ಯವಸ್ಥೆ ಕಲ್ಪಿಸುವುದು.
೫. ಬಸವನಾಡಿಗೆ ಆಗಮಿಸುವ ಯಾತ್ರಿಕರಿಗೆ ಭವ್ಯ ಯಾತ್ರಿ ನಿವಾಸ ನಿರ್ಮಾಣ ಮಾಡುವದು.
ಸಮ್ಮೇಳನದ ನಿರ್ಣಯಗಳನ್ನು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವು ಮಡಿಕೇಶ್ವರ ಮಂಡಿಸಿದರು. ತಾಲೂಕು ಕಸಾಪ ದತ್ತಿ ಸಂಚಾಲಕ ಬಿ.ವ್ಹಿ.ಚಕ್ರಮನಿ ಅನುಮೋದಿಸಿದರು. ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಿದ್ದ ತಾಲೂಕು ಕಸಾಪ ಪದಾಧಿಕಾರಿಗಳು ಕೈಎತ್ತುವ ಮೂಲಕ ಅಂಗೀಕರಿಸಿದರು.