ಚನ್ನವೀರಸ್ವಾಮೀಜಿ ಪ್ರತಿಷ್ಠಾನದಿಂದ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ.ಸುಬ್ಬಯ್ಯ ಅಯ್ಯಪ್ಪನ್ ಅವರಿಗೆಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ನಾಣ್ಣುಡಿಯಂತೆ ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯ ಜೊತೆಗೆ ವಿಷಯದ ಎಲ್ಲ ಶಾಸ್ತ್ರಗಳು ಅತ್ಯವಶ್ಯಕ ಎಂದು ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ. ಸುಬ್ಬಯ್ಯ ಅಯ್ಯಪ್ಪನ್ ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಪೂಜ್ಯಶ್ರೀ ಚೆನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ದೇಶದ ಶ್ರೇಷ್ಠ ವಿಜ್ಞಾನಿಗಳಿಗೆ ಖ್ಯಾತ ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯ-೨ ಹೆಸರಿನ ಮೇಲೆ ಕೊಡಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಈ ದೇಶದ ಪ್ರಗತಿ ಕೃಷಿ ಮತ್ತು ಅನ್ನದಾತನ ಮೇಲೆ ಅವಲಂಬಿತವಾಗಿದೆ. ಎಲ್ಲ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರ ಅತ್ಯಂತ ಪವಿತ್ರ. ಮಣ್ಣಿನ ಸುವಾಸನೆ, ಮಣ್ಣಿನ ಸಂಬಂಧ, ಮತ್ತು ಮಣ್ಣಿನ ಸಂಪರ್ಕ ನಮಗೆ ಹೆಚ್ಚಿಗೆ ಆದಷ್ಟು ಜೀವನದಲ್ಲಿ ಹೆಚ್ಚು ಅನುಭವ ಮೂಡುತ್ತದೆ. ಮಾಧ್ಯಮ ಮತ್ತು ಸಮೂಹ ಸಂವಹನಗಳು ರೈತರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಡುವುದರಿಂದ ಇಂದು ರೈತ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬದಲಾವಣೆಯಾಗುತ್ತಿರುವ ವಾತಾವರಣದ ಏರುಪೇರುಗಳ ಮಧ್ಯದಲ್ಲಿ ಅನ್ನದಾತ ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಮುಂಬರುವ ದಿನಗಳಲ್ಲಿ ನಮಗೆ ಚಿನ್ನ ದೊರೆಯುತ್ತದೆ ಹೊರತು ಅನ್ನ ಸಿಗುವುದಿಲ್ಲ. ರೈತರನ್ನು ನಾವು ಯಾವತ್ತೂ ರೈತರೆಂದು ಕರೆಯಬಾರದು ಅವರು ಕೃಷಿ ಋಷಿಗಳಾಗಿದ್ದಾರೆ. ಕೃಷಿ ಇಲ್ಲದೇ ಬದುಕಿಲ್ಲ. ಅನ್ನದಾತನಿಲ್ಲದೇ ಜೀವವಿಲ್ಲ. ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು ಅನ್ನದಾತನಿಗೆ ಗೌರವವನ್ನು ನೀಡಬೇಕು. ಈ ದೇಶದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ಅನ್ನ ದೇಗುಲಗಳಿದ್ದಂತೆ. ನಿಮ್ಮ ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯ ಜ್ಞಾನ ಮತ್ತು ಆ ಕ್ಷೇತ್ರದೆಡೆಗೆ ಆಸಕ್ತಿ ಮೂಡುವಂತೆ ಮಾಡಬೇಕಾದದ್ದು ಅತ್ಯಂತ ಮುಖ್ಯವಾಗಿದೆ. ಇಡೀ ದೇಶವನ್ನು ಸಮೀಕ್ಷೆ ಮಾಡಿದಾಗ ತಿಳಿದು ಬಂದದ್ದು ಏನೆಂದರೆ ನಮ್ಮ ಸಮಾಜದಲ್ಲಿ ರೈತರೆ ಮುಖ್ಯ ಎಂದು ತಿಳಿದು ಬಂದಿದೆ ಎಂದರು.
ಈ ವೇಳೆ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಆಲೂರ ಮಾತನಾಡಿ, ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರು ಕೃಷಿ ಕ್ಷೇತ್ರದ ಸದ್ಗುರುವಾಗಿ ಅನೇಕ ರೈತರ ಬಾಳನ್ನು ಬೆಳಗಿ ಮಾರ್ಗದರ್ಶನ ನೀಡಿದವರು. ಈ ಕ್ಷೇತ್ರದಲ್ಲಿ ಅವರು ಪರುಷ ಲೋಹವಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಂದಗಿ ಸಾರಂಗಮಠ ಅವರನ್ನು ಗುರುತಿಸಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಕೃಷಿ ಕ್ಷೇತ್ರದ ದೊಡ್ಡ ಶಕ್ತಿಗೆ ನೀಡಿದಂತಹ ಪ್ರಶಸ್ತಿಯಾಗಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಡಾ. ಭೀಮಪ್ಪ, ಕೃಷಿ ವಿಜ್ಞಾನಿ ಡಾ.ಎಸ್. ಅಯ್ಯಪ್ಪನ್ ಅವರ ಧರ್ಮಪತ್ನಿ ಉಮಾ ಅಯ್ಯಪ್ಪನ್ ಮಾತನಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಕೊಣ್ಣೂರು ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಡಾ.ರವೀಂದ್ರ ಬೆಳ್ಳಿ, ಡಾ.ಬಿ.ಎನ್.ಮೋಟಗಿ, ಡಾ. ಅಶೋಕ ಸಜ್ಜನ್, ವಿವೇಕಾನಂದ ಸಾಲಿಮಠ, ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಅಶೋಕ ಮಸಳಿ, ಗಂಗಾಧರ ಜೋಗುರ ಹ.ಮ.ಪೂಜಾರಿ, ಡಾ.ಬಿ.ಜಿ.ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಾ.ರವಿ ಗೋಲಾ ಮತ್ತು ಪೂಜಾ ಹಿರೇಮಠ ನಿರೂಪಿಸಿದರು. ಡಾ.ಶರಣಬಸವ ಜೋಗುರ ಸ್ವಾಗತಿಸಿದರು.

ಶುಭ ಹಾರೈಕೆ
ಇಂದಿನ ಯುವ ಜನಾಂಗ ಕಲಿಕೆ, ಉಳಿಕೆ, ಗಳಿಕೆ ಮತ್ತು ದನ್ಯತಾ ಮನೋಭಾವ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಅಂದಾಗ ಬದುಕಿನಲ್ಲಿ ಸಾಧನೆ ಮಾಡಲು ಸಾದ್ಯ. ಹಾಗೆಯೇ ಮುಂದಿನ ದಿನಮಾನಗಳಲ್ಲಿ ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ವಿದ್ಯಾರ್ಥಿಗಳು ಭವ್ಯ ಪ್ರಜೆಗಳಾಗಿ ಹೊರಹೊಮ್ಮಲಿ ಎಂದು ಕೃಷಿ ವಿಜ್ಞಾನಿ ಡಾ.ಎಸ್ ಅಯ್ಯಪ್ಪನ್ ಶುಭ ಹಾರೈಸಿದರು.

