ಜಗನ್ಮಾತಾ ಶ್ರೀ ಕಾಳಿಕಾದೇವಿ ದೇವಸ್ಥಾನ ಭೂಮಿ ಪೂಜಾ ಸಮಾರಂಭ | ಧರ್ಮಸಭೆ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕಾಯಕ ತತ್ವದಲ್ಲಿ ನಂಬಿಕೆ ಇಟ್ಟ ವಿಶ್ವಕರ್ಮ ಸಮಾಜದ ಬಾಂಧವರು ಎಲ್ಲರನ್ನೂ ಪ್ರೀತಿಸುವ ವಿಶಾಲ ಹೃದಯ ಹೊಂದಿದವರಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಹೇಳಿದರು.
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನ ಸಮಿತಿ ವತಿಯಿಂದÀ ಹಮ್ಮಿಕೊಂಡ ದೇವಸ್ಥಾನ ಭೂಮಿ ಪೂಜಾ ಮತ್ತು ಧರ್ಮಸಭೆ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಗನ್ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಿದ್ದು ನನ್ನ ಸೌಭಾಗ್ಯವಾಗಿದೆ. ದೇವಸ್ಥಾನ ನಿರ್ಮಾಣಕ್ಕಾಗಿ ನನ್ನ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ನಾನು ಆರ್ಥಿಕ ಸಹಾಯ ಮಾಡುತ್ತೇನೆ ಎಂದರು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀ ಕಾಳೀಕಾದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಜಗವೆಲ್ಲ ನಗುತಿರಲು ಜಗದ ನೋವು ನನಗಿರಲಿ ಎಂಬಂತೆ ಎಲ್ಲಾ ಸಮುದಾಯಗಳ ಸಂತೋಷವನ್ನು ಬಯಸುವ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕಲೆಗೆ ಶ್ರೇಷ್ಟ ಕೊಡುಗೆ ನೀಡಿದ್ದಾರೆ, ಸಾವಿರಾರು ವರ್ಷಗಳ ಹಿಂದೆ ಅವರು ವಿಶ್ವಕ್ಕೆ ಪರಿಚಯಿಸಿದ ಶಿಲ್ಪಕಲೆಯು ಇಂದಿನ ವಿಜ್ಞಾನದ ಯುಗದಲ್ಲಿಯೂ ಪುನ: ಮಾಡಿ ತೋರಿಸಲು ಸಾಧ್ಯವಾಗದ ರೀತಿ ಇದ್ದು, ಇಂದು ಅವರ ಸಮಾಜದ ಶ್ರೀ ಕಾಳಿಕಾದೇವಿಯ ದೇವಸ್ಥಾನ ನಿರ್ಮಾಣಕ್ಕೆ ಭುಮಿ ಪೂಜೆ ನೆರವೇರಿದ್ದು ಸಂತೋಷದ ವಿಷಯವಾಗಿದೆ ಎಂದರು.
ಶಹಾಪೂರದ ಅಜೇಂದ್ರ ಶ್ರೀಗಳು, ಕಾಳಹಸ್ತೇಂದ್ರ ಶ್ರೀಗಳು, ನಾಲತವಾಡದ ಪಂಪಾಪತಿ ಶ್ರೀಗಳು, ಆಲಮೇಲದ ರಾಮಚಂದ್ರ ಶ್ರೀಗಳು, ಬೋರಗಿಯ ಮಹಾಲಿಂಗೇಶ್ವರ ಶ್ರೀಗಳು ಮತ್ತು ಕಲಕೇರಿಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು. ಸಾಹಿತಿಗಳಾದ ಮನು ಪತ್ತಾರ ಪ್ರಾಸ್ಥಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಔಚಿತ್ಯವನ್ನು ಅರ್ಥಪೂರ್ಣವಾಗಿ ವಿವರಿಸಿದರು.
ತೆಲಗಿಯ ವಾಮನರಾವ್ ಶ್ರೀಧರ ಪತ್ತಾರ, ವಡವಡಗಿಯ ಗುರುರಾಜ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಗ್ರಾಪಂ ಅಧ್ಯಕ್ಷರಾದ ರಾಜಅಹ್ಮದ ಸಿರಸಗಿ, ಇಂಡಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಕನಕರಾಜ್ ವಡ್ಡರ, ಸುರೇಶಗೌಡ ಪಾಟೀಲ, ಸಿದ್ದು ಬುಳ್ಳಾ, ಲಕ್ಕಪ್ಪ ಬಡಿಗೇರ, ಅಶೋಕಗೌಡ ಪಾಟೀಲ, ವಸಂತ ಬಡಿಗೇರ, ವಿಜಯಪುರದ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಬಾಳು ಗಿರಗಾಂವಕರ, ಉಪಾಧ್ಯಕ್ಷರಾದ ಪ್ರಮೋದ ಬಡಿಗೇರ, ಈರಣ್ಣ ಗುರುಬಾಳಪ್ಪ ಪತ್ತಾರ, ಸೇರಿದಂತೆ ಅನೇಕರು ಇದ್ದರು.
ವಿಶ್ವಕರ್ಮ ಧ್ವಜಾರೋಹಣ
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತವಾಗಿ ಹೋಮ-ಹವನ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಗ್ರಾಮದ ಆರಾಧ್ಯ ದೈವ ಗುರುವೀರಘಂಟೈ ಮಡಿವಾಳೇಶ್ವರರಿಗೆ ಮಂಗಳಾರುತಿ ಸಲ್ಲಿಸಿ ಪೂಜ್ಯರನ್ನು, ಗಣ್ಯಮಾನ್ಯರನ್ನು ನೂರಾರು ಸುಮಂಗಲೆಯರು ಮತ್ತು ಸಮಾಜ ಬಾಂಧವರು ಸೇರಿಕೊಂಡು ಭಾಜಾ ಭಜಂತ್ರಿ ಸಕಲ ವಾದ್ಯ ಮೇಳದೊಂದಿಗೆ ನೂತನ ದೇವಸ್ಥಾನದ ಭೂಮಿ ಪೂಜೆಯ ಸ್ಥಳದಲ್ಲಿ ನಿರ್ಮಿಸಿದ ಭವ್ಯ ವೇದಿಕೆಯತ್ತ ಬಹಳ ಅದ್ದೂರಿಯಾಗಿ ಕರೆತರಲಾಯಿತು. ಧರ್ಮಸಭೆಯಲ್ಲಿ ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಮತ್ತು ಸಾಧಕರಿಗೆ ಗುರು ರಕ್ಷೆನೀಡಿ ಗೌರವಿಸಲಾಯಿತು. ಸಂಜೆ ಕಲಾ ಸಿಂಚನ ಮೆಲೋಡಿಸ್ ವತಿಯಿಂದ ರಸ ಮಂಜರಿ ಕಾರ್ಯಕ್ರಮ ನಡೆಯಿತು ಮತ್ತು ಬೆಳಿಗ್ಗೆಯಿಂದಲೇ ನಿರಂತರ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.

