ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಕನ್ನಡ ಅಕ್ಷರದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕನ್ನಡ ನಮ್ಮೆಲ್ಲರ ಅನ್ನದ ಭಾಷೆಯಾಗಿರುವದರಿಂದಾಗಿ ಕನ್ನಡ ಜಾತ್ರೆಯನ್ನು ವೈವಿಧ್ಯಮಯವಾಗಿ ಆಚರಿಸುವ ಮೂಲಕ ಮಾದರಿ ಸಮ್ಮೇಳನಕ್ಕೆ ಎಲ್ಲರೂ ಸಾಕ್ಷಿಯಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಇವಣಗಿ ಗ್ರಾಮವು ಭಕ್ತಿ, ಸಹಕಾರಕ್ಕೆ ಹೆಸರುವಾಸಿಯಾಗಿದೆ. ನಾಡು-ನುಡಿ-ನೆಲ-ಜಲ-ಸಂಸ್ಕ್ರತಿ-ಪರಂಪರೆಯಿಂದ ನಮ್ಮ ನಾಡು ಸಂಪದ್ಭರಿತವಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ವಿದ್ವಾಂಸರಿಂದ ವಿಶೇಷ ಉಪನ್ಯಾಸ ಗೋಷ್ಠಿ ಹಮ್ಮಿಕೊಳ್ಳಲಾಗುವದು. ನಾಡಿನ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವದು. ಈ ಸಮ್ಮೇಳನಕ್ಕೆ ಎಲ್ಲ ಸಾಹಿತಿಗಳು, ಕನ್ನಡಾಭಿಮಾನಿಗಳು,ಜನರು ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಶಿವಯ್ಯ ಹಿರೇಮಠ, ಶಿವಾನಂದ ಮಂಗಾನವರ, ಲತಾ ಬಿರಾದಾರ, ಬಸವರಾಜ ಕಳ್ಳಿಗುಡ್ಡ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ಲಾಯಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಬಸವರಾಜ ಸೋಮಪುರ, ರಾಮಣ್ಣ ಪೂಜಾರಿ, ಎಸ್.ಎಲ್.ಓಂಕಾರ, ಎಸ್.ಬಿ.ಅಂಕದ, ಶಿವು ಮಡಿಕೇಶ್ವರ, ಬಸವರಾಜ ಮೇಟಿ, ಎಚ್.ಬಿ.ಬಾರಿಕಾಯಿ, ಬಿ.ವ್ಹಿ.ಚಕ್ರಮನಿ, ಕೊಟ್ರೇಶ ಹೆಗ್ಡಾಳ, ಸಿ.ಎಲ್.ಮುರಾಳ, ಪರಸಪ್ಪ ಕಳ್ಳಿಗುಡ್ಡ, ಗುರುಸಂಗಪ್ಪ ಕುಂಬಾರ, ಸುಭಾಸ ಚಕ್ರಮನಿ, ಗುರುಲಿಂಗಪ್ಪ ಕುಂಬಾರ, ಸಿದ್ದಪ್ಪ ಅವಟಿ, ವೈ.ಎನ್.ಮಿಣಜಗಿ, ಕಾಂತಪ್ಪ ಹಿರೇಕುರಬರ, ಸುರೇಶ ಚಿಗರಿ, ಬಸವರಾಜ ನಾವಿ, ಮಹಾದೇವಿ ಬಿರಾದಾರ, ನಿರ್ಮಲಾ ಅಂಡಗಿ, ಜಯಶ್ರೀ ಗುಬ್ಬಾ ಸೇರಿದಂತೆ ಇತರರು ಇದ್ದರು.

