ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಾರ್ತಿಕ ದೀಪೋತ್ಸವವು ಕೇವಲ ಬಾಹ್ಯ ಕತ್ತಲೆಯನ್ನು ಹೋಗಲಾಡಿಸುವುದಲ್ಲ, ನಮ್ಮ ಅಂತರಂಗದ ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಮೂಡಿಸುವ ಕಾರ್ತಿಕ ದೀಪೋತ್ಸವವು ಸಂಕೇತವಾಗಿದೆ ಎಂದು ಮುಖಂಡ ಮಹಾಂತೇಶ ಪಟ್ಟಣದ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ಸದ್ಗುರು ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕೋತ್ಸವದ ೯ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಲ್ಲಾಲಿಂಗೇಶ್ವರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಸಮಾಜದಲ್ಲಿ ನೀತಿ, ಸಂಸ್ಕಾರ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಕೇಂದ್ರವಾಗಿವೆ. ಈ ಭಾಗದ ಭಕ್ತರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜಾಗೃತಿಯ ಕೇಂದ್ರವಾಗಿದೆ. ಜಾತಿ-ಮತ ಭೇದವಿಲ್ಲದೆ ಸರ್ವರನ್ನೂ ಒಗ್ಗೂಡಿಸಿ ಇಂತಹ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಭಕ್ತರು ಸ್ವಪ್ರೇರಣೆಯಿಂದ ಭಾಗವಹಿಸಿ ಮಠದ ಕಾರ್ಯಗಳಿಗೆ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಿವೃತ್ತ ಶಿಕ್ಷಕ ಎಸ್.ಎಸ್.ಹುನಗುಂದ ಮಾತನಾಡಿ, ದೀಪವು ತನ್ನನ್ನು ತಾನು ಬೆಳಗಿಸಿಕೊಂಡು ಇತರರಿಗೆ ಬೆಳಕು ನೀಡುವಂತೆ, ಮನುಷ್ಯನು ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಹೊರಗಿನ ಕತ್ತಲೆಯನ್ನು ಹಣತೆ ಹೋಗಲಾಡಿಸಿದರೆ, ಗುರುವಿನ ಅನುಗ್ರಹ ಮತ್ತು ಸತ್ಸಂಗವು ಮನುಷ್ಯನ ಅಂತರಂಗದ ಅಜ್ಞಾನ ಹಾಗೂ ಅಹಂಕಾರದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ತುಂಬುತ್ತದೆ. ಅದರಂತೆ ಯಲ್ಲಾಲಿಂಗೇಶ್ವರರ ತತ್ವ-ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಶಿಕ್ಷಕ ಎಂ.ಬಿ.ಗುಡಗುಂಟಿ ಮಾತನಾಡಿದರು. ಅಂದು ಬ್ರಾಹ್ಮೀ ಮುಹೂರ್ತದಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಯಲ್ಲಾಲಿಂಗೇಶ್ವರರ ಕರ್ತೃ ಗದ್ದುಗೆಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಏಕಾದಶ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಗದ್ದುಗೆಯನ್ನು ವಿವಿಧ ಬಗೆಯ ಸುಗಂಧಭರಿತ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಮಠದ ಆವರಣದೆಲ್ಲೆಡೆ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆಯಾಗುತ್ತಿದ್ದAತೆ ಮಠದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು, ಮಕ್ಕಳು ಹಾಗೂ ಭಕ್ತಾದಿಗಳು ಮಠದ ಪ್ರಾಂಗಣ, ಗದ್ದುಗೆಯ ಸುತ್ತಲೂ ಹಾಗೂ ದೀಪಸ್ತಂಭಗಳಲ್ಲಿ ಸಾಲು-ಸಾಲು ಮಣ್ಣಿನ ಹಣತೆಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು.
ಸಾವಿರಾರು ದೀಪಗಳ ಬೆಳಕಿನಲ್ಲಿ ಶ್ರೀಮಠದ ಆವರಣವು ದಿವ್ಯ ಕಳೆಯಿಂದ ಕಂಗೊಳಿಸುತ್ತಿತ್ತು.
ಉಪನ್ಯಾಸಕ ಪ್ರಕಾಶ ನರಗುಂದ, ನಾಗಪ್ಪ ಸುಡುಗಾಡ ಸಿದ್ದ, ನಾಗೇಶ ಭಜಂತ್ರಿ, ನಾಗಪ್ಪ ಧನಗೊಂಡ, ಶಿವಪ್ಪಣ್ಣ ಪಡದಾಳಿ, ವಾಸುದೇವ ಚಿತ್ರಗಾರ, ಬಿ.ಎಂ.ನಾಯ್ಕೋಡಿ, ಡಿ.ಪಿ.ಬಿರಾದಾರ, ಭೀಮು ಬಳವಾಟ, ಎಸ್.ಎಸ್.ಬೆನಕಟ್ಟಿ, ಮಲ್ಲು ಕತ್ತಿ, ಲಕ್ಷ್ಮಿಬಾಯಿ ಪೂಜಾರಿ, ಎಸ್.ವ್ಹಿ.ಹೊಳಿ, ಪರಶುರಾಮ ಚೌಡಕೇರ, ಎಸ್.ವಾಯ್.ವಗ್ಗರ ಸೇರಿದಂತೆ ಮತ್ತೀತರರು ಇದ್ದರು.
ಕಲಾವಿದರಾದ ಎಂ.ಪಿ.ವಾಳದವರ ಮತ್ತು ಮಳೆಬಸಪ್ಪ ಮಡಿವಾಳರ ಯಲ್ಲಾಲಿಂಗೇಶ್ವರರ ಮೇಲೆ ಹಂತಿ ಪದಗಳನ್ನ ಹಾಡಿದರೆ, ದಿನದ ಪ್ರಸಾದ ಸೇವೆ ನೀಡಿದ್ದ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಎ.ಆರ್.ಮುಲ್ಲಾ ಜಾನಪದ ಗೀತೆ ಹಾಡುವ ಮೂಲಕ ಗಮನ ಸೆಳೆದರು. ಪಿ.ಸಿ.ಹಡಗಿನಾಳ ಸ್ವಾಗತಿಸಿದರು. ಗಿರೀಶ ವಾಗಣಗೇರಿ ನಿರೂಪಿಸಿದರು. ಪ್ರಾಚಾರ್ಯ ಸುರೇಶ ಹರನಾಳ ವಂದಿಸಿದರು.

