ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆ ವಾರ್ಡ್ ನಂ.29ರ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಗಿರೀಶ ಪಾಟೀಲ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಫಲಿತಾಂಶ ಹೊರ ಬಿಳುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು,. ನಂತರ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ವಾರ್ಡ್ ನಂ.29 ಬಡಾವಣೆ/ಕಾಲೊನಿಗಳಲ್ಲಿ ಸಂಚರಿಸಿ ಮತದಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು. ಭಾರತ್ ಮಾತಾ ಕೀ ಜೈ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ಪರ ಜಯಘೋಷ ಮೊಳಗಿಸಿದರು.
ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಭಿವೃದ್ಧಿ ಮೆಚ್ಚಿ ಹಾಗೂ ಅವರ ಮೇಲೆ ಅಪಾರವಾದ ಭರವಸೆಯಿಂದ ಹಾಗೂ ಮತ್ತಷ್ಟು ಅವರ ಕೈ ಬಲಪಡಿಸಲು ಮತದಾರರು ಆಶೀರ್ವದಿಸಿದ್ದರಿಂದ ನಮ್ಮ ಅಭ್ಯರ್ಥಿಯ ಅಭೂತಪೂರ್ವ ಗೆಲುವಾಗಿದೆ. ಶಾಸಕರು ಪಣತೊಟ್ಟಂತೆ ಮುಂದಿನ ಅವಧಿಗೆ ಬಿಜೆಪಿ ಪಕ್ಷವೇ ಮೇಯರ್ ಪಟ್ಟ ಪಡೆದುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

