’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)
ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು,
ಬೆಳಗಾವಿ, ಮೊ:೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನಮ್ಮಲ್ಲಿ ಬಹುತೇಕ ಜನರು ಗುರಿ ಮುಟ್ಟದೇ ವಿಫಲರಾಗಲು ಕಾರಣ ಸಂವಹನ ಕಲೆ ಗೊತ್ತಿಲ್ಲದೇ ಇರುವುದು. ಅದರಲ್ಲೂ ಅಪರಿಚಿತರೊಂದಿಗೆ ಮಾತನಾಡಲು ಭಯಗೊಳ್ಳುವುದು ಸಾಮಾನ್ಯ. ಮಾತಿನ ಕಲೆ ತಲೆ ಎತ್ತಿ ನಡೆಯುವುದನ್ನು ದೈರ್ಯವನ್ನು ತುಂಬುತ್ತದೆ. ಕರಗತ ಮಾಡಿಕೊಂಡರೆ ಅಪರಿಚಿತರೊಂದಿಗೆ ಮಾತು ಹೇಗೆ ಆರಂಭಿಸಬೇಕೆಂಬುದು ಸಲೀಸಾಗಿ ಬಿಡುತ್ತದೆ. ನಾಲ್ಕಾರು ಜನರ ಗುಂಪಿನಲ್ಲಿರುವಾಗ ಏನು ಮಾತನಾಡುವುದೆಂದು ತಿಳಿಯದೆ ಆ ಕಡೆ ಈ ಕಡೆ ನೋಡುತ್ತ ನಿಂತು ಬಿಡುತ್ತೇವೆ. ಅವರಲ್ಲಿ ನಾವೂ ಒಬ್ಬರೆಂಬ ಭಾವನೆ ಬರದೇ ಅವರ ಇರುವಿಕೆಯನ್ನು ಸಂತಸದಿಂದ ಕಳೆಯದೆ ಪೇಚಾಡುತ್ತೇವೆ. ಉಸಿರುಗಟ್ಟಿದ ವಾತಾವರಣದಲ್ಲಿ ನಿಂತಂತೆನಿಸಿ ಅಲ್ಲಿಂದ ಹೊರ ನಡೆದರೆ ಸಾಕೆಂದು ಅನಿಸುವುದೂ ಉಂಟು. ಅಂಥ ಸಮಯದಲ್ಲಿ ನೀವೂ ಅವರಲ್ಲೊಬ್ಬರು ಅಂತೆನಿಸಲು ಹೇಗೆ ಮಾತನಾಡಬೇಕೆಂದು ಯೋಚಿಸುತ್ತೀರಿ ಆದರೆ ಮಾತನಾಡಿ ಏನಾದರೂ ತಪ್ಪಾದರೆಂದು ಬಾಯಿ ಮುಚ್ಚಿಕೊಂಡಿರುತ್ತೀರಿ. ನಡೆಯುತ್ತಿರುವ ಸಂಭಾಷಣೆಯಲ್ಲಿ ನೀವೂ ಭಾಗ ತೆಗೆದುಕೊಳ್ಳಬೇಕೆಂದರೆ ಏನು ಮಾಡಬೇಕೆಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು.
ಸಾಮಾನ್ಯವಾದುದನ್ನು ಹುಡುಕಿ
ನಡೆಯುತ್ತಿರುವ ಸಂಭಾಷಣೆಯನ್ನು ಗಮನವಿಟ್ಟು ಕೇಳಬೇಕು. ಚಟುವಟಿಕೆಗಳನ್ನು ಗಮನಿಸಬೇಕು. ಅದರಲ್ಲಿ ಕೆಲವೊಂದು ಅಂಶಗಳು ನಿಮ್ಮಲ್ಲಿ ಮತ್ತು ಅವರಲ್ಲಿ ಸಾಮಾನ್ಯವಿರುವ ಅಂಶಗಳು ಇದ್ದೇ ಇರುತ್ತವೆ. ಧರಿಸಿರುವ ಬಟ್ಟೆ, ಪಾದರಕ್ಷೆ, ವಾಚ್, ಗಾಗಲ್ ಹೀಗೆ ಇನ್ನೂ ಮುಂತಾದವುಗಳು. ಮೈಗೆ ಪೂಸಿದ ಸುಗಂಧವೂ ಆಗಿರಬಹುದು. ಚೆನ್ನಾಗಿದೆ ಎಲ್ಲಿ ಖರೀದಿಸಿದಿರೆಂದು ಕೇಳಬಹುದು. ಹಿಡಿದುಕೊಂಡಿರುವ ಪುಸ್ತಕದ ಬಗ್ಗೆ ಅವರು ಮಾತನಾಡುತ್ತಿದ್ದರೆ, ಅವರಿಗೆ ಓದಿನ ಗೀಳಿದೆಯೆಂದು ತಿಳಿದು ಬಂದರೆ ಪುಸ್ತಕದ ಕುರಿತಾಗಿ ನಿಮ್ಮ ಮಾತನ್ನು ಆರಂಭಿಸಬಹುದು ಒಂದು ವೇಳೆ ಅವರು ಮೇಲಿಂದ ಮೇಲೆ ಟಿವಿ ಪರದೆಯತ್ತ ಲಕ್ಷ್ಯ ಹರಿಸುತ್ತಿದ್ದರೆ ಅವರಿಗೆ ಕ್ರಿಕೆಟ್ ಇಲ್ಲವೇ ಧಾರಾವಾಹಿ ಸಿನೆಮಾದ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಿಮ್ಮ ಇಷ್ಟವನ್ನು ಅದಕ್ಕೆ ಸೇರಿಸಬಹುದು. ಅಲ್ಲಿಂದ ನಿಮ್ಮ ಸಂಭಾಷಣೆ ಆರಂಭಿಸಬಹುದು. ನಿಮ್ಮ ಪರಿಚಯ ಖುಷಿ ತಂತು ಎಂದು ನಗುತ್ತ ಒಂದು ಧನ್ಯವಾದ ಹೇಳಿ. ಅಂತಿಮವಾಗಿ ನಾವೆಲ್ಲ ಮಾನವರು ಮಾನವೀಯ ಭಾವನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಉತ್ತಮ ಮಾತುಗಾರರು ಆಗಲು ಸಾಧ್ಯ.
ಕುತೂಹಲದ ಪ್ರಶ್ನೆಗಳನ್ನು ಕೇಳಿ
ನೀವು ಹೇಗಿದಿರಿ? ಯಾವ ಊರು? ಈಗ ಇರುವುದು ಎಲ್ಲಿ? ಹೀಗೆ ಬಹುತೇಕ ಸಲ ನಾವು ಇಂಥ ಚಿಕ್ಕಪುಟ್ಟ ಪ್ರಶ್ನೆಗಳನ್ನು ಕೇಳುತ್ತೇವೆ. ಇಲ್ಲವೇ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಪ್ರಶ್ನೆಗಳನ್ನು ಕೇಳುತ್ತೇವೆ.. ಇದರಿಂದ ಎದುರಿಗಿನವರು ಚೇಳು ಕಡಿದಂತೆ ಅದಕ್ಕಷ್ಟೇ ಉತ್ತರಿಸಿ ಸುಮ್ಮನಾಗಿ ಬಿಡುತ್ತಾರೆ. ಆಮೇಲೆ ನೀರವ ಮೌನ. ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದಿರುವ ನೀವು ಎಂಥ ಪ್ರಶ್ನೆಗಳನ್ನು ಕೇಳಬೇಕೆಂದರೆ ಎದುರಿನವರು ಮುಕ್ತವಾಗಿ ಉತ್ತರಿಸಬೇಕು. ಹೆಚ್ಚು ಹೆಚ್ಚು ವಿವರಿಸಿ ತಮ್ಮದನ್ನು ಹೇಳಿಕೊಳ್ಳುವ ಪ್ರಶ್ನೆಗಳನ್ನು ಕೇಳಬೇಕು. ಉದಾಹರಣೆಗೆ ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಯಾವುದು ನಿಮ್ಮನ್ನು ಸೆಳೆಯಿತು? ವೃತ್ತಿ ಮತ್ತೆ ಮನೆಕೆಲಸ ಅದೆಷ್ಟು ಚೆನ್ನಾಗಿ ಹೇಗೆ ನಿಭಾಯಿಸುತ್ತೀರಿ? ಹೀಗೆ ವೃತ್ತಿ ಮತ್ತು ಕೌಟಂಬಿಕ ಪ್ರಶ್ನೆಗಳು ಅವರು ಮುಕ್ತವಾಗಿ ಮಾತನಾಡುವಂತೆ ಪ್ರೇರೇಪಿಸುತ್ತವೆ. ಹವ್ಯಾಸ ಅಭಿರುಚಿ ಬಗೆಗೆ ಕೇಳಿದರಂತೂ ಮುಗಿದೇ ಹೋಯಿತು ಬಲು ಆಸಕ್ತಿಯಿಂದ ತೆರೆದ ಹೃದಯದಿಂದ ಹಂಚಿಕೊಳ್ಳಲು ಶುರು ಮಾಡುತ್ತಾರೆ. ನಿಮ್ಮ ಕಿವಿ ಮತ್ತು ಧ್ಯಾನ ಅಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ನಡು ನಡುವೆ ಹ್ಞೂಂ ಹೌದಾ? ಹೀಗೇನು? ವಾವ್! ಎನ್ನುತ್ತ ಉತ್ತೇಜಿಸಬೇಕು. ಹೀಗಾದಾಗ ಸಂಭಾಷಣೆ ಬೆಳೆಯುವುದು ಮತ್ತು ಅವರು ನಿಮಗೆ ಪರಿಚಿತರಾಗುವರು. ಪ್ರತಿಯೊಬ್ಬರ ಜೀವನದಲ್ಲೂ ಹಂಚಿಕೊಳ್ಳಲು ಅನುಭವಗಳು ಕಥೆಗಳು ಇದ್ದೇ ಇರುತ್ತವೆ. ಅವುಗಳನ್ನು ಹೇಳುವಂತೆ ಪ್ರಚೋದಿಸುವುದೇ ಉತ್ತಮ ಮಾತುಗಾರನ ಲಕ್ಷಣ.’ಪ್ರತಿಯೊಬ್ಬರೂ ತಮ್ಮದನ್ನು ಹೇಳಿಕೊಳ್ಳಲು ಉತ್ಸುಕರಾಗಿರುತ್ತಾರೆ ಹೊರತು ನಮ್ಮದನ್ನು ಕೇಳಲು ಅಲ್ಲ.’ ಎಂಬುದು ನೆನಪಿರಲಿ.
ಅಭಿಪ್ರಾಯ ವ್ಯಕ್ತಪಡಿಸಿ
ನೀವೆಲ್ಲಿರುವಿರೋ ಅಲ್ಲಿಯದೇ ಒಂದು ಸನ್ನಿವೇಶವನ್ನು ತೆಗೆದುಕೊಂಡು ಸಂಭಾಷಣೆ ಆರಂಭಿಸಬಹುದು. ಯಾವುದೇ ಪಾರ್ಟಿಯಲ್ಲಿ ಇಲ್ಲವೇ ಮಾಲ್‌ನಲ್ಲಿ ಹೋದಾಗ ತೇಲಿ ಬರುತ್ತಿರುವ ಸಂಗೀತ ಕ್ಲಾಸಿಕ್ ಆಗಿದ್ದರೆ ಇಲ್ಲವೇ ಸೌಂಡ್ ಹೆಚ್ಚಾಗಿದ್ದರೆ ಸಂದರ್ಭಕ್ಕೆ ತಕ್ಕಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಂಭಾಷಣೆ ಶುರು ಮಾಡಬಹುದು. ಯಾವುದೇ ಸಭೆ ಸಮಾರಂಭದಲ್ಲಿರುವಾಗ ಅಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಮಾತನಾಡಬಹುದು. ಸಿನಿಮಾ ರಾಜಕೀಯ ಹವಾಮಾನದಂತಹ ಸಾಮಾನ್ಯ ವಿಚಾರಗಳ ಕುರಿತಾಗಿಯೂ ಮಾತು ಆರಂಭಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ಪ್ರಾಮಾಣಿಕ ಮೆಚ್ಚುಗೆ
ಪ್ರತಿಯೊಬ್ಬರೂ ತಮ್ಮನ್ನು ಇತರರು ಮೆಚಿಕೊಳ್ಳಲಿ ಎಂದು ಬಯಸುತ್ತಾರೆ. ಆದರೆ ಅದು ಕೃತ್ರಿಮವಾಗಿರಬಾರದೆಂದು ಹೊಗಳಿಕೆಯಾಗಿರಬಾರದೆಂದು ಬಯಸುತ್ತಾರೆ. ಪರಿಚಯ ಮಾಡಿಕೊಳ್ಳಲು ಮೊದಲಿನ ಮಾತಿನಲ್ಲೇ ಹೊಗಳಿದರೆ ಮುಂದಿನವರು ಇವರು ಯಾವುದೇ ಉದ್ದೇಶಕ್ಕೆ ನನ್ನನ್ನು ಮಾತಿಗೆಳಿಯುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಒಂದು ವೇಳೆ ಅವರಲ್ಲಿಯ ಒಳ್ಳೆಯದನ್ನು ಮೆಚ್ಚಿಕೊಂಡು ಮಾತನಾಡಿಸಿದರೆ ನಿಜವಾಗಲೂ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಅಪರಿಚಿತರಲ್ಲಿ ಒಮ್ಮೆಲೇ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಗುಣಗಳನ್ನು ಹೇಗೆ ಕಂಡುಕೊಳ್ಳುವ ಎನ್ನುವ ಸವಾಲಿಗೆ ಜವಾಬು ಸೂಕ್ಷ್ಮ ಅವಲೋಕನವಷ್ಟೇ. ಉದ್ಯಮಿ ಚಾರ್ಲ್ಸ್ ಶೋವಾಬ್ ಹೇಳಿದಂತೆ ‘ಮೆಚ್ಚುಗೆಯಲ್ಲಿ ಮನಸಾರೆ ಹೊಗಳಿಕೆಯಲ್ಲಿ ಧಾರಾಳಿ.’ ಆಗಿರಿ. ಟೀಕಿಸುವ ದೂಷಿಸುವ ದೂರುವ ಮಾತುಗಳು ಬೇಡ. ಬದಲಾಗಿ ಅವರನ್ನು ಅರ್ಥೈಸಿಕೊಂಡು ಮಾತನಾಡಿ.
ಹಿಂದಿನ ಸಂಭಾಷಣೆ
ಈಗಾಗಲೇ ಎಲ್ಲೋ ಒಂದೆರಡು ಸಲ ಭೇಟಿಯಾಗಿದ್ದರೆ ಮಾತು ಆರಂಭಿಸಲು ತಡಬಡಾಯಿಸುವ ಅವಶ್ಯಕತೆಯಿಲ್ಲ. ಹಿಂದೆ ಸಿಕ್ಕಾಗ ಮಾತನಾಡಿದ ಮಾತಿನ ಎಳೆಯನ್ನು ಹಿಡಿದು ಮಾತು ಆರಂಭಿಸಬಹುದು. ಹಿಂದಿನ ಭೇಟಿಯಲ್ಲಿ ವಿವರಿಸಿದ ಘಟನೆಯ ಬಗ್ಗೆ ಅಥವಾ ಅವರ ಗೆಳೆಯರ ಬಗ್ಗೆ ಇಲ್ಲವೇ ಕೆಲಸದ ಕುರಿತಾಗಿ ಮಾತನಾಡಿದ್ದನ್ನು ನೆನಪಿಸಿ ಮಾತಿಗೆಳೆದರೆ ಅವರಿಗಾಗುವ ಖುಷಿ ಅಷ್ಟಿಷ್ಟಲ್ಲ. ನೀವು ಅವರ ವಿಷಯಗಳನ್ನು ಇನ್ನೂ ನೆನಪಿಟ್ಟುಕೊಂಡಿದ್ದೀರಿ ಅವರ ಪ್ರತಿ ನಿಮಗೆ ಒಳ್ಳೆಯ ಅಭಿಪ್ರಾಯವಿದೆಯೆಂದು ನೀವು ಕೇಳುವ ಮುನ್ನವೇ ತಾವೇ ಮುಂದಾಗಿ ಸ್ನೇಹ ಹಸ್ತ ಚಾಚುತ್ತಾರೆ.
ಕೊನೆ ಹನಿ
ಮಾತು ಕೇವಲ ಶಬ್ದಗಳ ಗುಂಪಲ್ಲ. ನೀವು ಆರಿಸುವ ಶಬ್ದಗಳು ನಿಮ್ಮ ವ್ಯಕ್ತಿತ್ವವನ್ನು ಕಟ್ಟುತ್ತವೆ. ಬೆಳೆಸುತ್ತವೆ. ಆಯ್ಕೆ ಮಾಡುವ ಶಬ್ದಗಳ ಬಗ್ಗೆ ಕಾಳಜಿ ಇರಲೇಬೇಕು. ಸಂವಹನ ಕಲೆಗೆ ಬೆಲೆ ಕಟ್ಟಲಾಗದು. ಎದುರಿಗಿದ್ದವರ ಪ್ರತಿ ಅಪಾರ ಗೌರವವಿರಿಸಿ ಮಾತನಾಡುವುದು ನಮ್ಮ ಗೌರವವನ್ನೂ ಹೆಚ್ಚಿಸುತ್ತದೆಂಬುದನ್ನು ಮರೆಯುವಂತಿಲ್ಲ. ವಿನಸ್ಟನ್ ಚರ್ಚಿಲ್ ಹೇಳಿದಂತೆ ‘ಒಳ್ಳೆಯ ಮಾತುಗಾರನಾಗಬೇಕೆಂದರೆ ಒಳ್ಳೆಯ ಕೇಳುಗನಾಗಬೇಕು.’ ಆಲಿಸುವ ಕಿವಿಗಳು ಚುರುಕಾದರೆ ಆಡುವ ಬಾಯಿಯೂ ಚುರುಕಾಗುತ್ತದೆ ಬದುಕಿನುದ್ದಕ್ಕೂ ಸವಿ ಅಮೃತ ಉಣ್ಣುವ ಭಾಗ್ಯವೂ ನಮ್ಮದಾಗುತ್ತದೆ.