ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಂತ ಕನಕದಾಸರ ಸಮಾನತೆಯ ಕಳಕಳಿಯುಳ್ಳ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು, ಅವರ ಬದುಕೇ ನಮಗೆಲ್ಲ ಆದರ್ಶದ ಹೊತ್ತಿಗೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ದೇವಸ್ಥಾನ ಸಮೀತಿ ವತಿಯಿಂದ ಹಮ್ಮಿಕೊಂಡ ಸಂತ ಕನಕದಾಸರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ದಾಸರು ಹೊಸಗನ್ನಡ ಸಾಹಿತ್ಯ ಕೋಗಿಲೆಯಾಗಿ, ಸಮಾಜದಲ್ಲಿದ್ದ ಮೇಲು-ಕೀಳು, ಬಡವ-ಬಲ್ಲಿದ ಎಂಬ ಬೇಧಭಾವ ದೂರ ಮಾಡಿ ಸಮಸಮಾಜ ನಿರ್ಮಿಸಿದ ವಿಶ್ವಬಂಧು ಸಂತಕವಿಯಾಗಿದ್ದಾರೆ. ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ ಮಾತನಾಡಿ, ಸರಳ ಕನ್ನಡದಲ್ಲಿ ಕೀರ್ತನೆಗಳನ್ನು ರಚನೆ ಮಾಡಿ, ಸಮಾಜದಲ್ಲಿರುವ ಮೂಢ ನಂಬಿಕೆ, ಮೌಢ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ಕನಕರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಭೀರದೇವರ ಪಟ್ಟದ ಪೂಜಾರಿ ಗೂಳಪ್ಪ ಪೂಜಾರಿ, ಪೂಜಣ್ಣ ಪೂಜಾರಿ, ಸಮಿತಿಯ ಕಾರ್ಯದರ್ಶಿ ಸುರೇಶ ಗಿರಿಸಾಗರ, ಸದಸ್ಯ ಬಸವರಾಜ ಹೊಸಟ್ಟಿ, ವಿಶ್ವನಾಥ ಕಲಗೊಂಡ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಹಳ್ಳಿ,
ಮಾಜಿ ಸೈನಿಕ ಅಪ್ಪು ಹೊಸಟ್ಟಿ, ಗ್ರಾಮದ ರಾಜು ಕತ್ನಳ್ಳಿ, ಶ್ರೀಕಾಂತ ಗುಜ್ಜಲಕರ, ರಮೇಶ ಹೂಗಾರ, ಯಲ್ಲಪ್ಪ ಮಧಭಾವಿ, ಜಕ್ಕಪ್ಪ ತೆನ್ನಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

